9:39 PM Thursday30 - January 2025
ಬ್ರೇಕಿಂಗ್ ನ್ಯೂಸ್
88.32 ಕೋಟಿ ಮೊತ್ತದ ಬೃಹತ್ ಸೈಬರ್ ವಂಚನೆ ಜಾಲ ಪತ್ತೆ: 52 ಮಂದಿ… ಆರ್ಥಿಕ ಸಂಕಷ್ಟದಿಂದ ವೈಜಾಗ್ ಸ್ಟೀಲ್ ಕಾರ್ಖಾನೆ ಪಾರು: 11,440 ಕೋಟಿ ರೂ. ಪುನಶ್ಚೇತನ… ಕೇಂದ್ರ – ರಾಜ್ಯ ಸೇರಿ ಹೊಸ ಕೃಷಿ ಆರ್ಥಿಕ ನೀತಿ ತರಬೇಕು: ಮಾಜಿ… ಕಾಂಗ್ರೆಸ್ ಸಂಸ್ಕೃತಿಯೇ ಅಂತದ್ದು; ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ… ನಂಜನಗೂಡು: 5 ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಎಫ್ ಐಆರ್; 4 ಮಂದಿ… ಬಿಜೆಪಿ 12ನೇ ಶತಮಾನದಲ್ಲಿ ಇದ್ದಿದ್ದರೆ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟುತ್ತಿತ್ತು: ಸಚಿವ… ನಂಜನಗೂಡು: ಶ್ರದ್ಧಾಭಕ್ತಿಯಿಂದ ನಡೆದ ಸುತ್ತೂರು ಜಾತ್ರಾ ರಥೋತ್ಸವ; 40 ಜಾನಪದ ತಂಡಗಳ ಮೆರುಗು ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಖೇದ ಕನ್ನಡಪರ ಹೋರಾಟಗಾರರ ಎಲ್ಲ ಕೇಸ್ ವಾಪಾಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ: ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಮತ್ತೊಂದು ಜೀವಬಲಿ; ಭಾರೀ…

ಇತ್ತೀಚಿನ ಸುದ್ದಿ

ಕೇಂದ್ರ – ರಾಜ್ಯ ಸೇರಿ ಹೊಸ ಕೃಷಿ ಆರ್ಥಿಕ ನೀತಿ ತರಬೇಕು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

29/01/2025, 20:55

ಮೈಸೂರು(reporterkarnataka.com): ಬ್ರಿಟೀಷರು ನಮಗೆ ಸ್ವಾತಂತ್ರ್ಯ ನೀಡಿ ದೇಶ ಬಿಟ್ಟು ಹೋಗುವ ಮುನ್ನ ಮಠಗಳು ಜಾತಿ ಭೇದ ಮಾಡದೇ ಎಲ್ಲರಿಗೂ ಶಿಕ್ಷಣವನ್ನು ನೀಡಿದ್ದರಿಂದ ಕರ್ನಾಟಕ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಮಹಾಸಂಸ್ಥಾನ ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಒಂದು ಮಠ ಅಂದರೆ ಸಂಸ್ಕೃತಿಯ ಕೇಂದ್ರ. ಮೈಸೂರು ಭಾಗದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಸಂಸ್ಕೃತಿಯನ್ನು ಆಳವಾಗಿ ಬೇರೂರುವಂತೆ ಮಾಡಿದ್ದಾರೆ.
ಇದೊಂದು ಸುಸಂಸ್ಕೃತ ನಾಡಾಗಿದ್ದರೆ, ಪ್ರಗತಿಪರ ನಾಡಾಗಿದ್ದರೆ, ಶಿಕ್ಷಣದಲ್ಲಿ ಮುಂದುವರೆದ ನಾಡಾಗಿದ್ದರೆ, ಅಷ್ಟೇ ಅಲ್ಲ ಐಟಿ ಬಿಟಿಯಲ್ಲಿ ಸಾಧನೆ ಮಾಡಬೇಕೆಂದರೆ ಅದೆಲ್ಲಕ್ಕೂ ಮೂಲ ಮಠಗಳು ಕಾರಣ. ಬ್ರಿಟೀಷರು ನಮಗೆ ಸ್ವಾತಂತ್ರ್ಯ ನೀಡಿ ದೇಶ ಬಿಟ್ಟು ಹೋಗುವ ಮುನ್ನ ಮಠಗಳು ಜಾತಿ ಭೇದ ಮಾಡದೇ ಎಲ್ಲರಿಗೂ ಶಿಕ್ಷಣವನ್ನು ನೀಡಿದ್ದರಿಂದ ಕರ್ನಾಟಕ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಎಲ್ಲಿ ಸರ್ಕಾರ ಕೆಲಸ ಮಾಡಿಲ್ಲವೋ ಅಲ್ಲಿ ಮಠಮಾನ್ಯಗಳು ಕೆಲಸ ಮಾಡಿವೆ. 1925 ರಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ತೆರೆದು ಶಿಕ್ಷಣ ನೀಡಿವೆ. ಸುತ್ತೂರಿನಿಂದ ಹಿಡಿದು ನಿಪ್ಪಾಣಿವರೆಗೂ, ಬೀದರನಿಂದ ಹಿಡಿದು ಚಾಮರಾಜನಗರದವರೆಗೆ ಎಲ್ಲ ಕಡೆಯೂ ಮಠಗಳ ಸಾಧನೆ ಮತ್ತು ಸುತ್ತಲಿನ ಕ್ಷೇತ್ರದ ಅಭಿವೃದ್ಧಿ ಕಾಣಿಸುತ್ತದೆ. ಮಠಗಳು ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಳ್ಳುವುದರ ಜೊತೆಗೆ ಜ್ಞಾನವನ್ನು ನಾಡಿಗೆ ಕೊಟ್ಟಿವೆ ಎಂದರು.
ಮನುಷ್ಯನಿಗೆ ಅಗತ್ಯವಿರುವಂಥದ್ದು ದೇವರು ಕೊಟ್ಟಿರುವ ಬಿಸಿಲು, ಗಾಳಿ, ಅದರ ಜೊತೆಗೆ ಕೃಷಿ ಬಹಳ ಮುಖ್ಯವಾಗಿದೆ. ಸುತ್ತೂರು ಮಠ ತನ್ನ ಸಂಸ್ಕಾರದಲ್ಲಿ ಕೃಷಿಯನ್ನು ಸೇರಿಸಿದೆ. ನೇರವಾಗಿ ಮನುಷ್ಯನನ್ನು ಮಾನವನನ್ನಾಗಿ ಮಾಡಿ ಹಸಿವನ್ನು ನೀಗಿಸುವಂಥದ್ದು, ಕಾರ್ಯವನ್ನು ಕೃಷಿಯಲ್ಲಿ ಸುತ್ತೂರು ಮಠ ಮಾಡುತ್ತ ಬಂದಿದೆ. ಪರಮಪೂಜ್ಯರು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬರವನ್ನು ನೀಗಿಸುವಂತಹ ಮಹೋನ್ನತ್ತ ಕೆಲಸವನ್ನು ಮಾಡುತ್ತ ಬಂದಿದ್ದಾರೆ ಎಂದರು.
*ಕಬಿನಿ ಯೋಜನೆ:*
ನಾನು ನೀರಾವರಿ ಸಚಿವನಾಗಿದ್ದಾಗ ಕಾರ್ಯಕ್ರಮಕ್ಕೆ ಬಂದಾಗ ಸ್ವಾಮೀಜಿಗಳು ಈ ಭಾಗದಲ್ಲಿ ಬಹಳ ದೊಡ್ಡ ಬರಗಾಲವಿದೆ. ಯಾವುದೇ ನೀರಾವರಿ ಯೋಜನೆ‌ ಇಲ್ಲ. ಕಬಿನಿ ಎರಡನೇ ಹಂತ ಅಂತ ಹೇಳುತ್ತಿದ್ದಾರೆ. ಆದರೆ, ಯಾವುದೇ ಸರ್ಕಾರ ಆ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿಲ್ಲ‌. ಯಾಕೆಂದರೆ ಅದು ಟ್ರಿಬ್ಯುನಲ್ ನಲ್ಲಿ ಇದೆ ಅಂತ ಹೇಳುತ್ತಿದ್ದಾರೆ. ನೀವು ದಿಟ್ಟ ನಿರ್ಧಾರ ತೆಗೆದುಕೊಂಡರೆ ಮಾತ್ರ ಸಾಧ್ಯ, ಸಾಮಾನ್ಯರಿಗೆ ಆದು ಆಗದ ಕೆಲಸ ಅಂದರು, ನಾನು ಈ ಯೋಜನೆಯನ್ನು ಹೇಗಾದರೂ ಮಾಡಬೇಕು ಎಂದು ಹಲವಾರು ವಿರೋಧಗಳ ನಡುವೆ ಅಧಿಕಾರಿಗಳ ಸಭೆ ಕರೆದು, ಕಾನೂನು ತಜ್ಞರ ಜೊತೆ ಚರ್ಚಿಸಿ ಈ ಯೋಜನೆಯನ್ನು ಪ್ರಾರಂಭಮಾಡಿದೆ. ಆಗ ಕಾಲ ಎಷ್ಟು ಸೂಕ್ಷ್ಮ ಇತ್ತು, ಈಗಿನ ಕಾಲದಲ್ಲಿ ಉದ್ಘಾಟನೆಗೆ ಬೋರ್ಡ್ ನಲ್ಲಿ ಹೆಸರು ಹಾಕಿಸಿಕೊಳ್ಳಲು ಓಡಾಡುತ್ತಾರೆ. ಈಗಲೂ ಚಾಮರಾಜನಗರದ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಅದರ ಶ್ರೇಯಸ್ಸು ಸುತ್ತೂರು ಮಠದ ಪರಮಪೂಜ್ಯರು ಮತ್ತು ನಮ್ಮ ನಾಯಕರಾದ ಯಡಿಯೂರಪ್ಪ ಅವರಿಗೆ ಹೋಗುತ್ತದೆ. ಗುರುಗಳು ಈ ಯೋಜನೆಯ ಬಗ್ಗೆ ಹೇಳಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ಹೇಳಿದೆ, ಅವರು ಆಸಕ್ತಿಯಿಂದ ಯೋಜನೆ ಎಲ್ಲಿಗೆ ಬಂತು ಏನಾಯಿತು ಎಂದು ಕೇಳುತ್ತಿದ್ದರು, ಈ ಭಾಗದ ಅಭಿವೃದ್ದಿ ಬಗ್ಗೆ ಯಡಿಯೂರಪ್ಪ ಅವರಿಗೆ ಅಷ್ಟು ಕಾಳಜಿ ಇತ್ತು ಎಂದು ಹೇಳಿದರು.
*ಕೃಷಿ ಆರ್ಥಿಕ ನೀತಿ ಅಗತ್ಯ:*
ರೈತರಿಗೆ ಪೂರ್ಣ ಪ್ರಮಾಣದ ಸಾಲ ಸಿಕ್ಕರೆ ಅದನ್ನು ಬಳಕೆ ಮಾಡಿ ಉತ್ಪಾದನೆ ಮಾಡುತ್ತಾನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಹೊಸ ಕೃಷಿ ಆರ್ಥಿಕ ನೀತಿ ತರಬೇಕು. ಕೃಷಿಯಲ್ಲಿ ಮಣ್ಣಿನ ಸಂರಕ್ಷಣೆ ಆಗಿದ್ದರೆ ಅದು ರೈತರಿಂದ ಮಾತ್ರ, ರೈತನ ಹೊಲಕ್ಕೆ ಯಾವ ವಿಜ್ಞಾನಿಯೂ ಹೋಗಿಲ್ಲ. ಯಾವ ಸರ್ಕಾರವೂ ಹೋಗಿಲ್ಲ. ರೈತ ಮಣ್ಣಿನ ಫಲವತ್ತತೆ ಕಾಪಾಡಲು ಮಣ್ಣಿನ ಕೃಷಿ ಮಾಡುತ್ತಾನೆ. ಕೃಷಿ ವಿಶ್ವ ವಿದ್ಯಾಲಯಗಳು ರೈತರ ಭೂಮಿಯನ್ನು ಕ್ಯಾಂಪಸ್ ಮಾಡಿಕೊಂಡು ಅಲ್ಲಿ ಪ್ರಯೋಗ ಮಾಡಿ ಬೆಳೆ ಬೆಳೆದು ತೋರಿಸಿ, ಕೃಷಿ ವಿಶ್ವ ವಿದ್ಯಾಲಯಗಳು ರೈತರ ಜೊತೆ ಕುಳಿತು ಚರ್ಚಿಸಬೇಕು. ರೈತರಿಗೆ ಕೃಷಿಯಲ್ಲಿ ಸಾಮಾನ್ಯ ಹೆಚ್ಚಿರುತ್ತದೆ. ನಾವು ವಿಧಾನಸಭೆಯಲ್ಲಿ ಎಸಿಯಲ್ಲಿ ಕುಳಿತು ಸಮಸ್ಯೆಯ ಬಗ್ಗೆ ಚರ್ಚೆ ಮಾಡುತ್ತೇವೆ. ರೈತರು, ಕೂಲಿ ಕಾರ್ಮಿಕರು ಸಮಸ್ಯೆಯ ಜೊತೆಗೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಕ್ಕೂ ಸಮಸ್ಯೆಯ ಜೊತೆಗೆ ಜೀವನ ಮಾಡುವುದಕ್ಕೂ ಬಹಳ ವ್ಯತ್ಯಾಸ ಇದೆ. ಎಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೋ ಅಲ್ಲಿಯೇ ಪರಿಹಾರ ಇದೆ. ಈ ಮನೋಭಾವ ಬದಲಾವಣೆ ಆದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದ್ದರಿಂದ ಆಧುನಿಕತೆಯನ್ನು ಅಳವಡಿಸಿಕೊಳ್ಳುವಂಥದ್ದು, ರೈತರ ಭೂಮಿಯಲ್ಲಿ ಹೊಸ ಪ್ರಯೋಗ ಮಾಡುವಂಥದ್ದು, ನೈಸರಗಿಕ ಕೃಷಿ ಅಳವಡಿಸಿಕೊಳ್ಳುವುದು, ಮಣ್ಣಿನ ಸಾರ ಉಳಿಸಿಕೊಳ್ಳಬೇಕು ಎಂದರು.
ನಮಗೆ ಸ್ವಾತಂತ್ರ್ಯ ಬಂದಾಗ 33 ಕೋಟಿ ಜನಸಂಖ್ಯೆ ಇತ್ತು. ಈಗ 133 ಕೋಟಿ ಆಗಿದೆ. 33 ಕೋಟಿ ಜನಸಂಖ್ಯೆ ಇದ್ದಾಗ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುತ್ತಿದ್ದೇವು. ಈಗ 133 ಕೋಟಿ ಜನಸಂಖ್ಯೆ ಆದರೂ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿದ್ದೇವೆ. ಕೃಷಿ ಬೆಳೆದಿದೆ. ಆದರೆ, ಕೃಷಿ ಬೆಳೆಸಿದ ರೈತ ಎಲ್ಲಿದ್ದಾನೋ ಅಲ್ಲಿಯೇ ಇದ್ದಾನೆ. ಈಗೇನಾದರೂ ಹೊಸ ನೀತಿ ಮಾಡಿದರೆ ರೈತನನ್ನು ಗಟ್ಟಿಗೊಳಿಸಬೇಕು. ರೈತನ ಮನೆಯಲ್ಲಿ ಮದುವೆ ಆದರೆ, ಸಾಲ ಮಾಡಬೇಕು, ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಸಾಲ ಮಾಡಬೇಕು. ರೈತ ಕೇಂದ್ರಿತ ಆಲೋಚನೆ ಮಾಡುವ ಅಗತ್ಯವಿದೆ. ಅಂದಾಗ ಮಾತ್ರ ರೈತರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಹೇಳಿದರು.
*ಪೂಜ್ಯರು ಒಂದು ಶಕ್ತಿ:*
ಸುತ್ತೂರು ಮಠದ ಪರಮಪೂಜ್ಯರು ಒಂದು ಶಕ್ತಿ. ಅವರ ಶಕ್ತಿ ಸಾರ್ವತ್ರಿಕವಾಗಿ, ಸರ್ವಜನರ ಉದ್ದಾರಕ್ಕಾಗಿ, ಶಾಸ್ವತ ಪರಿಹಾರಕ್ಕಾಗಿ, ಅನ್ನದಾತರಿಗಾಗಿ, ಈ ಭಾಗದ ಸರ್ವೋತ್ತಮ ಅಭಿವೃದ್ಧಿಗಾಗಿ ಆ ಶಕ್ತಿ ಬಳಕೆ ಆಗಬೇಕು. ಅವರು ಅಮೇರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಸಂಸ್ಥೆ ಕಟ್ಟಿದ್ದಾರೆ. ಆದರೆ, ಅವರ ಮನಸ್ಸು ಇಲ್ಲಿನ ಜನರ ಮೇಲಿದೆ. ಈ ಜಾತ್ರೆ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿ ಬಂದವರಿಗೆ ಜ್ಞಾನ ಮತ್ತು ಧ್ಯಾನ ಎರಡೂ ಸಿಗುತ್ತದೆ. 21 ನೇ ಶತಮಾನ ಜ್ಞಾನದ ಶತಮಾನ ಯಾರ ಬಳಿ ಜ್ಞಾನ ಇದೆ. ಅವರು ಜಗತ್ತನ್ನು ಆಳುತ್ತಾರೆ. ಒಂದು ಕಾಲದಲ್ಲಿ ಭೂಮಿ ಇದ್ದವರು, ದುಡ್ಡಿದ್ದವರು ಜಗತ್ತು ಆಳುತ್ತಿದ್ದರು. ಇವತ್ತು ಜ್ಞಾನ ಇರುವವರು ಜಗತ್ತು ಆಳುತ್ತಾರೆ. ಮನುಷ್ಯನಿಗೆ ಜ್ಞಾನಮುಖ್ಯ, ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶಜ್ಞಾನ ಇದೆಲ್ಲವೂ ನಮ್ಮ ಬಹಿರಂಗ, ಆದರೆ ನಾವು ಅಂತರಂಗದಲ್ಲಿ ವಿಕಸನ ಆಗದಿದ್ದರೆ, ನಾವು ಸಾಧಕರಾಗುವುದಿಲ್ಲ ಅದಕ್ಕಾಗಿ ಧ್ಯಾನ ಬೇಕು. ಬಸವಾದಿ ಶರಣರು, ಅಂಗೈಯಲ್ಲಿ ಲಿಂಗವನ್ನು ಕೊಟ್ಟು ಧ್ಯಾನದ ಸುಲಭ ಮಾರ್ಗ ತೋರಿಸಿದರು. ಬದುಕಿನಲ್ಲಿ‌ ಇದನ್ನು ಅಳವಡಿಸಿಕೊಂಡರೆ ನಾವು ಸಾಕ್ಷಾತ್ಕಾರ ಪಡೆಯುತ್ತೇವೆ ಎಂದರು.
ಸಮಾಜದಲ್ಲಿ ನೂರಾರು ವಿಚಾರಗಳ ಬಗ್ಗೆ ಈಗಲೂ ಜಿಜ್ಞಾಸೆ ಇದೆ. ಈ ಜಿಜ್ಣಾಸೆ ಹೋಗಬೇಕಾದರೆ ಧ್ಯಾನ ಮತ್ತು ಜ್ಞಾನದ ಅವಶ್ಯಕತೆ ಇದೆ. ಇಂದು ಕೃಷಿ ಅನಿಶ್ಚಿತತೆಯಲ್ಲಿದೆ. ಕೃಷಿಯಲ್ಲಿ ಸ್ಥಿರತೆ ತರಬೇಕು ಎಂದರೆ ಬಂಡವಾಳ ಬರಬೇಕು. ಬೇರೆ ಕ್ಷೇತ್ರಕ್ಕೆ ಹೋಲಿಸಿದರೆ ಕೃಷಿಯಲ್ಲಿ ಮೂಲ ಬಂಡವಾಳ ಬಹಳಷ್ಟು ಕಡಿಮೆ‌ ಇದೆ. ಸುಗ್ಗಿಯ ನಂತರ ಮೂಲ ಸೌಕರ್ಯ ಅಭಿವೃದ್ಧಿ ಆಗಬೇಕು. ಅಷ್ಟೇ ಅಲ್ಲ ಒಂದು ಹೊಸ ಆರ್ಥಿಕ ನೀತಿ ಬರಬೇಕಾಗುತ್ತದೆ ಎಂದು ಅವರು ನುಡಿದರು.
ಎಲ್ಲರಕ್ಕಿಂತ ದೊಡ್ಡದು ಮಾನವ ಧರ್ಮ, ನಾವೆಲ್ಲ ಮನುಷ್ಯರಾಗಿ ಹುಟ್ಟುತ್ತೇವೆ. ಕೆಲವೇ ಕೆಲವು ಜನರು ಮಾನರಾಗುತ್ತಾರೆ. ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಲ್ಲಿ ಸಿಲುಕಿಕೊಂಡಿರುವವನು ಮನುಷ್ಯ, ಪ್ರೀತಿ, ವಾತ್ಸಲ್ಯ,ನ್ಯಾಯ, ನೀತಿ ಸಂಕೋಲೆಯಲ್ಲಿ ಸಿಲುಕಿರುವವನು ಮಾನವ. ಇಡೀ ನಮ್ಮ ಬದುಕು ಮನಷ್ಯನಿಂದ ಮಾನವನಾಗುವ ಕಡೆಗೆ ಹೋಗುವುದು, ಆ ಸಂಸ್ಕೃತಿ ಸುತ್ತೂರು ಮಠದಲ್ಲಿ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುತ್ತೂರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮಾಜಿ ಸಚಿವರಾದ ಸಿ.ಸಿ.ಪಾಟೀಲ್, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹಾಗೂ ಮತ್ತಿತರರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು