ಇತ್ತೀಚಿನ ಸುದ್ದಿ
ತುಂಬೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ
19/02/2026, 14:03
ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತುಂಬೆ ಶಾಖೆಯ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರವು ದ.ಕ. ಜಿಲ್ಲಾ ಪಂಚಯತ್ ಹಿರಿಯ ಪ್ರಾಥಮಿಕ ಶಾಲೆ ತುಂಬೆಯಲ್ಲಿ ನಡೆಯಿತು.
ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ, ತುಂಬೆ ಸರಕಾರಿ ಶಾಲಾಭಿವೃದ್ದಿ ಸಮಿತಿ, ಭಾಗ್ಯೋದಯ ಮಿತ್ರ ಕಲಾ ವೃಂದ ರಿ. ತುಂಬೆ , ಆಶೀರ್ವಾದ ಸೇವಾ ಸಂಘ ಮತ್ತು ಮಹಿಳಾ ಸೇವಾ ಸಂಘ ತುಂಬೆ ಯುವ ಶಕ್ತಿ, ಮಜಿ-ತುಂಬೆ ಹಾಗೂ ಶ್ರೀ ಪಿಲಿಚಂಡಿ ತಾಯೇಶ್ವರಿ ಸೇವಾ ಸಮಿತಿ, ತಂಜಕರಿಯ, ತುಂಬೆ ಇವರ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಉದ್ಘಾಟಿಸಿ ಮಾತನಾಡಿ “ಸಮಾಜದ ಆರೋಗ್ಯದ ಸದುದ್ದೇಶವನ್ನು ಇಟ್ಟುಕೊಂಡು ಆತ್ಮಶಕ್ತಿ ವಿವಿಧೋದ್ದೆಶ ಸಹಕಾರಿ ಸಂಘವು ನಿರಂತರವಾಗಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೊಳಾರ್ ಅವರ ಮುಂದಾಳತ್ವದಲ್ಲಿ ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರಗಳು ಹಾಗೂ ಇತರ ಸಮಾಜ ಮುಖಿ ಕಾರ್ಯಗಳು ಶ್ಲಾಘನೀಯವಾಗಿದೆ. ಈ ವೈದ್ಯಕೀಯ ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳಿ” ತಿಳಿಸಿದರು. ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ , ದೇರಳಕಟ್ಟೆ ಮಂಗಳೂರು ಇದರ ವೈದ್ಯಾಧಿಕಾರಿಯಾದ ಡಾ. ಮಂಜುಶ್ರೀ ಅವರು “ರಕ್ತದಾನ ನೀಡುವುದರ ಮಹತ್ವ”ವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೊಳಾರ್ ರವರು ಮಾತನಾಡಿ “ಯಾವುದೇ ಕಾಯಿಲೆಯ ಬಗ್ಗೆ ಕೊನೆಯ ಹಂತದಲ್ಲಿ ತಿಳಿಯುವ ಬದಲು ಇಂತಹ ಶಿಬಿರದಲ್ಲಿ ಭಾಗವಹಿಸಿ, ಪರೀಕ್ಷೆಗಳನ್ನು ಮಾಡುವ ಮೂಲಕ ಮುಂಚಿತವಾಗಿ ತಿಳಿಯಬಹುದು. ಪ್ರಸ್ತುತ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಹಣವೇ ಮುಖ್ಯವಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ. ಆಗಮಿಸಿದ ಎಲ್ಲಾ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿ, ೧೦೨ನೇ ಉಚಿತ ವೈದ್ಯಕೀಯ ಶಿಬಿರವನ್ನು ಯಶಸ್ವಿ ಗೊಳಿಸಲು ಕೈ ಜೋಡಿಸಿರುವ ಸಂಘ ಸಂಸ್ಥೆಗಳಿಗೆ ಕೃತಜ್ಞತೆಯನ್ನು ತಿಳಿಸಿದರು.
ಸಂಘದ ನಿರ್ದೇಶಕರಾದ ಶ್ರೀ ಗೋಪಾಲ್ ಎಂ. , ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಕುಲಾಲ ಸೇವಾ ಸಂಘದ ಗೌರವ ಸಲಹೆಗಾರರಾದ ಶ್ರೀ ಸೇಸಪ್ಪ ಮಾಸ್ಟರ್ , ತುಂಬೆ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಶ್ರೀ ಗಣೇಶ್ ಸಾಲಿಯಾನ್ , ತಾಲೂಕು ಪಂಚಾಯತ್‌ನ ನಿಕಟ ಪೂರ್ವ ಸದಸ್ಯರಾದ ಶ್ರೀ ಗಣೇಶ್ ಸುವರ್ಣ , ಶಾಲಾಭಿವೃದ್ಢಿ ಸಮಿತಿ ತುಂಬೆ ಇದರ ಅಧ್ಯಕ್ಷರಾದ ಶ್ರೀ ಸುದೀಪ್ ಮುದಲ್ಮೆ, ಭಾಗ್ಯೋದಯ ಮಿತ್ರ ಕಲಾ ವೃಂದ (ರಿ.) ತುಂಬೆ ಇದರ ಅಧ್ಯಕ್ಷರಾದ ಶ್ರೀ ಚರಣ್ , ಯುವಶಕ್ತಿ ಮಜಿ ಇದರ ಶ್ರೀ ರಂಜನ್, ಶ್ರೀ ಪಿಲಿಚಂಡಿ ತಾಯೇಶ್ವರಿ ಸೇವಾ ಸಮಿತಿ ತಂಜಕರಿಯ ತುಂಬೆ ಇದರ ಅಧ್ಯಕ್ಷರಾದ ಶ್ರೀ ಯೋಗೀಶ್ ಪೂಜಾರಿ, ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ , ದೇರಳಕಟ್ಟೆ ಮಂಗಳೂರು ಇದರ ವೈಧ್ಯಾಧಿಕಾರಿಯಾದ ಡಾ. ಪ್ರತ್ಯುಷಾ, ಡಾ. ಶಮ್ಲಿನ್ ಜೋಸೆಪ್, ಕುಲಾಲ್ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು.
150ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಲಾಯಿತು. ಆತ್ಮಶಕ್ತಿ ವಿವಿಧೋದ್ದೆಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ಶ್ರೀಮತಿ ಸೌಮ್ಯಲತಾ ಅವರು ಸ್ವಾಗತಿಸಿ, ಕುಲಾಲ ಸೇವಾ ಸಂಘದ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ಅವರು ವಂದಿಸಿ, ಶಾಖಾಧಿಕಾರಿ ಶ್ರೀಮತಿ ಧನಲಕ್ಷ್ಮೀ ಅವರು ಕಾರ್ಯಕ್ರಮ ನಿರೂಪಿಸಿದರು.














