ಇತ್ತೀಚಿನ ಸುದ್ದಿ
ಅತ್ಯಾಚಾರ ಎಸಗಿದ ಯುವಕರನ್ನು ಅಪಹರಿಸಿ ಹಣದ ಬೇಡಿಕೆಯಿಟ್ಟ ಸಂತ್ರಸ್ತೆ: 10 ಮಂದಿ ಆರೋಪಿಗಳ ಬಂಧನ
30/10/2026, 15:42
ಬೆಂಗಳೂರು(reporterkarnataka.com): ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಸಂತ್ರಸ್ತೆಯೇ ಅಪಹರಿಸಿ ಹಣದ ಬೇಡಿಕೆಯಿಟ್ಟ ಪ್ರಕರಣವೊಂದನ್ನು ಮಾರತಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಈ ಮಧ್ಯೆ ಅಪಹರಣಕಾರರಿಂದ ರಕ್ಷಿಸಲ್ಪಟ್ಟ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಅ.28ರಂದು ತನ್ನ ಮಗ ಬುರ್ಸು ಮಹೇಂದ್ರ(23) ಹಾಗೂ ಆತನ ಸ್ನೇಹಿತ ಯೆರ್ರಿಬೋನಿ ತರುಣ್( 23 ) ಎಂಬವರನ್ನು ಯಾರೋ ಅಪಹರಿಸಿದ್ದು, 10 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಅಪರಿಚಿತರು ಕರೆ ಮಾಡಿದ್ದಾರೆ ಎಂದು ವ್ಯಕ್ತಿಯೋರ್ವ ಮಾರತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾರತಹಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಪಹರಣಕ್ಕೆ ಸಂಬಂಧಿಸಿ ಯುವತಿಯೊಬ್ಬಳ ಸಹಿತ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮಧ್ಯೆ ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಪಹರಣಕ್ಕೀಡಾಗಿದ್ದ ಮಹೇಂದ್ರ ಹಾಗೂ ತರುಣ್ ನನ್ನೂ ಪೊಲೀಸರು ಬಂಧಿಸಿದ್ದಾರೆ.













