ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಂಪನಕಟ್ಟೆ ಶಾಖೆ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ
07/09/2026, 19:03
ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಂಪನಕಟ್ಟೆ ಶಾಖೆಯ ವತಿಯಿಂದ ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ಮತ್ತು ಲಯನ್ಸ್ ಹಾಗೂ ಲಿಯೋ ಕ್ಲಬ್ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಡಾಕ್ಟರ್ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಮಂಗಳೂರು, ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಮತ್ತು ಮಂಗಳ ಆಸ್ಪತ್ರೆ, ಕದ್ರಿ ಮಂಗಳೂರು ಇದರ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವು ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ ಕಟ್ಟಡದ ಎರಡನೇ ಮಹಡಿಯಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾದ ಶ್ರೀ ಆನಂದ ಅವರು ಉದ್ಘಾಟಿಸಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಆರೋಗ್ಯದ ಕಾಳಜಿ ವಹಿಸಿ ಎಲ್ಲಾ ಶಾಖೆಗಳಲ್ಲಿ ನಿರಂತರವಾಗಿ ಉಚಿತ ಆರೋಗ್ಯ ಶಿಬಿರವನ್ನು ನಡೆಸುತ್ತಿರುವುದು ಶ್ಲಾಘನೀಯ” ಎಂದರು.
ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ.) ಅಧ್ಯಕ್ಷರಾದ ಶ್ರೀ ಬಿ.ಎಂ ರಾಜ್ ಗೋಪಾಲ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಮಹಾಸಭೆಯ ಸಂದರ್ಭದಲ್ಲಿ ವ್ಯವಸ್ಥಿತವಾಗಿ ವೈದ್ಯಕೀಯ ಶಿಬಿರವನ್ನು ಆಯೋಜಿಸಲು ಸಹಕಾರ ನೀಡುತ್ತಿದೆ. ಉಚಿತ ಆರೋಗ್ಯ ಶಿಬಿರವನ್ನು ನಡೆಸಲು ಸಹಕಾರ ನೀಡಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್, ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಲಯನ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಲಯನ್ ಹೇಮಾ ರಾವ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಎ.ಜೆ ಇನ್ಸ್ಟಿಟ್ಯೂಟ್ ಮಂಗಳೂರು ಇದರ ವೈದ್ಯರಾದ ಡಾ. ಫಿರ್ದೋಸ್, ಮಂಗಳ ಆಸ್ಪತ್ರೆಯ ಡಾ. ಆರೋಲ್ ಹಾಗೂ ಡಾಕ್ಟರ್ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಶಿಕ್ ಸಾಲಿಯಾನ್ ರವರು ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಇದು ಸಂಘದ 114ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಸಂಘವು ಹಿರಿಯ ನಾಗರಿಕರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಪ್ರತಿ ವರ್ಷ ನಿರಂತರವಾಗಿ ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). ಮಂಗಳೂರು ಇದರ ಮಹಾಸಭೆಯ ದಿನದಂದು ಆಯೋಜಿಸುತ್ತಾ ಬರುತ್ತಿದೆ. ಈ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿರುವ ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). ಮಂಗಳೂರು ಇದರ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಹಾಗೆಯೇ ಶಿಬಿರದ ಯಶಸ್ಸಿಗೆ ಸಹಕರಿಸಿರುವ ಲಯನ್ಸ್ ಹಾಗೂ ಲಿಯೋ ಕ್ಲಬ್ ಮಂಗಳೂರು ಇದರ ಸರ್ವ ಪದಾಧಿಕಾರಿಗಳಿಗೆ ಹಾಗೂ ಡಾಕ್ಟರ್ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಮಂಗಳೂರು, ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಮತ್ತು ಮಂಗಳ ಆಸ್ಪತ್ರೆ, ಕದ್ರಿ ಮಂಗಳೂರು ಇದರ ಆಡಳಿತ ವರ್ಗ ಹಾಗೂ ವೈದ್ಯರ ತಂಡದವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸಂಘದಲ್ಲಿ ಪ್ರಸ್ತುತ 1000 ದಿನಗಳ ಠೇವಣಿಗಳಿಗೆವಿಶೇಷ ಬಡ್ಡಿ ದರ ಶೇ. 10.50 ವನ್ನು ನೀಡಲಾಗುತ್ತಿದ್ದು, ಸಂಘದ ಸದಸ್ಯರಿಗೆ ಸ್ಮರ್ಧಾತ್ಮಕ ದರದಲ್ಲಿ ಎಲ್ಲಾ ರೀತಿಯ ವಿಮಾ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರುಗಳಾದ ಶ್ರೀ ಪರಮೇಶ್ವರ ಜಿ. ಪೂಜಾರಿ, ಶ್ರೀ ರಮಾನಾಥ್ ಸನಿಲ್, ಶ್ರೀ ಗೋಪಾಲ್ ಎಮ್, ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ.) ಮಂಗಳೂರು ಇದರ ಗೌರವಾಧ್ಯಕ್ಷರು ಹಾಗೂ ಸಂಘದ ನಿರ್ದೇಶಕರಾದ ಶ್ರೀ ಸೀತಾರಾಮ್ ಎನ್, ಲಯನ್ ಕ್ಲಬ್ ಜಿಲ್ಲೆ 317ಡಿ ಯ ನಿಕಟಪೂರ್ವ ವಲಯಾಧ್ಯಕ್ಷರಾದ ಲಯನ್ ಶೀನ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಹರ್ಷಿತರವರು ವಂದಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ರವರು ಕಾರ್ಯಕ್ರಮ ನಿರೂಪಿಸಿದರು.












