3:46 PM Thursday17 - September 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ*

ಇತ್ತೀಚಿನ ಸುದ್ದಿ

ಮಂಗಳೂರು ನಗರಾಭಿವೃದ್ಧಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ

17/09/2026, 15:45

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (MUDA), ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಗರಾಭಿವೃದ್ಧಿ ಕಾಮಗಾರಿಗಳ ಪ್ರಗತಿ, ಕುಡಿಯುವ ನೀರು, ಒಳಚರಂಡಿ, ಬೀದಿ ದೀಪ, ಮಾರುಕಟ್ಟೆ, ಇ-ಖಾತಾ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.
ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸಿ, ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

*ನಗರ ಸೇವೆಗಳ ಡಿಜಿಟಲೀಕರಣಕ್ಕೆ ಆದ್ಯತೆ*
ರಾಜ್ಯದ 13 ಮಹಾನಗರ ಪಾಲಿಕೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪಾಲಿಕೆಗಳ ಎಲ್ಲಾ ಸೇವೆಗಳು ಹಾಗೂ ಅಗತ್ಯ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

*ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ವಿಸ್ತರಣೆ*
ಮುಂದಿನ 25 ವರ್ಷಗಳ ನಗರದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀರು ಸಂಗ್ರಹಣಾ ಘಟಕಗಳನ್ನು ಮೇಲ್ದರ್ಜೆಗೇರಿಸುವಂತೆ ಸೂಚಿಸಲಾಯಿತು.
ಮಂಗಳೂರಿನಲ್ಲಿ ಒಟ್ಟು 96,300 ಮನೆಗಳ ನಳ ಸಂಪರ್ಕಗಳ ಪೈಕಿ 39,182 ಸಂಪರ್ಕಗಳು ಪೂರ್ಣಗೊಂಡಿದ್ದು, ಬಾಕಿ ಇರುವ 57,118 ಸಂಪರ್ಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಪ್ರಸ್ತುತ ನಗರದ ಶೇ.65ರಷ್ಟು ಪ್ರದೇಶದಲ್ಲಿ, ಅಂದರೆ 86.09 ಚದರ ಕಿಲೋಮೀಟರ್ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಲಭ್ಯವಿದ್ದು, ಉಳಿದ ಪ್ರದೇಶಗಳಿಗೂ ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ವಿಸ್ತರಿಸಲು ಸೂಚಿಸಲಾಯಿತು.

*ಬೀದಿ ದೀಪಗಳ ಅಳವಡಿಕೆಗೆ ವೇಗ*
ನಗರದಲ್ಲಿ ಈಗಾಗಲೇ ಶೇ.55.6ರಷ್ಟು, ಅಂದರೆ 36,643 ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಉಳಿದ ಪ್ರದೇಶಗಳಲ್ಲಿಯೂ ಬೀದಿ ದೀಪಗಳನ್ನು ಶೀಘ್ರವಾಗಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

*ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಪರಿಶೀಲನೆ*
ಸರ್ಕಾರಿ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಸುಮಾರು ₹150 ಕೋಟಿ ವೆಚ್ಚದಲ್ಲಿ 586 ಮಳಿಗೆಗಳೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ಕುರಿತು ಸಭೆಯಲ್ಲಿ ಪರಿಶೀಲಿಸಲಾಯಿತು.
ಇದಲ್ಲದೆ, ಕಂಕನಾಡಿ, ಕದ್ರಿ, ಉರ್ವ ಹಾಗೂ ಸುರತ್ಕಲ್ ಮಾರುಕಟ್ಟೆಗಳ ನಿರ್ಮಾಣ ಕಾಮಗಾರಿಗಳ ಪ್ರಗತಿಯನ್ನೂ ಪರಿಶೀಲಿಸಿ, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

*ತ್ಯಾಜ್ಯ ವಿಂಗಡಣೆಗೆ ಕಟ್ಟುನಿಟ್ಟಿನ ಸೂಚನೆ*
ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಸುಮಾರು 120 ಟನ್ ಹಸಿಕಸ, 125 ಟನ್ ಮಿಶ್ರಿತ ಕಸ, 15 ಟನ್ ಎಳನೀರು/ತೆಂಗಿನಕಾಯಿ ತ್ಯಾಜ್ಯ ಹಾಗೂ 5 ಟನ್ ಸ್ಯಾನಿಟರಿ ತ್ಯಾಜ್ಯ, ಜೊತೆಗೆ ವಾರಕ್ಕೆ ಉತ್ಪತ್ತಿಯಾಗುವ ಸುಮಾರು 250 ಟನ್ ಒಣಕಸವನ್ನು ಶೇ.100ರಷ್ಟು ಮೂಲದಲ್ಲಿಯೇ ವಿಂಗಡಿಸುವಂತೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.


ತ್ಯಾಜ್ಯ ವಿಂಗಡಣೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇ-ಖಾತಾ ವಿತರಣೆ ಚುರುಕುಗೊಳಿಸಲು ಸೂಚನೆ
ಮಂಗಳೂರು ನಗರದಲ್ಲಿ ಒಟ್ಟು 2,22,256 ಇ-ಖಾತಾಗಳ ಪೈಕಿ 68,603 ಇ-ಖಾತಾಗಳನ್ನು ವಿತರಿಸಲಾಗಿದ್ದು, ಬಾಕಿ ಇರುವ ಇ-ಖಾತಾಗಳ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚಿಸಲಾಯಿತು. ಅರ್ಹ ಸಾರ್ವಜನಿಕರಿಗೆ ಖಾತೆಗಳು ಹಾಗೂ ನಿವೇಶನ ಸಂಬಂಧಿತ ಸೇವೆಗಳು ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದರು.
ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿ ಹಾಗೂ ಸುಸ್ಥಿತಿಯಲ್ಲಿಡಬೇಕು. ನಗರದ ಸಮಗ್ರ ನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಗಳ ಮೇಲ್ವಿಚಾರಣೆಗೆ ಸ್ಮಾರ್ಟ್ ಸಿಟಿ ಯೋಜನೆಯ ‘ಕಮಾಂಡ್ ಸೆಂಟರ್’ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ ವೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮೋಹನ್ ಪಿ.ವಿ., ಕಿಶೋರ್ ಕುಮಾರ್ ಬೋಟ್ಯಾಡಿ, ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ರಾಜ್ಯ ಬೀಜ ಮತ್ತು ಜೈವಿಕ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್ ಜೈನ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ರತ್ನಂ ಪಾಂಡೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೊಹಮ್ಮದ್ ನಜೀರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು