ಇತ್ತೀಚಿನ ಸುದ್ದಿ
ಅಕ್ಷರ ಸಂತ ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್
27/03/2026, 18:14
ಅಕ್ಷರ ಸಂತ ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್
ಮಂಗಳೂರು(reporterkarnataka.com): ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ, ಇತ್ತೀಚೆಗಷ್ಟೇ ನಿಧನರಾದ ಯಕ್ಷಗಾನದ ಮೇರು ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಕಟಿಸಿದೆ.
ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವದ ಕುರಿತು ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಮಾ. 28ರಂದು ಪೂರ್ವಾಹ್ನ 11 ಗಂಟೆಗೆ ವಿವಿ ಆವರಣದ ಮಂಗಳಾ ಸಭಾಂಗಣದಲ್ಲಿ ಈ ಸಂಭ್ರಮ ನಡೆಯಲಿದೆ. ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಉಪಸ್ಥಿತರಿರುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಈ ಬಾರಿ ಒಟ್ಟು 162 ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಇವರಲ್ಲಿ 74 ಮಹಿಳೆಯರು ಹಾಗೂ 88 ಪುರುಷರಿದ್ದಾರೆ. ವಿಶೇಷವೆಂದರೆ 11 ಮಂದಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳೂ ಈ ಪಟ್ಟಿಯಲ್ಲಿದ್ದಾರೆ. ವಿವಿಧ ವಿಭಾಗಗಳಲ್ಲಿ 56 ಚಿನ್ನದ ಪದಕ ಹಾಗೂ 57 ನಗದು ಬಹುಮಾನಗಳನ್ನು ವಿತರಿಸಲಾಗುವುದು. ಒಟ್ಟು 147 ರ್ಯಾಂಕ್ ಗಳ ಪೈಕಿ ಮೊದಲ ರ್ಯಾಂಕ್ ಗಳಿಸಿದ 69 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
”ಶಿಕ್ಷಣ, ಕಲೆ ಮತ್ತು ಜಾನಪದ ಕ್ಷೇತ್ರದ ಈ ಮೂವರು ಸಾಧಕರನ್ನು ಗೌರವಿಸುವ ಮೂಲಕ ವಿಶ್ವವಿದ್ಯಾನಿಲಯವು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ. ದೇವೇಂದ್ರಪ್ಪ, ಪರೀಕ್ಷಾಂಗ ಕುಲಸಚಿವ ಗಣೇಶ್ ಸಂಜೀವ ಹಾಗೂ ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಉಪಸ್ಥಿತರಿದ್ದರು.












