ಇತ್ತೀಚಿನ ಸುದ್ದಿ
ಕಲಬುರಗಿಯಲ್ಲಿ ಭಾರಿ ಮಳೆ: ಸಿಡಿಲು ಬಡಿದು ನೆಲಕ್ಕುರುಳಿದ ಮನೆ; ಮಠ ಜಲಾವೃತ
27/05/2026, 17:32
ಕಲಬುರಗಿ(reporterkarnataka.com): ನಗರವು ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ ನಸುಕಿನ ಜಾವ ಭಾರಿ ಮಳೆ ಬಿದ್ದಿದೆ. ಮಳೆಗೆ ಸೇಡಂ ತಾಲೂಕಿನ ಲಾಡ್ಲಾಪುರದಲ್ಲಿ ವಿದ್ಯುತ್ ಕಂಬ ಉರಳಿ ಬಿದ್ದಿದ್ದು, ತೊಟ್ನಳ್ಳಿಯಲ್ಲಿ ಮಠ ಜಲಾವೃತಗೊಂಡಿದೆ ಮತ್ತು ಗ್ರಾಮದ ಮನೆಗೆ ಸಿಡಿಲು ಬಡಿದೆ. ಜಿಲ್ಲೆಯ ಸೇಡಂ ಚಿತ್ತಾಪುರ, ಅಫಜಲಪುರ, ಜೇವರ್ಗಿ, ಕಾಳಗಿ ತಾಲೂಕಿನಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗಿದೆ.ತೋಟಗಾರಿಕೆ ಬೆಳೆಗಳು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೆ ತೀವ್ರ ಹಾನಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದಾಗಿ ರಸ್ತೆಗುಂಟ ಹಾಗೂ ಜನವಸತಿ ಇರುವಲ್ಲಿ ಕೆಲವು ಮರಗಳು ಧರಾಶಾಹಿಯಾಗಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ ಸೇಡಂ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ಅಂದಾಜು 96 ಮಿಲಿ ಮೀಟರ್ ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಸೇಡಂ ತಾಲೂಕಿನ ತೊಟ್ನಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದು ಮನೆಗೆ ಜಖಂ ಆಗಿದೆ. ಅಲ್ಲದೆ ಸಿಡಿಲು ಬಡಿದು ಮನೆಯೆಂದು ಸಂಪೂರ್ಣವಾಗಿ ಧರಾಶಾಹಿಯಾಗಿದೆ. ಅದೇ ರೀತಿಯಾಗಿ ಲಾಡ್ಲಾಪುರದಲ್ಲೂ ಕೂಡ ವಿದ್ಯುತ್ ಕಂಬ ಉರಳಿ ಬಿದ್ದಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ತೊಟ್ನಳ್ಳಿ ಬಳಿಯ ಮಹಾಂತೇಶ್ವರ ಮಠಕ್ಕೂ ಕೂಡ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಮಠ ಸಂಪೂರ್ಣ ಜಲಾವೃತವಾಗಿದೆ ಎಂದು ಮೂಲಗಳು ತಿಳಿಸಿವೆ.
*ಸಿಡಿಲಿಗೆ 18 ಕುರಿ ಬಲಿ:* ಕಾಳಗಿ ತಾಲೂಕಿನಲ್ಲೂ ಕೂಡ ಭಾರೀ ಮಳೆ ಬಿದ್ದಿದೆ ಮಳೆ ಮತ್ತು ಸಿಡಿಲಿನ ಆರ್ಭಟಕ್ಕೆ 18 ಕುರಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.













