ಇತ್ತೀಚಿನ ಸುದ್ದಿ
Kodagu | ಕಾಡಾನೆ ಹಾವಳಿ: ವಿರಾಜಪೇಟೆಯ ನೊಖ್ಯ ಗ್ರಾಮದಲ್ಲಿ ಬೆಳೆಗಾರರಿಗೆ ಅಪಾರ ನಷ್ಟ
10/11/2026, 16:33
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕಿನ ನೊಖ್ಯ ತಿತಿಮತಿ ಗ್ರಾಮದಲ್ಲಿ ನಿನ್ನೆ ರಾತ್ರಿ ಕಾಡಾನೆಗಳ ಹಿಂಡು ಮರಿಯೊಂದಿಗೆ ದಾಳಿ ನಡೆಸಿ ಚೆಪ್ಪುಡೀರ ಕಾರ್ಯಪ್ಪನವರ ಗದ್ದೆಯಲ್ಲಿದ್ದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತುಳಿದು ತಿಂದು ಧ್ವಂಸಗೊಳಿಸಿವೆ. ಸೋಲಾರ್ ತಂತಿ ಬೇಲಿ ಅಳವಡಿಸಿದ್ದರೂ ಸಹ ಕಾಡಾನೆಗಳು ಅದನ್ನು ಲೆಕ್ಕಿಸದೆ ಒಳನುಗ್ಗಿ ದಾಂಧಲೆ ನಡೆಸಿವೆ. ಇನ್ನೇನು ಕೆಲವೇ ದಿನಗಳಲ್ಲಿ ಹುತ್ತರಿ ಹಬ್ಬ ಸಮೀಪಿಸುತ್ತಿದ್ದು, ಕೊಯ್ಲಿಗೆ ಸಿದ್ಧವಾಗಿದ್ದ ಫಸಲನ್ನು ಸಂಪೂರ್ಣ ನಾಶವಾಗಿರುವುದರಿಂದ ರೈತಾಪಿ ವರ್ಗ ತೀವ್ರ ಕಂಗಾಲಾಗಿದೆ.
ಈ ಸಮಸ್ಯೆಯನ್ನು ಹಲವು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು ಕೂಡ, ಪ್ರತಿ ವರ್ಷವೂ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ದಿನದಿಂದ ದಿನಕ್ಕೆ ಆನೆಗಳ ಉಪಟಳ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಹಾಗೂ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆನೆಗಳು ತೋಟ-ಗದ್ದೆಗಳಿಗೆ ನುಗ್ಗದಂತೆ ಕಟ್ಟುನಿಟ್ಟಾದ, ಸೂಕ್ತ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.












