ಇತ್ತೀಚಿನ ಸುದ್ದಿ
ಆಗಸ್ಟ್ 15: ದೆಹಲಿ ಕೆಂಪು ಕೋಟೆಯಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮ; ಪ್ರಧಾನಿ ಧ್ವಜಾರೋಹಣ; ಮೊದಲ ಬಾರಿಗೆ ಮೊಳಗಲಿದೆ ‘ವಂದೇ ಮಾತರಂ’
13/08/2026, 22:17
ನವದೆಹಲಿ(reporterkarnataka.com): ಭಾರತವು ಆಗಸ್ಟ್ 15 ರಂದು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರಮಟ್ಟದ ಸಮಾರಂಭದ ನೇತೃತ್ವ ವಹಿಸಲಿದ್ದಾರೆ.
ಈ ಬಾರಿಯ ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿ, ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಸಂಯೋಜನೆಯಾಗಿ 150 ವರ್ಷಗಳು ಪೂರೈಸಿದ ಸವಿನೆನಪಿಗಾಗಿ ಕೆಂಪುಕೋಟೆಯ ಸಭಾಂಗಣದಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಹಾದಿಯಲ್ಲಿ ‘ಯುವ ಶಕ್ತಿ’ಯ ಪಾತ್ರವನ್ನು ಈ ಕಾರ್ಯಕ್ರಮವು ಅನಾವರಣಗೊಳಿಸಲಿದೆ.
*ಪಿಎಂ ಸ್ವಾಗತ ಮತ್ತು ಗೌರವ ರಕ್ಷಣೆ (ಗಾರ್ಡ್ ಆಫ್ ಆನರ್):*
ಕೆಂಪುಕೋಟೆಗೆ ಆಗಮಿಸಲಿರುವ ಪ್ರಧಾನಮಂತ್ರಿಯವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಥ್ ಹಾಗೂ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಿದ್ದಾರೆ. ದೆಹಲಿ ಏರಿಯಾ ಜನರಲ್ ಆಫೀಸರ್ ಕಮಾಂಡಿಂಗ್ (GoC) ಲೆಫ್ಟಿನೆಂಟ್ ಜನರಲ್ ರಾಜೇಶ್ ಸೇಥಿ ಅವರು ಪ್ರಧಾನಿಯವರನ್ನು ಗೌರವ ಪೀಠಕ್ಕೆ ಕರೆದೊಯ್ಯಲಿದ್ದು, ಅಲ್ಲಿ ಮೂರೂ ಸೇನೆಗಳು ಹಾಗೂ ದೆಹಲಿ ಪೊಲೀಸರು ಜಂಟಿಯಾಗಿ ಜನರಲ್ ಸಲ್ಯೂಟ್ ಸಲ್ಲಿಸಲಿದ್ದಾರೆ.
*ಸೇನಾ ದಳಗಳ ನೇತೃತ್ವ:*
ಸಂಯೋಜನೆ: ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಉಸ್ತುವಾರಿಯನ್ನು ‘ಭಾರತೀಯ ಸೇನೆ’ (Indian Army) ವಹಿಸಿಕೊಂಡಿದೆ.
*ಗಾರ್ಡ್ ಆಫ್ ಆನರ್ ಕಮಾಂಡರ್: ಲೆಫ್ಟಿನೆಂಟ್ ಕರ್ನಲ್ ಅರ್ಜುನ್ ಸಿಂಗ್*
ಸೇನಾ ಪಡೆಗಳ ನಾಯಕರು: ಮೇಜರ್ ಆದಿತ್ಯ ಶರ್ಮಾ (ಸೇನೆ), ಲೆಫ್ಟಿನೆಂಟ್ ಕಮಾಂಡರ್ ನೀಲಂ ರಾಣಾ (ನೌಕಾಪಡೆ), ಸ್ಕ್ವಾಡ್ರನ್ ಲೀಡರ್ ವಿಪಿನ್ ಕುಮಾರ್ (ವಾಯುಪಡೆ) ಹಾಗೂ ಅಡಿಷನಲ್ ಡಿಸಿಪಿ ವಿನೀತ್ ಕುಮಾರ್ (ದೆಹಲಿ ಪೊಲೀಸ್). ಧ್ವಜಾರೋಹಣ ಮತ್ತು 21 ಗುಂಡುಗಳ ಗೌರವ ಸಮರ್ಪಣೆ:
ಗೌರವ ರಕ್ಷಣೆ ಪರಿಶೀಲಿಸಿದ ನಂತರ, ಪ್ರಧಾನಿಯವರು ಕೆಂಪುಕೋಟೆಯ ಬುರುಜಿನತ್ತ (Ramparts) ತೆರಳಲಿದ್ದಾರೆ. ಅಲ್ಲಿ ಸಿಡಿಎಸ್ ಜನರಲ್ ಎನ್.ಎಸ್. ರಾಜ ಸುಬ್ರಮಣಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಹಾಗೂ ಭೂಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್ ಪ್ರಧಾನಿಯವರನ್ನು ಸ್ವಾಗತಿಸಲಿದ್ದಾರೆ.
ಧ್ವಜಾರೋಹಣ: ಕ್ಯಾಪ್ಟನ್ ಸೋನಿಯಾ ಸಿಂಗ್ ಚೌಹಾಣ್ ಅವರು ಪ್ರಧಾನಿಯವರಿಗೆ ಧ್ವಜಾರೋಹಣಕ್ಕೆ ನೆರವಾಗಲಿದ್ದಾರೆ.
*21 ಗುಂಡುಗಳ ಗೌರವ:* ಸ್ವದೇಶಿ ನಿರ್ಮಿತ 105mm ಲೈಟ್ ಫೀಲ್ಡ್ ಗನ್‌ಗಳನ್ನು ಬಳಸಿಕೊಂಡು ‘1721 ಫೀಲ್ಡ್ ಬ್ಯಾಟರಿ (ಸೆರೆಮೋನಿಯಲ್)’ ತಂಡವು 21 ಗುಂಡುಗಳ ಗೌರವ ಸಮರ್ಪಿಸಲಿದೆ. ಇದರ ನೇತೃತ್ವವನ್ನು ಮೇಜರ್ ಪವನ್ ಸಿಂಗ್ ಶೇಖಾವತ್ ಹಾಗೂ ನಾಯಬ್ ಸುಬೇದಾರ್ ಅನುತೋಷ್ ಸರ್ಕಾರ್ ವಹಿಸಲಿದ್ದಾರೆ.
*ರಾಷ್ಟ್ರೀಯ ಸಲ್ಯೂಟ್:* ಧ್ವಜಾರೋಹಣದ ವೇಳೆ ಮೇಜರ್ ಲೋಕೇಂದ್ರ ಸಿಂಗ್ ಶೇಖಾವತ್ ನೇತೃತ್ವದ ‘ನ್ಯಾಷನಲ್ ಫ್ಲ್ಯಾಗ್ ಗಾರ್ಡ್’ ರಾಷ್ಟ್ರೀಯ ಸಲ್ಯೂಟ್ ಸಲ್ಲಿಸಲಿದೆ.
*’ವಂದೇ ಮಾತರಂ’ ಗೀತೆ ಮತ್ತು ಪುಷ್ಪವೃಷ್ಟಿ:*
ಧ್ವಜಾರೋಹಣ ನೆರವೇರುತ್ತಿದ್ದಂತೆ, ಸೇನಾ ಬ್ಯಾಂಡ್ ತಂಡವು ಸುಬೇದಾರ್ ಈಶ್ವರ್ ಸಿಂಗ್ ಅವರ ನಿರ್ದೇಶನದಲ್ಲಿ ‘ವಂದೇ ಮಾತರಂ’ ಗೀತೆಯ ರಾಗವನ್ನು ನುಡಿಸಲಿದ್ದು, ನೆರೆದಿರುವವರೆಲ್ಲರೂ ಗೀತೆಯನ್ನು ಗಾಯನ ಮಾಡಲಿದ್ದಾರೆ. ತದನಂತರ ರಾಷ್ಟ್ರಗೀತೆ ಮೊಳಗಲಿದೆ. ಇದೇ ಸಮಯದಲ್ಲಿ, ಭಾರತೀಯ ವಾಯುಪಡೆಯ ಎರಡು ‘Mi-17’ ಹೆಲಿಕಾಪ್ಟರ್‌ಗಳು ಆಕಾಶದಿಂದ ಕೆಂಪುಕೋಟೆಯ ಮೇಲೆ ಪುಷ್ಪವೃಷ್ಟಿ ಕರೆಯಲಿವೆ.
ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಹೊಂದಿದ್ದರೆ, ಮತ್ತೊಂದು ಹೆಲಿಕಾಪ್ಟರ್ ‘ವಂದೇ ಮಾತರಂ’ ಬಿಂಬಿಸುವ ಧ್ವಜವನ್ನು ಪ್ರದರ್ಶಿಸಲಿದೆ. Wing Commander ರಜತ್ ಮತ್ತು Squadron Leader ಅಂಕಿತ್ ವರ್ಷ್ನೆ ಈ ಹೆಲಿಕಾಪ್ಟರ್‌ಗಳ ನೇತೃತ್ವ ವಹಿಸಲಿದ್ದಾರೆ.
*ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ:*
ಪುಷ್ಪವೃಷ್ಟಿಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಬುರುಜಿನಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾಷಣ ಮುಗಿಯುತ್ತಿದ್ದಂತೆ, ಎನ್‌ಸಿಸಿ ಕೆಡೆಟ್‌ಗಳು ಹಾಗೂ ‘ಮೈ ಭಾರತ್’ ಸ್ವಯಂಸೇವಕರು ‘ವಂದೇ ಮಾತರಂ’ ಹಾಗೂ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ.
ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲು ಕೆಂಪುಕೋಟೆಯ ಜ್ಞಾನಪಥದಲ್ಲಿ ಮೂರೂ ಸೇನೆಗಳ ಸುಮಾರು 2,500 ಎನ್‌ಸಿಸಿ ಕೆಡೆಟ್‌ಗಳು ಮತ್ತು ಮೈ ಭಾರತ್ ಸ್ವಯಂಸೇವಕರು ಆಸೀನರಾಗಲಿದ್ದಾರೆ. ಅಲ್ಲದೆ, ವಿವಿಧ ಕ್ಷೇತ್ರಗಳ ಸುಮಾರು 5,000 ವಿಶೇಷ ಅತಿಥಿಗಳನ್ನು ಈ ಐತಿಹಾಸಿಕ ಕ್ಷಣವನ್ನು ಕಣ್ಣುಂಬಿಕೊಳ್ಳಲು ಆಹ್ವಾನಿಸಲಾಗಿದೆ.














