8:03 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ವಿ.ಬಾಡಗ ಗ್ರಾಮ | ಕ್ರೀಡಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಪೊನ್ನಣ್ಣ

15/06/2026, 22:11

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ವಿರಾಜಪೇಟೆ ತಾಲ್ಲೂಕಿನ ವಿ.ಬಾಡಗ ಬಳಿ ನಿರ್ಮಾಣವಾಗುತ್ತಿರುವ ‘ಕ್ರೀಡಾ ತರಬೇತಿ ಕೇಂದ್ರ’ದ ಆಡಳಿತ ಕಟ್ಟಡ ಕಾಮಗಾರಿಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಸುಮಾರು 11 ಎಕರೆ ಜಾಗದಲ್ಲಿ ಅಥ್ಲೆಟಿಕ್ ಮಾದರಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕ್ರೀಡಾ ತರಬೇತಿ ಕೇಂದ್ರದ ಆಡಳಿತ ಭವನ ಜತೆಗೆ ಇತರೆ ಕಾಮಗಾರಿಯ ಜಾಗವನ್ನು ಶಾಸಕರು ವೀಕ್ಷಿಸಿದರು.
ಸುಮಾರು 45 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಕ್ರೀಡಾ ತರಬೇತಿ ಕೇಂದ್ರ ವ್ಯಾಪ್ತಿಯಲ್ಲಿ ಪ್ರಥಮ ಹಂತದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಭವನ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.
ಆಡಳಿತ ಭವನದಲ್ಲಿ ನೆಲಮಹಡಿ ಹಾಗೂ ಮೊದಲ ಮಹಡಿ ಇರಲಿದ್ದು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ತರಬೇತಿ ಕೇಂದ್ರಗಳು ನಿರ್ಮಾಣವಾಗಲಿದೆ. ಒಳಾಂಗಣದಲ್ಲಿ ಶೆಟಲ್ ಬ್ಯಾಡಿಮಿಂಟನ್, ಟೇಬಲ್ ಟೆನ್ನಿಸ್, ಸ್ಕ್ವಾಷ್, ಜಿಮ್ಮು, ಹೊರಾಂಗಣದಲ್ಲಿ ಹಾಕಿ ಟರ್ಪ್, ಈಜುಕೊಳ, ಕ್ರಿಕೆಟ್, ವಾಲಿಬಾಲ್, ಫೂಟ್ ಬಾಲ್ ಹೀಗೆ ವಿವಿಧ ರೀತಿಯ ಕ್ರೀಡೆಗೆ ಸಂಬಂಧಿಸಿದಂತೆ ಕ್ರೀಡಾ ತರಬೇತಿ ಕೇಂದ್ರ ಒಳಗೊಂಡಿದೆ.
ಆಡಳಿತ ಭವನ ನಿರ್ಮಾಣದಲ್ಲಿ ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ಕಚೇರಿ ಜೊತೆಗೆ ಒಳಾಂಗಣ ಕ್ರೀಡಾ ಚಟುವಟಿಕೆಯ ತರಬೇತಿ ಕೇಂದ್ರಗಳು ನಿರ್ಮಾಣವಾಗಲಿದೆ.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ. ಟೆನ್ನಿಸ್, ಜಿಮ್ಮು, ಹಾಕಿ ಟರ್ಪ್, ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ, ಟೇಬಲ್ ಟೆನ್ನಿಸ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ, ವೈದ್ಯಕೀಯ ವಿಭಾಗ ಸೇರಿದಂತೆ ಒಂದು ಸುಸಜ್ಜಿತ ಅಂತರರಾಷ್ಟ್ರೀಯ ಮಾದರಿಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಕಾಮಗಾರಿಗಳು ಹಂತ ಹಂತವಾಗಿ ನಿರ್ಮಾಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕ್ರೀಡಾ ತರಬೇತಿ ಕೇಂದ್ರದಲ್ಲಿ 50 ಬಾಲಕರಿಗೆ ಮತ್ತು 50 ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಾಣವಾಗಲಿದೆ. ಹೆಚ್ಚು ಬೇಡಿಕೆ ಇದ್ದಲ್ಲಿ ಸಂಖ್ಯೆ ಹೆಚ್ಚಿಸಲಾಗುವುದು. ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಸರ್ಕಾರದ ನಿಯಮದಂತೆ ಎಲ್ಲಾ ವರ್ಗದವರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹೇಳಿದರು.
ಈಗಾಗಲೇ ಮುಖ್ಯಮಂತ್ರಿ ಅವರು ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಹಣ ಬಿಡುಗಡೆಯಾಗಲಿದೆ. ಸದ್ಯ ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್ ಅವರಿಂದ ಅನುದಾನ ಬಿಡುಗಡೆಯಾಗಿದ್ದು, ಆಡಳಿತ ಭವನ ನಿರ್ಮಾಣ ಆಗುತ್ತಿದೆ ಎಂದು ಶಾಸಕರು ವಿವರಿಸಿದರು.
ಮುಂದಿನ ಎರಡು ವರ್ಷದಲ್ಲಿ ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ಆರಂಭವಾಗಲಿದೆ. ಹಂತ ಹಂತವಾಗಿ ಕಾಮಗಾರಿಗಳು ನಡೆಯಲಿವೆ ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.
ಒಟ್ಟಾರೆ ಸುಮಾರು 45 ಕೋಟಿ ರೂ. ವೆಚ್ಚದ ಯೋಜನಾ ಕಾಮಗಾರಿಯಾಗಿದ್ದು, ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು.
ವಿ.ಬಾಡಗ ಗ್ರಾಮದ ಬಳಿ ಗುರುತಿಸಲಾಗಿರುವ ಜಾಗದ ಸುತ್ತ ಬೆಟ್ಟ ಗುಡ್ಡಗಳು ಹಚ್ಚಹಸುರಿನಿಂದ ಕೂಡಿದ್ದು, ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.

*ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ:* ಕಾಡಾನೆ ಹಾವಳಿ ನಿಯಂತ್ರಣ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರಾದ ಎ.ಎಸ್.ಪೊನ್ನಣ ಅವರು ಕಾಡಾನೆ ಹಾವಳಿ ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದು, ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂದರು.
ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾಡಾನೆಗಳ ನಿಯಂತ್ರಣ ಸಂಬಂಧ ಹಲವು ಯೋಜನೆ ರೂಪಿಸಲಾಗಿದೆ. ಆನೆಕಂದಕ, ತಂತಿಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಹೀಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಿದ್ದು, ಪಕ್ಷಾತೀತವಾಗಿ ಎಲ್ಲರೂ ಜೊತೆಗೂಡಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಹೇಳಿದರು.
ರಸ್ತೆ ಕಾಮಗಾರಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು ಹಣ ನೀಡಿದರೂ ಸಹ ಟಾರು ಸಿಗುತ್ತಿಲ್ಲ. ಯುದ್ದದಿಂದಾಗಿ ಜನರು ತತ್ತರಿಸುವಂತಾಗಿದೆ. ಇಂಧನ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ವ್ಯವಸಾಯ ಆಧಾರಿತ ಜಿಲ್ಲೆಯಾದ ಕೊಡಗು ಟ್ರ್ಯಾಕ್ಟರ್ ಮತ್ತು ಟಿಲ್ಲರ್‍ಗಳಿಗೆ ಇಂಧನ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಆಗಿದೆ. ಆದರೆ ಟಾರಿನ ತೊಂದರೆಯಿಂದ ರಸ್ತೆ ಕಾಮಗಾರಿಗಳು ನಿಂತಿವೆ. ದೇಶದ ನಾಗರಿಕರ ರಕ್ಷಣೆ ಪ್ರತಿಯೊಬ್ಬರ ಆದ್ಯತೆ ಆಗಬೇಕು ಎಂದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕಾಳೇಮಾಡ ಪ್ರಶಾಂತ್, ಸ್ಥಳೀಯರಾದ ಕಂಜಿತಂಡ ಗಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾವೇರಪ್ಪ, ಕೊಲ್ಲೀರ ಬೋಪಣ್ಣ, ಉಮೇಶ್ ಕೇಚಮಯ್ಯ, ಗಿರೀಶ್ ಸುಂದರ, ಕೋಲತಂಡ ರಘು ಮಾಚಯ್ಯ, ಸೂರಜ್ ಹೊಸೂರು, ಕೇಚಮಾಡ ಸಿದ್ದು ನಾಚಪ್ಪ, ಭಟ್ಟಕಾಳಂಡ ರಾಜ ಇತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು