ಇತ್ತೀಚಿನ ಸುದ್ದಿ
ರಾಜ್ಯದ ನಾಲ್ಕು ಪ್ರಮುಖ ನಾಯಕರ ರಾಜ್ಯಸಭೆ ಅವಧಿ ಅಂತ್ಯ: ಜೂನ್ 18ರಂದು ಚುನಾವಣೆ
22/05/2026, 16:09
ಬೆಂಗಳೂರು(reporterkarnataka.com): ರಾಜ್ಯಸಭೆಯ ಖಾಲಿಯಾಗಲಿರುವ ಸದಸ್ಯರ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಿಸಿದೆ. ಜೂನ್-ಜುಲೈ 2026ರಲ್ಲಿ ಅವಧಿ ಮುಗಿಯಲಿರುವ 24 ಸದಸ್ಯರ ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದೆ ಎಂದು ಭಾರತ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಜೂನ್ 1ರಂದು ಅಧಿಸೂಚನೆ ಪ್ರಕಟವಾಗಲಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದ್ದು, ಜೂನ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 11ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಿಗದಿಯಾಗಿದೆ.
ಜೂನ್ 18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಜೂನ್ 20 ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.
ಚುನಾವಣೆ ವೇಳೆ ಮತಪತ್ರದಲ್ಲಿ ಆದ್ಯತೆ ಗುರುತಿಸಲು ಚುನಾವಣಾಧಿಕಾರಿ ನೀಡುವ ವಿಶೇಷ ವೈಲೆಟ್ ಬಣ್ಣದ ಪೆನ್ನನ್ನೇ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ವೀಕ್ಷಕರನ್ನು ನೇಮಕ ಮಾಡಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದ ನಾಲ್ವರು ಪ್ರಮುಖ ಸದಸ್ಯರ ಅವಧಿ ಮುಕ್ತಾಯವಾಗುತ್ತಿದೆ. ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈರಣ್ಣ ಕಡಾಡಿ ಹಾಗೂ ನಾರಾಯಣ ಕೊರಗಪ್ಪ ಅವರ ಅವಧಿ 2026ರ ಜೂನ್ 25ರಂದು ಮುಕ್ತಾಯಗೊಳ್ಳಲಿದೆ.
ಅಯೋಧ್ಯಾ ರಾಮಿ ರೆಡ್ಡಿ ಅಲ್ಲಾ, ಪಿಲ್ಲಿ ಸುಭಾಶ್ಚಂದ್ರ ಬೋಸ್, ರಾಮ್‌ಭಾಯ್ ಹರ್ಜಿಭಾಯಿ ಮೊಕರಿಯಾ, ಜಾರ್ಜ್ ಕುರಿಯನ್, ಮಹಾರಾಜ ಸನಜವೋಬ ಲೀಶೆಂಬಾ, ವಾನ್ವೇರೋಯ್ ಖಾರ್ಲುಖಿ, ನೀರಜ್ ಡಾಂಗಿ, ರಾಜೇಂದ್ರ ಗೆಹ್ಲೋಟ್, ನಬಮ್ ರೆಬಿಯಾ, ಈರಣ್ಣ ಕಡಾಡಿ, ಮತ್ತು ಕೆ. ವನಲಾಲ್ವೇನಾ ಸೇರಿದಂತೆ ಇತರ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಆಗಸ್ಟ್ 4, 2025 ರಿಂದ ಖಾಲಿಯಾಗಿರುವ ಜಾರ್ಖಂಡ್‌ನ ದಿವಂಗತ ಶಿಬು ಸೊರೆನ್ ಅವರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಇದರೊಂದಿಗೆ ಆಂಧ್ರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ 10 ರಾಜ್ಯಗಳ ಒಟ್ಟು 24 ರಾಜ್ಯಸಭಾ ಸದಸ್ಯರ ಅವಧಿ ಜೂನ್-ಜುಲೈ 2026ರೊಳಗೆ ಅಂತ್ಯವಾಗಲಿದ್ದು, ಈ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಪಟ್ಟಿಯಲ್ಲಿ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ರಾಜಸ್ಥಾನದ ರಾಜೇಂದ್ರ ಗೆಹ್ಲೋಟ್, ಜಾರ್ಖಂಡ್‌ನ ದೀಪಕ್ ಪ್ರಕಾಶ್ ಸೇರಿದಂತೆ ಹಲವು ಪ್ರಮುಖ ನಾಯಕರ ಹೆಸರುಗಳಿವೆ.
ರಾಜಕೀಯ ತೆರೆಮರೆಗೆ ಸರಿಯುತ್ತಾರೆ ದೊಡ್ಡ ಗೌಡರು
ಈ ಎಲ್ಲಾ ಬೆಳವಣಿಗೆ ನಡುವೆ ರಾಜ್ಯದಲ್ಲಿ ಮತ್ತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಕೆಲಸ ನಡೆಯುತ್ತಿದೆ ಎಂದು ಚರ್ಚೆಗಳು ನಡೆಯುತ್ತಿವೆಯಾದರೂ ಸಹ ಬಿಜೆಪಿಯಲ್ಲಿ ಸದಾನಂದ ಗೌಡ ಈ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಕಾಂಗ್ರೆಸ್‌ನಲ್ಲಿ ಮೋಹನ್ ಕಟಾರ್ಕಿ ಪ್ರಮುಖರಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿದ್ದು, ಕರ್ನಾಟಕದ ಪರವಾಗಿ ಅಂತಾರಾಜ್ಯ ನದಿ ವಿವಾದಗಳಲ್ಲಿ ವಾದ ಮಂಡಿಸಿರುವ ಅನುಭವ ಹೊಂದಿದ್ದಾರೆ. ಮುಂಬೈ-ಕರ್ನಾಟಕ ಭಾಗದವರಾದ ಇವರನ್ನು ಮೇಲ್ಮನೆಗೆ ಕಳುಹಿಸಬೇಕೆಂಬ ಬೇಡಿಕೆ ಸ್ಥಳೀಯ ನಾಯಕರಿಂದ ಬಲವಾಗಿದೆ.
ಇದೊಂದಿಗೆ ಡಾ. ಅಂಜಲಿ ನಿಂಬಾಳ್ಕರ್ ಖಾನಾಪುರದ ಮಾಜಿ ಶಾಸಕಿಯಾಗಿದ್ದು, ಎಐಸಿಸಿ ವಕ್ತಾರರಾಗಿ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್‌ನ ಆಪ್ತ ವಲಯದಲ್ಲಿರುವ ಇವರು ಮಹಿಳಾ ಕೋಟಾದಡಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವ ಇವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಮರು ಆಯ್ಕೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.












