ಇತ್ತೀಚಿನ ಸುದ್ದಿ
Mangaluru | ವಿಶ್ವ ಮಲಯಾಳಿ ಕೌನ್ಸಿಲ್ನ ಮಂಗಳೂರು ಪ್ರಾಂತ್ಯ ಉದ್ಘಾಟನೆ
21/11/2026, 11:58
ಮಂಗಳೂರು(reporterkarnatala.com): ವಿಶ್ವ ಮಲಯಾಳಿ ಕೌನ್ಸಿಲ್ನ (ಡಬ್ಲ್ಯುಎಂಸಿ) ಭಾರತ ಪ್ರಾದೇಶಿಕ ಘಟಕದ ಮಂಗಳೂರು ಪ್ರಾಂತ್ಯವನ್ನು ನಗರದ ಹೋಟೆಲ್ ದೀಪಾ ಕಂಫರ್ಟ್ಸ್ನಲ್ಲಿ ಭಾನುವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.





ಪ್ರಾರ್ಥನೆ ಹಾಗೂ ಸಾಂಪ್ರದಾಯಿಕ ಕುತ್ವುವಿಳಕ್ಕು ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷರಾಗಿ ನಿಯೋಜಿತರಾಗಿರುವ ಮುರಳಿ ಎಚ್. ನಾಯರ್ ಸ್ವಾಗತಿಸಿದರು. ಬಳಿಕ ಭಾರತ ಪ್ರಾದೇಶಿಕ ಘಟಕದ ಪ್ರಾಂತ್ಯ ಸಂಯೋಜಕ ಟಿ.ಕೆ. ದೇವದಾಸ್ ಮೆನನ್ ಅವರು ಸಂಘಟನೆಯ ಉದ್ದೇಶ, ಆಶಯ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಪರಿಚಯಿಸಿದರು.
ವಿಶ್ವ ಮಲಯಾಳಿ ಕೌನ್ಸಿಲ್ನ ಭಾರತ ಪ್ರಾದೇಶಿಕ ಅಧ್ಯಕ್ಷ ಪದ್ಮಕುಮಾರ್ ಪಿ. ಅವರು ನೂತನ ಪ್ರಾಂತ್ಯವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಮಲಯಾಳಿಗಳ ನಡುವಿನ ಒಗ್ಗಟ್ಟು ಹಾಗೂ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮಹತ್ವವನ್ನು ಅವರು ಒತ್ತಿಹೇಳಿದರು.
ಮಂಗಳೂರು ಪ್ರಾಂತ್ಯದ ಅಧ್ಯಕ್ಷ ಮುರಳಿ ಎಚ್. ಅವರು ನೂತನ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರನ್ನು ಪರಿಚಯಿಸಿದರು. ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಮಲಯಾಳಿಗಳ ನಡುವೆ ಒಗ್ಗಟ್ಟು ಬೆಳೆಸುವುದು, ದಾನಧರ್ಮ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಪ್ರಾಂತ್ಯದ ಪ್ರಮುಖ ಉದ್ದೇಶವಾಗಿದೆ ಎಂದರು.
ಸ್ಥಳೀಯ ಸಮಿತಿಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸುವುದರ ಜೊತೆಗೆ ಭಾಷೆ ಮತ್ತು ಸಂಸ್ಕೃತಿಯ ಭೇದವಿಲ್ಲದೆ ವಿಶಾಲ ಸಮಾಜದ ಸೇವಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮಲಬಾರ್ ಪ್ರಾಂತ್ಯದ ಅಧ್ಯಕ್ಷ ನೌಶಾದ್, ಡಬ್ಲ್ಯುಎಂಸಿಯ ಕೊಯಮತ್ತೂರು ಪ್ರಾಂತ್ಯದ ಪಿ.ಸಿ. ಮುರಳೀಧರನ್ ಹಾಗೂ ಮಂಗಳೂರು ಪ್ರಾಂತ್ಯದ ಅಧ್ಯಕ್ಷ ಟಿ.ಕೆ. ರಾಜನ್ ಶುಭ ಹಾರೈಸಿದರು.
ಜಂಟಿ ಕಾರ್ಯದರ್ಶಿ ಡಾ. ಸಿಂಧು ಎಸ್. ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಮೋಹನ್ ವಂದಿಸಿದರು. ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.












