ಇತ್ತೀಚಿನ ಸುದ್ದಿ
ಮಂಗಳೂರಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ವಿದ್ಯಾರ್ಥಿನಿ ಅರೆಸ್ಟ್ : 35 ಲಕ್ಷ ರೂ. ಮೌಲ್ಯದ ಗಾಂಜಾ ವಶ
13/05/2026, 21:24
ಮಂಗಳೂರು(reporterkarnataka.com): ಮಂಗಳೂರಲ್ಲಿ ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಸಿಎ ವಿದ್ಯಾರ್ಥಿನಿಯನ್ನು ಬಂಧಿಸಿ, 35 ಲಕ್ಷ ರೂ. ಮೌಲ್ಯದ 1.42 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿ, ಸದ್ಯ ಕುಂದಾಪುರ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸುಹಾನ (21) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಈ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದು, ಮೇ 12ರಂದು ಮಾರಾಟ ಮಾಡಲೆಂದು ಸುಹಾನ ಹೈಡ್ರೋವೀಡ್ ಗಾಂಜಾವನ್ನು ಸಾಗಿಸುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆಯ ಪೊಲೀಸರು ತಂಡ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಅವಳ ಬಳಿ ಇದ್ದ ಸುಮಾರು 35 ಲಕ್ಷ ರೂ. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೋವೀಡ್ ಗಾಂಜಾ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಮತ್ತು ಇತರ ಸೊತ್ತನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಮಾದಕದ್ರವ್ಯವನ್ನು ಆರೋಪಿತೆ ಚೆನ್ನೈನಿಂದ ತರಿಸಿಕೊಂಡು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಳು. ಆರೋಪಿತೆಯ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 32/2026 ಕಲಂ: 8(ಸಿ), 20(ಬಿ) ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.













