10:48 AM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ನೀರಾನೆ ದಾಳಿಯಿಂದ ಯುವ ವೈದ್ಯೆ ಡಾ. ಸಮೀಕ್ಷಾ ಸಾವು: ಘಟನೆ ಹಿಂದಿದೆ ಥರ್ಮಲ್‌ ಕ್ಯಾಮೆರಾ ರಹಸ್ಯ

22/03/2026, 22:35

ಶಿವಮೊಗ್ಗ(reporterkarnataka.com): ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಯುವ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ನೀರಾನೆಯ ಭೀಕರ ದಾಳಿಗೆ ಸಿಲುಕಿ ದಾರುಣವಾಗಿ ಪ್ರಾಣ ಬಿಟ್ಟಿರುವ ಘಟನೆಯು ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದೆ. ಡಾ.ಸಮೀಕ್ಷಾ ಅವರನ್ನು ಕಳುಹಿಸಿದ್ದ ಅಧಿಕಾರಿ ಯಾರೆನ್ನುವ ಬಗ್ಗೆ ಪ್ರಶ್ನೆ ಉದ್ಭವವಾಗಿರುವಂತೆಯೇ ಅವರ ಬಳಿ ಇದ್ದ ಥರ್ಮಲ್‌ ಸ್ಕಾನರ್‌ ಕ್ಯಾಮೆರಾ, ಪ್ರಭಾರ ಹಿರಿಯ ವೈದ್ಯ ಡಾ. ಮುರಳಿ ಮೋಹನ್‌ ಅವರದ್ದೆಂಬ ಅಂಶ ಬಹಿರಂಗವಾಗಿದೆ.
ಒಂದೆಡೆ ಡಾ. ಮುರಳಿ ಅವರು, ತಾವು ಹಕ್ಕಿಯೊಂದಕ್ಕೆ ಮಾತ್ರ ಚಿಕಿತ್ಸೆ ನೀಡುವಂತೆ ಹೇಳಿದ್ದಾರೆ. ಆದರೆ, ಅವರದ್ದು ಎನ್ನಲಾದ ಕ್ಯಾಮೆರಾವನ್ನು ಡಾ. ಸಮೀಕ್ಷಾ ಬಳಸಿದ್ದು ಹೇಗೆಂಬ ಪ್ರಶ್ನೆಗೆ ನಿಖರ ತನಿಖೆಯಷ್ಟೇ ಉತ್ತರ ನೀಡಬೇಕಾಗಿದೆ.
ಜತೆಗೆ ಡಾ. ಸಮೀಕ್ಷಾ ಅವರು ಆ ಗರ್ಭಸ್ಥ ನೀರಾನೆಯನ್ನು ಥರ್ಮಲ್ ಕ್ಯಾಮೆರಾದಲ್ಲಿ ಪರೀಕ್ಷೆ ನಡೆಸಿ ವಾಪಸ್ ಬರುವಾಗ ಕಾಲು ಜಾರಿ ಬಿದ್ದಿದ್ದರಿಂದ ಗಾಬರಿಗೊಂಡ ಗರ್ಭಿಣಿ ನೀರಾನೆ ಅವರ ಮೇಲೆ ದಾಳಿ ಮಾಡಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಅದರೆ, ಅಷ್ಟು ತಡರಾತ್ರಿ ಆಕೆಯೊಬ್ಬರನ್ನೇ ಯಾವುದೇ ಸಹಾಯಕರಿಲ್ಲದೆ ಕಳುಹಿಸಿದ ಅಧಿಕಾರಿಗಳ ಕ್ರಮ ಶಂಕಾಸ್ಪದವಾಗಿದೆ ಎಂದು ಮೂಲಗಳು ಹೇಳಿವೆ.
ಇನ್ನೊಂದು ಮೂಲದ ಪ್ರಕಾರ, ಮಾ. 17ರಂದು ಅಂದರೆ, ಘಟನೆ ನಡೆದ (ಮಾ. 19ರ ) ಹಿಂದಿನ ದಿನವೂ ಸಮೀಕ್ಷಾ ಅವರೇ ಅಸಕ್ತಿಯಿಂದ ಗರ್ಭಸ್ಥ ನೀರಾನೆಯ ತಪಾಸಣೆ ನಡೆಸಿದ್ದರು. ಅವರ ಅತ್ಯುತ್ಸಾಹವೇ ಘಟನೆಗೆ ಕಾರಣವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮಾ. 19ರ ಮುಂಜಾನೆ ಅಕೆ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದರು.

*ಏನದು ಉಪಕರಣ?*
ಘಟನೆ ನಡೆದ ಸ್ಥಳದಲ್ಲಿ ನೀರಾನೆ ಇರುವ ಹೊಂಡದ ಪಕ್ಕದಲ್ಲಿ ಬಿದ್ದಿರುವ ಉಪಕರಣದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅದು ಸರ್ಚ್ ಲೈಟ್‌ (ರಾತ್ರಿ ಬೆಳಕಿಗಾಗಿ ಬಳಸುವ) ಉಪಕರಣದಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಆಕೆಯ ಬಳಿ ಇದ್ದುದು ಅದೊಂದು ಮಾತ್ರ ಸಾಧನವೆ? ಯಾಕೆ ಮೃಗಾಲಯದ ಸಿಬ್ಬಂದಿ ಅಕೆಯ ರಕ್ಷಣೆಗೆ ಅಲ್ಲಿ ಹಾಜರಿರಲಿಲ್ಲ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ.
ಕೇವಲ ಒಂದು ವನ್ಯಜೀವಿಯ ಆಕಸ್ಮಿಕ ದಾಳಿ ಎಂದು ಮೇಲ್ನೋಟಕ್ಕೆ ಬಿಂಬಿಸಲಾಗುತ್ತಿದ್ದ ಈ ಪ್ರಕರಣದ ಹಿಂದೆ, ಪ್ರಾಣಿಧಾಮದ ಆಡಳಿತ ಮಂಡಳಿಯ ತೀವ್ರ ನಿರ್ಲಕ್ಷ್ಯ ಹಾಗೂ ಗೊಂದಲಮಯ ನಿರ್ದೇಶನಗಳ ಕರಿನೆರಳು ದಟ್ಟವಾಗಿ ಕಾಣುತ್ತಿದೆ.
ಡಾ. ಸಮೀಕ್ಷಾ ರೆಡ್ಡಿ ಅವರು ತಪಾಸಣೆ ನಡೆಸಿದ್ದರೆನ್ನಲಾದ ನೀರಾನೆ ಹಾಗೂ ಹೊಂಡದ ಎದುರು ಬಿದ್ದಿರುವ ಉಪಕರಣ.

*ಡಾ . ಮುರುಳಿ ಕ್ಯಾಮೆರಾ ಸಮೀಕ್ಷಾ ಕೈಸೇರಿದ್ದು ಹೇಗೆ?*
ದುರಂತದ ರಾತ್ರಿ ನಡೆದ ಬೆಳವಣಿಗೆಗಳೇ ಅತ್ಯಂತ ಸಂಶಯಾಸ್ಪದವಾಗಿವೆ. ಡಾ. ಸಮೀಕ್ಷಾ ಅವರು ಪ್ರಾಣಿಧಾಮದಲ್ಲಿ ಕೇವಲ ‘ಅಪ್ರೆಂಟಿಷಿಪ್’ (ತರಬೇತಿ) ಪಡೆಯುತ್ತಿದ್ದ ಯುವ ವೈದ್ಯೆಯಾಗಿದ್ದರು. ಅತ್ಯಂತ ಆಕ್ರಮಣಕಾರಿಯಾದ, ಅದರಲ್ಲೂ ಎಂಟು ತಿಂಗಳ ಗರ್ಭಿಣಿಯಾಗಿದ್ದ ನೀರಾನೆಯ ಬಳಿ ರಾತ್ರಿ ವೇಳೆ ತೆರಳಿ ಪರೀಕ್ಷೆ ನಡೆಸುವಂತಹ ಯಾವುದೇ ಪೂರ್ವಾನುಭವಾಗಲಿ, ಪರಿಣತಿಯಾಗಲಿ ಅವರಿಗೆ ಇರಲಿಲ್ಲ.
ಈ ಬಗ್ಗೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿರುವ ಹಿರಿಯ ವೈದ್ಯ ಡಾ. ಮುರುಳಿ ಮನೋಹರ್ ಅವರು, “ಅಂದು ರಾತ್ರಿ 8 ಗಂಟೆಗೆ ‘ಸನ್‌ಕಾನಿಯೂರ್’ ಎಂಬ ಪಕ್ಷಿಗೆ ಆ್ಯಂಟಿಬಯೋಟಿಕ್ ಇಂಜೆಕ್ಷನ್ ನೀಡಲು ಮಾತ್ರ ತಾವು ಸೂಚನೆ ನೀಡಿದ್ದೆ. ಆದರೆ ನೀರಾನೆಯ ಬಳಿ ಹೋಗಲು ತಾವು ಯಾವುದೇ ನಿರ್ದೇಶನ ನೀಡಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಘಟನೆ ನಡೆದ ರಾತ್ರಿ ‘ಸನ್‌ಕಾನಿಯೂರ್ʼ ಪಕ್ಷಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಸಮೀಕ್ಷಾ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ವಿಶ್ವ ನೀರಾನೆ ದಿನದ ಸಂದರ್ಭದಲ್ಲಿ ತಮಗೆ ದಾಳಿ ಮಾಡಿದ ನೀರಾನೆ ಮುಂದೆ ತೆಗೆದುಕೊಂಡಿರುವ ಚಿತ್ರ (ಎರಡನೆಯದು) ಇದೆ.
ಇಲ್ಲಿಯೇ ಅತಿ ದೊಡ್ಡ ಪ್ರಶ್ನೆಯೊಂದು ಉದ್ಭವಿಸುತ್ತದೆ. ಪ್ರಾಣಿಧಾಮದ ಕಾರ್ಯನಿರ್ವಾಹಕ ನಿರ್ದೇಶಕ (ಇಡಿ) ವಿ.ಎಂ. ಅಮರಾಕ್ಷರ್ ಅವರು ಹೇಳುವಂತೆ, “ಮೃಗಾಲಯದ ಅಧಿಕೃತ ಬಳಕೆಯಲ್ಲಿ ಅಂತಹ ಯಾವುದೇ ಥರ್ಮಲ್ ಸ್ಕ್ಯಾನಿಂಗ್ ಕ್ಯಾಮೆರಾ ಇಲ್ಲ.” ಹಾಗಾದರೆ, ಸಮೀಕ್ಷಾ ಅವರು ನೀರಾನೆಯ ಗರ್ಭಾವಸ್ಥೆ ಅಥವಾ ಇನ್ಫೆಕ್ಷನ್ ಪರೀಕ್ಷಿಸಲು ಆ ಕ್ಯಾಮೆರಾವನ್ನು ಎಲ್ಲಿಂದ ತಂದರು? ಬಲ್ಲ ಮೂಲಗಳ ಪ್ರಕಾರ, ಆ ಥರ್ಮಲ್ ಕ್ಯಾಮೆರಾ ಡಾ. ಮುರುಳಿ ಅವರಿಗೆ ಸೇರಿದ್ದಾಗಿತ್ತು. ಪಕ್ಷಿಗೆ ಇಂಜೆಕ್ಷನ್ ನೀಡಲು ಬಂದ ಯುವ ವೈದ್ಯೆ, ಹಿರಿಯ ವೈದ್ಯರ ಕ್ಯಾಮೆರಾವನ್ನು ಹಿಡಿದುಕೊಂಡು ತಾವಾಗಿಯೇ ನೀರಾನೆಯ ಆವರಣದೊಳಗೆ ಇಳಿಯಲು ಹೇಗೆ ಸಾಧ್ಯ? ಅವರಿಗೆ ಕ್ಯಾಮೆರಾ ಕೊಟ್ಟು, ಪರೀಕ್ಷೆ ನಡೆಸುವಂತೆ ಸೂಚಿಸಿದವರಾರು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಬಯಲಾಗಬೇಕಿದೆ. ಥರ್ಮಲ್ ಕ್ಯಾಮೆರಾದಲ್ಲಿ ಪರೀಕ್ಷೆ ನಡೆಸಿ ವಾಪಸ್ ಬರುವಾಗ ಕಾಲು ಜಾರಿ ಬಿದ್ದಿದ್ದರಿಂದ, ಗಾಬರಿಗೊಂಡ ಗರ್ಭಿಣಿ ನೀರಾನೆ ಅವರ ಮೇಲೆ ದಾಳಿ ಮಾಡಿದೆ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ.

*ಆಂತರಿಕ ಕಚ್ಚಾಟಗಳಿಗೆ ಬಲಿಯಾಯಿತೇ ಅಮಾಯಕ ಜೀವ?*
ಪ್ರಾಣಿಧಾಮದೊಳಗಿನ ಆಂತರಿಕ ರಾಜಕೀಯದ ಕಮಟು ವಾಸನೆ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ಡಾ. ಮುರುಳಿ ಅವರು ಅಲ್ಲಿನ ಸಿಬ್ಬಂದಿಯೊಂದಿಗಿನ ಭಿನ್ನಾಭಿಪ್ರಾಯ ಹಾಗೂ ಸಂವಹನ ಸಮಸ್ಯೆಯಿಂದ ಬೇಸತ್ತು ಕಳೆದ ನವೆಂಬರ್‌ನಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೂ, ಹೊಸ ವೈದ್ಯರಿಗೆ ತರಬೇತಿ ನೀಡುವ ಉದ್ದೇಶದಿಂದ ಮಾತ್ರ ಅಲ್ಲಿ ಮುಂದುವರಿದಿದ್ದರು. ಪರಸ್ಪರ ಹಗ್ಗ-ಜಗ್ಗಾಟದ ನಡುವೆ, ಆಡಳಿತ ಮಂಡಳಿಯ ನಿರ್ದೇಶಕರು “ಅತಿಯಾದ ಕಾಳಜಿಯಿಂದ, ತಮ್ಮದಲ್ಲದ ಜವಾಬ್ದಾರಿಯನ್ನು ನಿರ್ವಹಿಸಲು ಹೋಗಿ ಯುವ ವೈದ್ಯೆ ಪ್ರಾಣ ಕಳೆದುಕೊಂಡರು” ಎಂದು ಹೇಳಿಕೆ ನೀಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

*ನಿರ್ಲಕ್ಷ್ಯದ ಪರಮಾವಧಿ, ಕಠಿಣ ಕ್ರಮದ ಭರವಸೆ*
ಈ ಇಡೀ ಪ್ರಕರಣವು ಆಡಳಿತ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ರಾತ್ರಿ ವೇಳೆ ನೀರಾನೆಯ ಬಳಿ ಹೋಗಿದ್ದೇ ತಪ್ಪು, ಮತ್ತು ಅವರನ್ನು ಕಳುಹಿಸಿದ್ದು ಅದಕ್ಕಿಂತ ದೊಡ್ಡ ತಪ್ಪು ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಬ್ಬದ ದಿನವಾಗಿದ್ದರಿಂದ ಸಂಜೆ 5 ಗಂಟೆಗೇ ಕೆಲಸ ಮುಗಿಸಿ ಊರಿಗೆ ತೆರಳಿದ್ದ ಡಾ. ಮುರುಳಿ, ಪಿಜಿಯಲ್ಲಿದ್ದ ಸಮೀಕ್ಷಾ ಅವರನ್ನು ರಾತ್ರಿ ಕರೆತರಲು ಮೃಗಾಲಯದ ಆಡಳಿತ ಮಂಡಳಿಯೇ ವಾಹನ ವ್ಯವಸ್ಥೆ ಮಾಡಿದ್ದರು. ಇಷ್ಟೆಲ್ಲಾ ವ್ಯವಸ್ಥೆ ಮಾಡಿದ ಮೇಲೆ, ಅಲ್ಲಿ ಸೂಕ್ತ ಭದ್ರತಾ ಸಿಬ್ಬಂದಿ ಏಕಿರಲಿಲ್ಲ ಎಂಬುದು ನಿಗೂಢ.
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಮೃಗಾಲಯ ಪ್ರಾಧಿಕಾರದ (ZAK) ಅಧ್ಯಕ್ಷ ರಂಗಸ್ವಾಮಿ ಆರಾಧ್ಯ ಅವರು, ಇದೊಂದು ‘ಅಚಾತುರ್ಯ ಮತ್ತು ಬೇಜವಾಬ್ದಾರಿಯ ಪರಮಾವಧಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದುರಂತಕ್ಕೆ ಕಾರಣರಾದ ಯಾವುದೇ ಅಧಿಕಾರಿಯನ್ನು ಸುಮ್ಮನೆ ಬಿಡುವುದಿಲ್ಲ, ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ. ಯುವ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಲು ಉನ್ನತ ಮಟ್ಟದ ಹಾಗೂ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು