11:58 AM Saturday21 - November 2026
ಬ್ರೇಕಿಂಗ್ ನ್ಯೂಸ್
ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದ ಮೇಲ್ಮನವಿ‌ ವಜಾಗೊಳಿಸಿದ… ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2… ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ… ಉತ್ತರಾಖಂಡ | ಸುಮಾರು 100 ಮೀಟರ್‌ ಆಳದ ಕಂದಕಕ್ಕೆ ಉರುಳಿದ ಬಸ್: 8… ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಹೈಕಮಾಂಡ್ ತೀರ್ಮಾನಿಸಲಿದೆ: ಸಿಎಂ ಡಿ. ಕೆ. ಶಿವಕುಮಾರ್ ತಿಪಟೂರು | ಕೆಎಸ್​ಆರ್​ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು: ಭೀಕರ ಅಪಘಾತದಲ್ಲಿ ಯುವಕರಿಬ್ಬರು… ಮಂಡ್ಯ | ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು… ತುಮಕೂರು | ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ವೇದಿಕೆ ಮೇಲೆಯೇ ಭಾವುಕರಾದ ಡಾ. ಪರಮೇಶ್ವರ್ ಪಂಡಿತ್ ಜವಾಹರಲಾಲ್ ನೆಹರು 137ನೇ ಜನ್ಮದಿನ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್…

ಇತ್ತೀಚಿನ ಸುದ್ದಿ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ

21/11/2026, 11:50

*ಪೊಲೀಸ್ ಠಾಣೆಗಳಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡಬಾರದು*

*ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸರ್ಕಾರದ ಪಣ*

*ರೌಡಿ ಚಟುವಟಿಕೆ ಮಟ್ಟ ಹಾಕಲು ಪ್ರತ್ಯೇಕ ರೌಡಿ ನಿಗ್ರಹ ಕಮಿಷನರೇಟ್*

*ಸುಳ್ಳು ಸುದ್ದಿ ತಡೆಗೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ*

*ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಆದ್ಯತೆ*

*ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕಬೇಕು*

*ಟೀಂ ಬೆಂಗಳೂರು ಆಗಿ ಕಾರ್ಯ ನಿರ್ವಹಿಸಲು ಕರೆ*

ಬೆಂಗಳೂರು(reporterkarnataka.com): ಪೊಲೀಸ್ ಠಾಣೆಗಳಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡಬಾರದು. ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನಸೌಧದ ನವೀಕೃತ ಸಭಾಂಗಣ ʻಸಂಗಮʼದಲ್ಲಿ ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಕಚೇರಿ ಪ್ರಾರಂಭಿಸಿದಾಗ ಜನಸಂಖ್ಯೆ ಸುಮಾರು 20 ಲಕ್ಷ ಇತ್ತು. ಇದೀಗ ಬೆಂಗಳೂರಿನ ಜನಸಂಖ್ಯೆ ಸುಮಾರು 1.5ಕೋಟಿ ತಲುಪಿದ್ದು, ಕಾನೂನು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ 5 ಪೊಲೀಸ್ ಕಮಿಷನರೇಟ್ ಸ್ಥಾಪಿಸಿದ್ದೇವೆ. ಚೀಫ್ ಕಮಿಷನರ್ ಅವರ ಅಡಿಯಲ್ಲಿ ಐದು ಪೊಲೀಸ್ ಕಮಿಷನರ್ಗಳು ನಗರದ ಕಾನೂನು ಸುವ್ಯವಸ್ಥೆಯ ನಿರ್ವಹಣೆ ಮಾಡಲಿದ್ದಾರೆ. ಕೆಲವು ಹೊಸ ಪ್ರದೇಶಗಳನ್ನು ಸೇರಿಸುವ ಮೂಲಕ ಇದರ ವ್ಯಾಪ್ತಿಯನ್ನು ಸಹ ಹೆಚ್ಚಿಸಿದ್ದೇವೆ. ಇದೇ ರೀತಿ ಹೊಸದಾಗಿ ನೂರಾರು ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡಿದ್ದೇವೆ. ಸರ್ಕಾರದ ನಿರೀಕ್ಷೆಗೆ ತಕ್ಕಂತೆ ನೀವು ʻಟೀಂ ಬೆಂಗಳೂರುʼ ಆಗಿ ಕಾರ್ಯ ನಿರ್ವಹಿಸಬೇಕು” ಎಂದು ಅವರು ತಿಳಿಸಿದರು.
ಇಡೀ ದೇಶವೇ ಇಂದು ಬೆಂಗಳೂರಿನತ್ತ ನೋಡುತ್ತಿದೆ. ಇಲ್ಲಿ ಸುಮಾರು 2 ಲಕ್ಷ ವಿದೇಶಿ ನಾಗರಿಕರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕೆಲವು ಬಾರಿ ಜಾಗತಿಕ ಸುದ್ದಿಯಾಗುತ್ತದೆ. ನಮ್ಮ ಮೇಲೆ ನಿರೀಕ್ಷೆಯ ಒತ್ತಡವೂ ಹೆಚ್ಚಿದೆ. ಇದರಿಂದಾಗಿ ನಮ್ಮೆಲ್ಲರ ಜವಾಬ್ದಾರಿಯೂ ಹೆಚ್ಚಿದೆ. ಇದನ್ನು ಅರಿತುಕೊಂಡು ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು.
ಬಿಬಿಎಂಪಿಯನ್ನು ವಿಭಜಿಸಿ ಜಿಬಿಎ ಮಾಡಿದಾಗ ಆರಂಭದಲ್ಲಿ ಕೆಲವು ಕಡೆಯಿಂದ ಅಪಸ್ವರಗಳು ಬಂದಿದ್ದವು. ಆದರೆ ಈಗ ಜಿಬಿಎ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಪೊಲೀಸ್ ಕಮಿಷನರೇಟ್ಗಳು ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ನಿಮ್ಮಿಂದ ಸರ್ಕಾರ ಉತ್ತರದಾಯಿತ್ವವನ್ನು ಮಾತ್ರ ನಿರೀಕ್ಷಿಸುತ್ತದೆ. ಬೆಂಗಳೂರಿನಲ್ಲಿ ಉತ್ತಮ ಪೊಲೀಸ್ ವ್ಯವಸ್ಥೆ ಮೂಲಕ ಇಡೀ ರಾಜ್ಯಕ್ಕೆ ಸಂದೇಶ ಹೋಗಬೇಕು. ಸರ್ಕಾರಕ್ಕೆ ಉತ್ತಮ ಹೆಸರು ತರುವಂತಹ ಕಾರ್ಯ ಮಾಡಬೇಕು. ಕಾರ್ಯದಕ್ಷತೆ ಮಾನದಂಡದಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ನಿಮಗೆಲ್ಲರಿಗೂ ಉತ್ತಮವಾದ ಅವಕಾಶ ದೊರೆತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ.ಕೆಲವೊಮ್ಮೆ ಅನಿರೀಕ್ಷಿತವಾಗಿ ಕೆಲವು ಘಟನೆಗಳು ನಡೆಯುತ್ತವೆ. ಹಿಂದಿನ ತಪ್ಪುಗಳಿಂದ ಬೇಗನೆ ಪಾಠ ಕಲಿಯಬೇಕು. ಶಾಂತಿಪಾಲನೆ ಮಾಡುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ರೌಡಿಗಳಲ್ಲಿ ಭಯವಿರಬೇಕು. ಖಾಕಿ ಬಟ್ಟೆಗೆ ಪ್ರತಿಯೊಬ್ಬರೂ ಗೌರವ ನೀಡುವಂತೆ ಕರ್ತವ್ಯ ನಿರ್ವಹಿಸಬೇಕು. ಯಾರಿಗೆ ರಕ್ಷಣೆ ನೀಡಬೇಕೋ ಅವರಿಗೆ ರಕ್ಷಣೆಯನ್ನು ಖಾತ್ರಿಪಡಿಸಬೇಕು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಪೊಲೀಸರು ನಾಗರಿಕ ಸ್ನೇಹಿಯಾಗಿರಬೇಕು. ಸುಳ್ಳು ಸುದ್ದಿಗಳ ವಿರುದ್ಧ, ದ್ವೇಷ ಭಾಷಣಗಳ ವಿಷಯದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಶಕ್ತಿಗಳ ಮೇಲೆ ನಿರಂತರ ನಿಗಾ ಇರಿಸಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಸರ್ಕಾರಕ್ಕೆ ಉತ್ತಮ ಇಮೇಜ್ ಬರುವಂತೆ ನೋಡಿಕೊಳ್ಳಿ. ಸರ್ಕಾರದ ಆದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ನಿಮ್ಮೆಲ್ಲರ ಜವಾಬ್ದಾರಿ.
ಸೈಬರ್ ಅಪರಾಧ, ಆನ್ಲೈನ್ ವಂಚನೆಗಳ ಜಾಗೃತರಾಗಿರಬೇಕು. ಆರ್ಥಿಕ ಅಪರಾಧಗಳನ್ನು ಮಟ್ಟ ಹಾಕಲು ಸಂಘಟಿತ ಪ್ರಯತ್ನ ಅಗತ್ಯವಿದೆ. ಇದಕ್ಕೆ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿ. ರೌಡಿಗಳನ್ನು ಸಂಪೂರ್ಣವಾಗಿ ಮಟ್ಟ ಹಾಕುವ ಉದ್ದೇಶದಿಂದ ಪ್ರತ್ಯೇಕವಾಗಿ ರೌಡಿ ದಳವನ್ನು ಸ್ಥಾಪಿಸಿದ್ದೇವೆ. ಇದಕ್ಕೆ ಎಡಿಜಿಪಿ ಹಂತದ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಕಮಿಷನರೇಟ್ ಸ್ಥಾಪಿಸಿದ್ದೇವೆ ಎಂದು ಹೇಳಿದರು.
ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಆದರೆ ಹಲವು ಪ್ರಕರಣದಲ್ಲಿ ಪೊಲೀಸರೇ ಇದರಲ್ಲಿ ಶಾಮೀಲಾಗುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿ ವಸೂಲಿಗೆ ತೊಡಗುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.
ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ದಂಧೆಯ ಕೇಂದ್ರವಾಗಲು ಅವಕಾಶ ನೀಡಬಾರದು. ಪೊಲೀಸಿಂಗ್ ಎಲ್ಲೆಡೆ ಕಾಣುವಂತಿರಬೇಕು. ರಾತ್ರಿ ಗಸ್ತು ಹೆಚ್ಚಿಸಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಬೇಕು. ಇಡೀ ರಾಜ್ಯದ ಪೊಲೀಸ್ ಅಧಿಕಾರಿಗಳೊಂದಿಗೆ ಸಧ್ಯದಲ್ಲಿಯೇ ಇನ್ನೊಂದು ಸಭೆ ನಡೆಸುತ್ತೇನೆ. ನಿಮ್ಮಿಂದ ಉತ್ತಮ ಫಲಿತಾಂಶವನ್ನು ಬಯಸುತ್ತೇನೆ. ಮುಂದಿನ ಒಂದು ತಿಂಗಳಲ್ಲಿ ರಾಜ್ಯದ ಜನತೆಗೆ ಫಲಿತಾಂಶ ಕಾಣುವಂತೆ ಕಾರ್ಯ ನಿರ್ವಹಿಸಿ ಎಂದು ಹೇಳಿದರು.

*ಬೆಂಗಳೂರು ಭ್ರಷ್ಟಾಚಾರ ಮುಕ್ತ ನಗರವಾಗಬೇಕು*

ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ, “ನಗರದಲ್ಲಿ ಭ್ರಷ್ಟಾಚಾರ, ಮಾದಕ ವಸ್ತುಗಳ ಹಾವಳಿ ಹಾಗೂ ಅಪರಾಧ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಬೆಂಗಳೂರು ಭ್ರಷ್ಟಾಚಾರ ಮುಕ್ತ ನಗರವಾಗಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದರು.


“ರಾಜ್ಯದಲ್ಲಿ ಶಾಂತಿ ನೆಲೆಸಿರಬೇಕು. ಅದು ನಮ್ಮ ಅತ್ಯಂತ ಪ್ರಮುಖ ಆದ್ಯತೆ. ನಾಗರಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ಇರಬೇಕು. ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಇರಬೇಕು. ಕೆಳಹಂತದವರೆಗೂ ಪೊಲೀಸ್ ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯದಂತೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಯಾವುದೇ ಪ್ರಭಾವ, ಸಂಬಂಧಗಳಿಗೆ ಮಣಿದು ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದೇನೆ” ಎಂದರು.
“ಬೆಂಗಳೂರು ವ್ಯಾಪ್ತಿಗೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಿರುವುದರ ಜತೆಗೆ, ಹೊಸ ಪೊಲೀಸ್ ಠಾಣೆಗಳನ್ನು ಸೇರಿಸಿ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್ಗಳನ್ನು ರಚಿಸಲಾಗಿದೆ. ಐದು ಪೊಲೀಸ್ ಕಮಿಷನರ್ಗಳನ್ನು ನೇಮಕ ಮಾಡಲಾಗಿದ್ದು, ನೂರಾರು ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಸಂಚಾರ ವ್ಯವಸ್ಥೆ, ರೌಡಿ ಚಟುವಟಿಕೆಗಳು ಹಾಗೂ ಅಪರಾಧ ನಿಯಂತ್ರಣಕ್ಕೆ ವಿಶೇಷ ಆದ್ಯತೆ ನೀಡಲು ಹೊಸ ಹುದ್ದೆಗಳನ್ನೂ ಸೃಷ್ಟಿಸಲಾಗಿದೆ” ಎಂದರು.
“ಇದು ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ವಿನೂತನ ಪ್ರಯೋಗವಾಗಿದೆ. ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿ ಗೌರವ ಇರಬೇಕು. ಅದೇ ಸಂದರ್ಭದಲ್ಲಿ ಅಪರಾಧ ಮಾಡುವವರಿಗೆ ಪೊಲೀಸರ ಬಗ್ಗೆ ಭಯವೂ ಇರಬೇಕು. ಗೌರವಕ್ಕೆ ಅರ್ಹರಾದವರಿಗೆ ಗೌರವ ಸಿಗಬೇಕು, ರಕ್ಷಣೆ ಅಗತ್ಯವಿರುವವರಿಗೆ ರಕ್ಷಣೆ ಸಿಗಬೇಕು, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಉದ್ದೇಶದಿಂದಲೇ ಪೊಲೀಸ್ ವ್ಯವಸ್ಥೆಯನ್ನು ಐದು ವಿಭಾಗಗಳಾಗಿ ವಿಂಗಡಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ” ಎಂದು ಹೇಳಿದರು.

*ಜಾತಿ ಸಂಘರ್ಷಕ್ಕೆ ಪ್ರಚೋದನೆ ಬೇಡ*
“ಬಸವಣ್ಣನವರ ವಿಚಾರದಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು. ಈ ಬಗ್ಗೆ ಉಪಮುಖ್ಯಮಂತ್ರಿಗಳು ಈಗಾಗಲೇ ಸಚಿವ ಸಂಪುಟ ಸಭೆ ತೀರ್ಮಾನ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಯಾವುದೇ ಸಮುದಾಯದ ವಿರುದ್ಧವೂ ನಡೆದುಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು