ಇತ್ತೀಚಿನ ಸುದ್ದಿ
52000 ಕೋಟಿ ವಂಚನೆ ಪ್ರಕರಣ | ಕರ್ನಾಟಕ ಮೂಲದ ಬಿ.ಆರ್. ಶೆಟ್ಟಿ ತಪ್ಪಿತಸ್ಥ: ಯುಎಇ ಕೋರ್ಟ್ ತೀರ್ಪು
09/11/2026, 12:30
ಅಬುಧಾಬಿ(reporterkarnataka.com): 1975ರಲ್ಲಿ ಯುಎಇಯ ಅಬುಧಾಬಿಯಲ್ಲಿ ಸ್ಥಾಪನೆಯಾದ ಪ್ರಮುಖ ಆರೋಗ್ಯ ಸೇವಾ ಸಮೂಹ ಸಂಸ್ಥೆಯಾದ ‘ಎನ್‌ಎಂಸಿ ಹೆಲ್ತ್‌ಕೇರ್’ 2020ರಲ್ಲಿ ಬಾಗಿಲು ಹಾಕಲು ಕಾರಣವಾದ 52000 ಕೋಟಿ ಬೃಹತ್ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ಸಂಸ್ಥೆಯ ಸ್ಥಾಪಕರಾದ ಕರ್ನಾಟಕ ಮೂಲದ ಬಿ.ಆರ್.ಶೆಟ್ಟಿ ಮತ್ತು ಮಾಜಿ ಸಿಇಒ ಪ್ರಶಾಂತ್ ಮಂಗತ್ ದೋಷಿಗಳು ಎಂದು ಅಬುಧಾಬಿ ಗ್ಲೋಬಲ್ ಮಾರ್ಕೆಟ್ ನ್ಯಾಯಾಲಯ 200 ಪುಟಗಳ ತೀರ್ಪು ನೀಡಿದೆ.
ಸಂಸ್ಥೆಯ ಹಣ ದುರುಪಯೋಗ, ಸಾಲದ ವಿವರಗಳನ್ನು ಮರೆಮಾಚುವುದು ಹಾಗೂ ಹಣಕಾಸು ದಾಖಲೆಗಳನ್ನು ತಿರುಚುವ ಮೂಲಕ, ಶೆಟ್ಟಿ ಮತ್ತು ಮಂಗತ್ 2012ರಿಂದ 2020ರ ವರೆಗೆ ಸಂಸ್ಥೆಯ ವ್ಯವಹಾರದಲ್ಲಿ ಉದ್ದೇಶಪೂರ್ವಕವಾಗಿ ವಂಚನೆಯಲ್ಲಿ ತೊಡಗಿದ್ದುದು ಸಾಬೀತಾಗಿದೆ ಎಂದು ಕೋರ್ಟ್ ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಶೆಟ್ಟಿ ಮತ್ತು ಮಂಗತ್ ಪಾವತಿಸಬೇಕಾದ ಅಂತಿಮ ಮೊತ್ತವನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದೆ.
ಆದರೆ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿರುವ ಶೆಟ್ಟಿ, ‘ನಾನು ಹಿರಿಯ ಅಧಿಕಾರಿಗಳಿಂದ ವಂಚನೆಗೆ ಒಳಗಾಗಿದ್ದೇನೆ’ ಎಂದು ವಾದಿಸಿದ್ದರು. ಅತ್ತ, ‘ಸಂಸ್ಥೆಯ ಹಣಕಾಸು ವ್ಯವಹಾರಗಳ ಮೇಲೆ ನನ್ನ ನಿಯಂತ್ರಣವಿರಲಿಲ್ಲ’ ಎಂದು ಮಂಗತ್ ಹೇಳಿದ್ದಾರೆ. ಆದರೆ, ಈ ವಾದಗಳನ್ನು ನ್ಯಾಯಾಲಯ ತಳ್ಳಿಹಾಕಿದೆ.













