8:56 PM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

Forest Minister | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್ ಚಕ್ರಪಾಣಿ ಸೇರಿ 3 ಅಧಿಕಾರಿಗಳ ಅಮಾನತಿಗೆ ಈಶ್ವರ ಖಂಡ್ರೆ ಶಿಫಾರಸು

04/07/2025, 16:21

ಬೆಂಗಳೂರು(reporterkarnataka.com): ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಶಿಫಾರಸು ಮಾಡಿದ್ದಾರೆ.
ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಸ್ವೀಕರಿಸಿ, ಪರಾಮರ್ಶಿಸಿದ ಸಚಿವರು, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಈ ಶಿಫಾರಸು ಮಾಡಿದ್ದಾರೆ.
ವೇತನ ಪಾವತಿಸದಿರುವುದೂ ಕರ್ತವ್ಯಲೋಪ:
ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಸಂಬಂಧ ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿ, ಇಲಾಖಾ ವಿಚಾರಣೆ ಮಾಡಲು ಶಿಫಾರಸು ಮಾಡಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿ ಮಾರ್ಚ್ ನಿಂದ 3 ತಿಂಗಳ ವೇತನ ಪಾವತಿ ಆಗಿಲ್ಲ ಎಂದು ಜೂನ್ 23ರಂದು ಪ್ರತಿಭಟನೆ ನಡೆಸಿದ್ದರು. ಸಕಾಲದಲ್ಲಿ ವೇತನ ಸಿಗದೆ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸುಮಾರು 11 ವರ್ಷದ ತಾಯಿ ಹುಲಿ ಮತ್ತು 10-11 ತಿಂಗಳ 4 ಮರಿ ಹುಲಿಗಳ ಸಾವಿಗೆ ಹುಲಿ ದಾಳಿ ಮಾಡಿ ಕೊಂದ ಹಸುವಿನ ಮೃತದೇಹದ ಒಳಗೆ ಸೇಡು ತೀರಿಸಿಕೊಳ್ಳಲು ಸಿಂಪಡಿಸಲಾದ ರಾಸಾಯನಿಕ ಸಂಯುಕ್ತ ಕಾರಣ ಎಂಬುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬಂದಿದೆ.
ಗಸ್ತು ಸಿಬ್ಬಂದಿಯ ಕಾರ್ಯಕ್ಷಮತೆಯ ಮೇಲೆ ಸಂಬಂಧಿತ ವಲಯದ ಎ.ಸಿ.ಎಫ್, ಆರ್.ಎಫ್.ಓ. ಮತ್ತು ಡಿ.ಆರ್.ಎಫ್.ಓ. ನಿಗಾ ಇಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅರಣ್ಯ ರಕ್ಷಣೆಯ ತಮ್ಮ ಮೂಲಭೂತ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುತ್ತಾರೆ ಎಂದು ತಿಳಿಸಿರುವ ಈಶ್ವರ ಖಂಡ್ರೆ, ಮೂರು ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸಲು ಸೂಚನೆ ನೀಡಿದ್ದಾರೆ.
ಪ್ರಾಥಮಿಕ ತನಿಖಾ ವರದಿ ಸಲ್ಲಿಸಿರುವ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಶ್ರೀನಿವಾಸುಲು, ಚಾಮರಾಜನಗರ ಸಿಸಿಎಫ್ ಹೀರಾಲಾಲ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎ.ಐ.ಜಿ ಹರಿಣಿ ವೇಣುಗೋಪಾಲ್, ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಮತ್ತು ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ. ಶಶಿಧರ್ ಸದಸ್ಯರಾಗಿದ್ದರು.
ಈ ಸಮಿತಿಗೆ ಅಂತಿಮ ವರದಿಯನ್ನು ಇದೇ ತಿಂಗಳ 10ರೊಳಗೆ ಸಲ್ಲಿಸುವಂತೆಯೂ ಅರಣ್ಯ ಸಚಿವರು ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು