10:02 PM Monday25 - May 2026
ಬ್ರೇಕಿಂಗ್ ನ್ಯೂಸ್
ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:…

ಇತ್ತೀಚಿನ ಸುದ್ದಿ

ದಿನಕ್ಕೊಂದು ಇಂಗ್ಲಿಷ್ ಪದ ಬಿಡಿ: ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ

30/07/2025, 23:41

ಗೋಕರ್ಣ(reporterkarnataka.com): ದಿನಕ್ಕೊಂದು ಇಂಗ್ಲಿಷ್ ಪದವನ್ನು ಬಿಡುವ ಮೂಲಕ ಸ್ವಭಾಷೆಯ ಶುದ್ಧೀಕರಣದ ಪ್ರಯತ್ನ ಮಾಡೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಸಲಹೆ ಮಾಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 21ನೇ ದಿನವಾದ ಬುಧವಾರ ಹಟ್ಟಿಯಂಗಡಿ ಶ್ರೀ ಸಿದಿವಿನಾಯಕ ದೇವಸ್ಥಾನದ ಧರ್ಮಕರ್ತರಾದ ಬಾಲಚಂದ್ರ ಭಟ್ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಇಂಗ್ಲಿಷ್ ವಾಸ್ತವವಾಗಿ ಶುದ್ಧಭಾಷೆಯಲ್ಲ; ಒಂದು ರೀತಿಯಲ್ಲಿ ಕಲುಷಿತ ಭಾಷೆ ಎಂದರೆ ತಪ್ಪಲ್ಲ. ಏಕೆಂದರೆ ಇಂಗ್ಲಿಷ್‍ನಲ್ಲಿ ಹಲವು ವರ್ಣಗಳೇ ಇಲ್ಲ. ಕನ್ನಡ ವರ್ಣಮಾಲೆಯಲ್ಲಿ 52 ಅಕ್ಷರಗಳಿದ್ದರೆ ಇಂಗ್ಲಿಷ್‍ನಲ್ಲಿ ಕೇವಲ 26 ಅಕ್ಷರಗಳಿವೆ. ನಮ್ಮ ಸಂಸ್ಕøತಿ- ಪರಂಪರೆಗೆ ಒಗ್ಗುವ ಭಾಷೆ ಕನ್ನಡ. ಆದರೆ ಇಂದು ನಮ್ಮ ಭಾಷೆಯ ಹಲವು ಪದಗಳನ್ನು ನಾವು ಮರೆತು ಇಂಗ್ಲಿಷ್ ಪದಗಳ ಕಲಬೆರಕೆ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಇತರ ಪದಗಳನ್ನು ಸೇರಿಸಿ ಕನ್ನಡವನ್ನು ಕಲುಷಿತಗೊಳಿಸುವುದು ಬೇಡ; ಕನ್ನಡದ ಶುದ್ಧತೆ ಉಳಿಯಬೇಕು. ಇಲ್ಲದಿದ್ದರೆ ಮುಂದಿನ ಜನಾಂಗಕ್ಕೆ ನಾವು ಕಲುಷಿತ ಭಾಷೆ ಬಿಟ್ಟುಹೋಗಬೇಕಾಗುತ್ತದೆ. ಆದ್ದರಿಂದ ನಮ್ಮ ಭಾಷೆಯಲ್ಲಿ ಸೇರಿಕೊಂಡಿರುವ ಕನಿಷ್ಠ ಒಂದು ಇಂಗ್ಲಿಷ್ ಪದವನ್ನಾದರೂ ಪ್ರತಿ ದಿನ ಬಿಡುವ ಪ್ರತಿಜ್ಞೆ ಮಾಡೋಣ ಎಂದು ಸೂಚಿಸಿದರು.
ಇಂದು ಸೋಪು ಎಂಬ ಸಾಮಾನ್ಯ ಬಳಕೆಯಲ್ಲಿರುವ ಆಂಗ್ಲಪದವನ್ನು ಬಿಡೋಣ. ಕನ್ನಡದಲ್ಲಿ ಅಪರೂಪಕ್ಕೆ ಸಾಬೂನು ಪದ ಬಳಸುತ್ತೇವೆ. ಅದು ಕೂಡಾ ಮೂಲತಃ ಕನ್ನಡ ಶಬ್ದವಲ್ಲ; ಅದು ಪರ್ಷಿಯನ್ ಭಾಷೆಯಿಂದ ಬಂದದ್ದು. ಮೂಲವಾಗಿ ಲ್ಯಾಟಿನ್ ಭಾಷೆಯ ಸ್ಯಾಪೊ, ಕನ್ನಡದಲ್ಲಿ ಸೋಪು ಎಂದು ಬಳಕೆಯಾಗುತ್ತಿದೆ. ಇದಕ್ಕೆ ತಿಳಿಗನ್ನಡದಲ್ಲಿ ಸಬಕಾರ ಎಂಬ ಪರ್ಯಾಯ ಪದ ಇದೆ ಎಂದು ವಿವರಿಸಿದರು.
ತಕ್ಷಣಕ್ಕೆ ಸೋಪು ಬದಲು ಸಾಬೂನು ಪದ ಬಳಸಿದರೂ ತಪ್ಪಲ್ಲ; ಆದರೆ ಸಬಕಾರ ಅಥವಾ ನೊರೆಬಿಲ್ಲೆ ಎನ್ನುವುದು ಕನ್ನಡದ ಒಳ್ಳೆಯ ಶಬ್ದ. ಸಂಸ್ಕøತದಲ್ಲಿ ಮಾರ್ಜಕ ಎಂಬ ಬಳಕೆ ಇದೆ. ನಮ್ಮ ಹಿರಿಯರು ಬಳಸುತ್ತಿದ್ದ ಇಂಥ ಪದವನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು.
ಸೋಪು ಶಬ್ದ ಹೇಗೆ ಪಾಶ್ಚಾತ್ಯದ್ದೋ ಸೋಪಿನ ಸಂಸ್ಕೃತಿಯೂ ಪಾಶ್ಚಾತ್ಯ. ಭಾರತದಲ್ಲಿ ಅನಾದಿಕಾಲದಿಂದಲೂ ಸ್ನಾನಚೂರ್ಣದ ಬಳಕೆ ಕಾಣುತ್ತೇವೆ. ಅದು ವೈಜ್ಞಾನಿಕ ಕೂಡಾ. ಸೋಪಿನ ಕಣಗಳು ಚರ್ಮದ ರಂಧ್ರವನ್ನು ಮುಚ್ಚಿ ತ್ವಚೆಯ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ಆದರೆ ಭಾರತದಲ್ಲಿ ಬಳಕೆಯಲ್ಲಿದ್ದ ಸೀಗೆಕಾಯಿಯಂಥ ಒರಟು ಸ್ನಾನಚೂರ್ಣ ಹೆಚ್ಚು ಆರೋಗ್ಯಕಾರಿ ಎಂದು ವಿಶ್ಲೇಷಿಸಿದರು.
ಹಿಂದೆ ದೇಹಶುದ್ಧಿಗೆ ಮಣ್ಣನ್ನೂ ಬಳಸಲಾಗುತ್ತಿತ್ತು. ಆದರೆ ಮಣ್ಣನ್ನು ಇಂದು ಕೊಳಕು ಎಂದು ಪರಿಗಣಿಸಲಾಗುತ್ತಿದೆ. ಮಣ್ಣಿನಿಂದಲೇ ಹುಟ್ಟಿ ಮಣ್ಣಿನಲ್ಲೇ ಬೆಳೆದು ಮಣ್ಣನ್ನೇ ಸೇರುವ ನಾವು ಮಣ್ಣನ್ನು ಕೊಳಕು ಎಂದು ಪರಿಗಣಿಸುವ ಹಂತಕ್ಕೆ ಬಂದಿದ್ದೇವೆ. ಪಂಚಭೂತಗಳಿಂದ ಮಾಡಲ್ಪಟ್ಟ ದೇಹದ ಶುದ್ಧಿಗೂ ಮಣ್ಣು, ನೀರು, ಅಗ್ನಿ, ಗಾಳಿ ಒಳ್ಳೆಯದು. ಆದ್ದರಿಂದ ಕ್ರಮೇಣ ಸೋಪನ್ನೇ ಬಿಡೋಣ; ಮೊದಲ ಹಂತದಲ್ಲಿ ಆ ಪದವನ್ನಾದರೂ ಬಿಡೋಣ ಎಂದು ಸಲಹೆ ಮಾಡಿದರು.
ವಿವಿವಿ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯ ತಂಡದ ಜಿ.ವಿ.ಹೆಗಡೆ, ಶ್ರೀಪರಿವಾರದ ರಾಘವೇಂದ್ರ ಮಧ್ಯಸ್ಥ, ಸುಚೇತನ ಶಾಸ್ತ್ರಿಗಳು ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು