ಇತ್ತೀಚಿನ ಸುದ್ದಿ
ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ ಶಿಕ್ಷೆ
17/04/2026, 20:48
*ಕೋರ್ಟ್ ತೀರ್ಪಿಗೆ ಕಣ್ಣೀರಿಟ್ಟ ಅಪರಾಧಿಗಳು! ಅತ್ತ ಯೋಗೀಶ್ ಗೌಡ ಮಕ್ಕಳಿಗೂ ಸಿಕ್ತು ಪರಿಹಾರ*
ಬೆಂಗಳೂರು(reporterkarnataka.com): ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಕೇಸ್‌ನ ತೀರ್ಪು ಹೊರಬಿದ್ದಿದೆ. ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಈ ಕೇಸ್‌ನ ತೀರ್ಪು ಹೊರಬರಲು ಬರೋಬ್ಬರಿ 1 ದಶಕ ಅಂದ್ರೆ 10 ವರ್ಷ ಬೇಕಾಯ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್ ಮಾಜಿ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.


ಇನ್ನು ಹತ್ಯೆಯಾಗಿರೋ ಯೋಗೇಶ್ ಗೌಡ ಮಕ್ಕಳಿಗೆ ಪರಿಹಾರ ಧನ ನೀಡುವಂತೆ ಇದೇ ಸಂದರ್ಭದಲ್ಲಿ ಕೋರ್ಟ್ ಆದೇಶಿಸಿದೆ.
*ಯೋಗೇಶ್ ಗೌಡ ಮಕ್ಕಳಿಗೆ ಪರಿಹಾರ ಧನ ನೀಡಿ*
ಹತ್ಯೆಯಾದ ಯೋಗೇಶ್ ಗೌಡ ಮಕ್ಕಳಿಗೆ ಪರಿಹಾರ ಧನ ನೀಡುವಂತೆ ಜನಪ್ರತಿನಿಧಿಗಳ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. 16 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ಯೋಗೇಶ್ ಗೌಡ ಮಕ್ಕಳಿಗೆ ನೀಡಬೇಕು ಅಂತ ಆದೇಶಿಸಿರೋ ಕೋರ್ಟ, ಈ ಹಣವನ್ನು ಯೋಗೇಶ್ ಗೌಡ ಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಿದೆ.
*ಬಟ್ಟೆ ಬದಲಾಯಿಸಲು ಅವಕಾಶ ನೀಡಿ*
ಇನ್ನು ಇತ್ತ ಜೀವಾವಧಿ ಶಿಕ್ಷೆ ಘೋಷಣೆ ಆಗುತ್ತಿದ್ದಂತೆ ವಿನಯ್ ಕುಲಕರ್ಣಿ ಕಂಗೆಟ್ಟಿದ್ದಾರೆ. ತಮಗೆ ಬಟ್ಟೆ ಬದಲಾಯಿಸಲು ಅವಕಾಶ ನೀಡುವಂತೆ ಕೋರಿದ್ದಾರೆ. ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿ ಇದ್ದಾರೆ, ಹೀಗಾಗಿ ಬಟ್ಟೆ ಬದಲಿಸಲು ಅವಕಾಶ ನೀಡಬೇಕು ಅಂತ ವಿನಯ್ ಕುಲಕರ್ಣಿ ಪರ ವಕೀಲ ಸುನೀಲ್ ಕೋರ್ಟ್‌ಗೆ ಮನವಿ ಮಾಡಿದ್ರು. ಅವರ ಮನವಿ ಆಲಿಸಿದ ನ್ಯಾಯಪೀಠ, ಜೈಲು ಮ್ಯಾನುಯಲ್ ಪ್ರಕಾರ ಅವಕಾಶ ಕಲ್ಪಿಸಲು ಸೂಚನೆ ನೀಡಿದೆ.
*ಶಿಕ್ಷೆ ಪ್ರಕಟವಾಗ್ತಿದ್ದಂತೆ ಕಣ್ಣೀರು*
ಮತ್ತೊಂದೆಡೆ ಶಿಕ್ಷೆ ಪ್ರಮಾಣ ಪ್ರಕಟ ಆಗ್ತಿದ್ದಂತೆ ಎಲ್ಲಾ ದೋಷಿಗಳ ಕುಟುಂಬಸ್ಥರ ಕಣ್ಣೀರು ಹಾಕಿದ್ರು. ಕೋರ್ಟ್ ಹಾಲ್ ಬಳಿ ಅಪರಾಧಿಗಳನ್ನು ತಬ್ಬಿಕೊಂಡು ಕಣ್ಣೀರು ಇಟ್ಟರು. ಇತ್ತ ತಮ್ಮ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ತಬ್ಬಿಕೊಂಡು ಅಪರಾಧಿಗಳೂ ಕೂಡ ಕಣ್ಣೀರು ಇಟ್ರು. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ರು.
*ಕೋರ್ಟ್ ತೀರ್ಪು ಸ್ವಾಗತಿಸಿದ ಹೋರಾಟಗಾರ*
ಅತ್ತ ಧಾರವಾಡದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ, ಇದೊಂದು ಐತಿಹಾಸಿಕ ತೀರ್ಪು ಎಂದರು. ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿಗೆ ಸ್ವಾಗತ ಕೋರಿದ ಅವರು, ವಿನಯ್ ಕುಲಕರ್ಣಿ ಸೇರಿ ಇತರರಿಗೆ ಜೀವಾವಧಿ ಶಿಕ್ಷೆ ಆಗಿದೆ. ಎಲ್ಲರಿಗೂ ಒಂದು ಪಾಠ ಆಗಲಿ ಅಂತ ನಾವು ಹೋರಾಟ ಮಾಡುದ್ದೆವು ಎಂದಿದ್ದಾರೆ.
*ಸಿಬಿಐಗೆ ಕೊಡುವಂತೆ ಹೋರಾಟ ಮಾಡಿದ್ದೆವು*
ಸಿಬಿಐಗೆ ಕೊಡುವಂತೆ ಹೋರಾಟ ಮಾಡಿದ್ದೆವು. ಅಂದಿನ ಸಿಎಂ ಯಡಿಯೂರಪ್ಪ ಸಿಬಿಐ ತನಿಖೆಗೆ ಕೊಟ್ಟಿದ್ದರು. ಈ ತೀರ್ಪಿನಿಂದ ಹಿಗ್ಗೋದೂ ಇಲ್ಲ, ಕುಗ್ಗೋದೂ ಇಲ್ಲ. ಸಿಬಿಐ ಅಧಿಕಾರಿಗಳು ಸತ್ಯಾಂಶ ಹೊರ ತಂದಿದ್ದಾರೆ. ನ್ಯಾಯಾಲದಿಂದ ಐತಿಹಾಸಿಕ ತೀರ್ಪು ಬಂದಿರೋದು ಸಮಾಧಾನ ತಂದಿದೆ ಎಂದರು.
*ಒಂದು ಹಂತದ ಹೋರಾಟ ಮುಗಿದಿದೆ*
ವಿನಯ್ ಕುಲಕರ್ಣಿ ತಾವು ಸಿಕ್ಕಿಕೊಂಡ ಮೇಲೆ ಬೇರೆ ಬೇರೆ ರೀತಿ ಮಾತನಾಡುತ್ತಿದ್ದಾರೆ. ವಿನಯ್ ಕುಲಕರ್ಣಿಗೆ ಎದೆಗಾರಿಕೆಯೇ ಇಲ್ಲ. ಹೀಗಾಗಿ ರಾಜಕೀಯ ಷಡ್ಯಂತ್ರ ಅಂತ ಆರೋಪಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಮೇಲೂ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ. ಪರಿಹಾರಕ್ಕೂ ನ್ಯಾಯಾಲಯ ಆದೇಶಿಸಿದೆ.













