ಇತ್ತೀಚಿನ ಸುದ್ದಿ
ಆಫ್ರಿಕಾದ ಕಾಂಗೋದಲ್ಲಿ 95 ಕನ್ನಡಿಗರ ಬಂಧನ: ಶಿವಮೊಗ್ಗ, ದಾವಣಗೆರೆಯ ಹಕ್ಕಿಪಿಕ್ಕಿ ಸಮುದಾಯ ಏಜೆಂಟರ ಮೋಸಕ್ಕೆ ಬಲಿ
21/11/2026, 19:29
ಕೇಪ್ ಟೌನ್(reporterkarnataka.com): ಸಾಂಪ್ರದಾಯಿಕ ಗಿಡಮೂಲಿಕೆ ಹಾಗೂ ಆಯುರ್ವೇದ ತೈಲಗಳ ವ್ಯಾಪಾರಕ್ಕಾಗಿ ಆಫ್ರಿಕಾ ಖಂಡದ ‘ರಿಪಬ್ಲಿಕ್ ಆಫ್ ಕಾಂಗೋ’ ದೇಶಕ್ಕೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ ಬರೋಬ್ಬರಿ 95 ಮಂದಿ ಈಗ ಅಲ್ಲಿನ ವಲಸೆ ಅಧಿಕಾರಿಗಳ ಬಂಧನಕ್ಕೊಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಧನಕ್ಕೊಳಗಾದ 95 ಮಂದಿಯೂ ಕರ್ನಾಟಕದ ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದವರಾಗಿದ್ದಾರೆ.
ಈ ಪೈಕಿ ಶಿವಮೊಗ್ಗ ತಾಲೂಕಿನ ಹಕ್ಕಿಪಿಕ್ಕಿ ಕ್ಯಾಂಪ್ನ 70 ಮಂದಿ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯ 25 ಜನರು ಸೇರಿದ್ದಾರೆ. ಬದುಕಿನ ಬಂಡಿ ಸಾಗಿಸಲು ಮತ್ತು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇವರೆಲ್ಲರೂ ಸಾಗರದಾಚೆ ವ್ಯಾಪಾರಕ್ಕೆ ತೆರಳಿದ್ದರು.
*ನಕಲಿ ದಾಖಲೆ ಆರೋಪ: ಏಜೆಂಟರ ಮಹಾ ಮೋಸ!*
ಪ್ರಯಾಣದ ಟಿಕೆಟ್ ಹಾಗೂ ವೀಸಾ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿದ್ದ ಮಧ್ಯವರ್ತಿಗಳು (ಏಜೆಂಟರು), ಈ ಬಡ ಬುಡಕಟ್ಟು ಜನರಿಂದ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಆದರೆ, ಏಜೆಂಟರು ನಕಲಿ ದಾಖಲೆಗಳನ್ನು ನೀಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾಂಗೋ ದೇಶದ ವಲಸೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ವೀಸಾ ಹಾಗೂ ಇತರ ದಾಖಲೆಗಳು ನಕಲಿ ಎಂಬುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ 95 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.












