ಇತ್ತೀಚಿನ ಸುದ್ದಿ
Fly91 ವಿಮಾನದಲ್ಲಿ ತಾಂತ್ರಿಕ ದೋಷ: ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ತಪ್ಪಿದ ಮಹಾದುರಂತ
20/04/2026, 11:44
ಹುಬ್ಬಳ್ಳಿ(reporterkarnataka.com): ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly91 ವಿಮಾನವು ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡ್ ಆಗಲು ವಿಫಲವಾಯಿತು. ಸುಮಾರು ನಾಲ್ಕು ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ವಿಮಾನ, ಅಂತಿಮವಾಗಿ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಹಾದುರಂತವೊಂದು ತಪ್ಪಿದ್ದು, ನೂರಾರು ಪ್ರಯಾಣಿಕರು ಬದುಕುಳಿದಿದ್ದಾರೆ. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಸುಮಾರು ನಾಲ್ಕು ಗಂಟೆಗಳ ಆಕಾಶದಲ್ಲಿ ಸುತ್ತಿದೆ. ಕೊನೆಗೆ ವಿಮಾನ ಬೆಂಗಳೂರಿನ ಏರ್ಪೋಟ್‌ನಲ್ಲಿ ಸಂಜೆ 7.30ಕ್ಕೆ ಲ್ಯಾಂಡ್ ಆಗಿದೆ.


ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly91 ಏರ್ ಲೈನ್ಸ್ IC3401 (ATRTURBOPROP AT7) ನಿಗದಿಯಂತೆ ಸಂಜೆ 4.30ಕ್ಕೆ ಲ್ಯಾಂಡ್ ಆಗಬೇಕಿತ್ತು. ವಿಮಾನದಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡ ಹಿನ್ನೆಲೆ ಮುಂಡಗೋಡ, ದಾವಣಗೆರೆ , ಶಿವಮೊಗ್ಗ ಆಗಸದಲ್ಲಿಯೇ ಸುತ್ತಾಡಿದೆ. ಇದೇ ವೇಳೆ ವಿಮಾನ ಪೈಲಟ್‌ನ ನಿಯಂತ್ರಣ ಕಳೆದುಕೊಂಡಿತ್ತು ಎಂಬ ಮಾತುಗಳು ಸಹ ಕೇಳಿ ಬಂದಿವೆ.
ಸುಮಾರು ಸಮಯ ವಿಮಾನ ಸುತ್ತಾಟದಿಂದ ಆತಂಕಗೊಂಡ ಪ್ರಯಾಣಿಕರು ಕಣ್ಣೀರು ಹಾಕುತ್ತಾ ತಮ್ಮ ಕುಟುಂಬಸ್ಥರಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ. ಕೆಲ ಪ್ರಯಾಣಿಕರು ಭಯದಿಂದ ಕಣ್ಣೀರು ಹಾಕಿದ್ದಾರೆ.ಪೈಲಟ್ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪ ಕೇಳಿ ಬಂದಿದೆ.
ಕೆಲ ಪ್ರಯಾಣಿಕರು ನಮ್ಮನ್ನು ವಾಪಸ್ ಹೈದಾರಾಬಾದ್‌ಗೆ ಕರೆದುಕೊಂಡು ಹೋಗಿ, ಇಲ್ಲವಾದ್ರೆ ಸಮೀಪದ ಬೆಳಗಾವಿ ಅಥವಾ ಬೆಂಗಳೂರಿನ ನಿಲ್ದಾಣದಲ್ಲಾದ್ರೂ ವಿಮಾನ ಲ್ಯಾಂಡ್ ಮಾಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ಏನಾಗ್ತಿದೆ ಎಂಬುದರ ಬಗ್ಗೆ ನಮಗೆಲ್ಲರಿಗೂ ಮಾಹಿತಿ ನೀಡಬೇಕು ಎಂದು ಪ್ರಯಾಣಿಕರೊಬ್ಬರು ಸಿಬ್ಬಂದಿ ಬಳಿ ಮನವಿ ಮಾಡಿಕೊಂಡಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲರ ಸುರಕ್ಷತೆಯೇ ನಮ್ಮೆಲ್ಲರ ಮೊದಲ ಆದ್ಯತೆಯಾಗಿದ್ದು, ಯಾರೂ ಆತಂಕಕ್ಕೊಳಗಾಗಬೇಡಿ. ಸೂಚಿಸಲಾಗುತ್ತಿರುವ ನಿಯಮಗಳನ್ನು ಪಾಲನೆ ಮಾಡಿಕೊಳ್ಳಿ ಎಂದು ಸಿಬ್ಬಂದಿ ಪ್ರಯಾಣಿಕರಿಗೆ ಹೇಳುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. Fly91 ಏರ್ ಲೈನ್ಸ್ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.












