ಇತ್ತೀಚಿನ ಸುದ್ದಿ
ತುಂಗಭದ್ರಾ ಹಿನ್ನೀರಿನಿಂದ ಚಿಕ್ಕಕೆರೆಯ ಏರಿಯ ಮೇಲೆ ಕುಡಿಯುವ ನೀರು ಪೈಪ್ ಲೈನ್ ಅಳವಡಿಕೆಗೆ ವಿರೋಧ: ಪ್ರತಿಭಟನೆ
17/02/2022, 12:45
ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಿಕ್ಕ ಕೆರೆಯ ಏರಿಯ ಮೇಲೆ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಕೆ ವಿರೋಧಿಸಿ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಕೆರೆ ಏರಿ ರಾಜ್ಯ ಹೆದ್ದಾರಿ 45 ಆಗಿದೆ. ಆದರೆ ಕೆರೆಯ ಏರಿ ಕಿರಿದಾಗಿದೆ. ಇದರ ಮೇಲೆ ಪೈಪ್ ಲೈನ್ ಅಳವಡಿಸುವುದುರಿಂದ ಅಪಾಯ ಹೆಚ್ಚಾಗಿದೆ. ಪಪಂ ಕುಡಿಯುವ ನೀರು ಪೂರೈಸುವ ಪೈಪ್ ಲೈನ್‍ನ್ನು ಕೆರೆ ಏರಿಯ ಮೇಲೆ ಅಳವಡಿಸಿತ್ತು. ಸೋರುವಿಕೆ ಸಮಸ್ಯೆಯಿಂದ ಪೈಪ್ ಲೈನ್ ಪದೇ ಪದೇ ಹಾಳಾಗಿ ಹೆದ್ದಾರಿ ಹಾಳಾಗುತ್ತಿತ್ತು. ಹೀಗಾಗಿ ಪಪಂ ಕುಡಿಯುವ ನೀರು ಪೂರೈಸುವ ಪೈಪ್‍ಗಳನ್ನು ಕೆರೆಯ ಪಕ್ಕದಲ್ಲಿ ಕೊಂಡೊಯ್ಯಲಾಗಿದೆ. ಇದೀಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ 45 ಗ್ರಾಮಗಳಿಗೆ ನೀರು ಪೂರೈಸುವ ಬೃಹತ್ ಪೈಪ್‍ಗಳನ್ನು ಇದೇ ಕೆರೆ ಏರಿ ಅಳವಡಿಸಲು ಮುಂದಾಗಿದೆ.
ಪಟ್ಟಣ ಪಂಚಾಯತ್ ಸದಸ್ಯ ಜಿ.ಆರ್.ರವಿಕುಮಾರ್ ಮಾತನಾಡಿ, ನಾಯಕನಹಟ್ಟಿ-ಗಂಗಯ್ಯನಹಟ್ಟಿ ನಡುವೆ ಕೆರೆಯ ಮೇಲೆ ಪೈಪ್ ಅಳವಡಿಕೆಗೆ ಸಣ್ಣ ನೀರಾವರಿ ಇಲಾಖೆ 31.08.2021 ರಂದು ಅನುಮತಿ ನೀಡಿದೆ. ನೆಲದಿಂದ 1.2 ಮೀಟರ್ ಆಳದಲ್ಲಿ ಪೈಪ್‍ಗಳನ್ನು ಅಳವಡಿಸಲು ಅನುಮತಿ ನೀಡಿದೆ. ಇದರಿಂದ ಸಣ್ಣ ಕೆರೆ ಏರಿಗೆ ಅಪಾಯವಿದೆ. ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ ಐತಿಹಾಸಿಕ ಕೆರೆಗೆ ಅಪಾಯ ಉಂಟುಮಾಡುವ ಕಾಮಗಾರಿ ಇದಾಗಿದೆ. ಪೈಪ್ ಲೈನ್‍ನ್ನು ಕೆರೆಯಲ್ಲಿ ಅಥವ ಕೆರೆಯ ಏರಿಯ ಹೊರ ಬದಿಯಲ್ಲಿ ಅಳವಡಿಸಬಹುದಾಗಿದೆ. ಇದರಿಂದ ಕೆರೆಗೆ ಯಾವುದೇ ಅಪಾಯವಿಲ್ಲ. ಯಾವುದೇ ಕಾರಣಕ್ಕೂ ಕೆರೆ ಏರಿ ಮೇಲೆ ಪೈಪ್ ಅಳವಡಿಕೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಡಬ್ಲೂಡಿ, ಪಪಂ, ಕುಡಿಯುವ ನೀರು ಪೂರೈಕೆ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸಿ ತೀರ್ಮಾನಿಸುವುದಾಗಿ ಪ್ರತಿಭಟನಕಾರರಿಗೆ ತಿಳಿಸಿದರು. ಹೀಗಾಗಿ ಕಾಮಗಾರಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಕೌನ್ಸಿಲರ್ ತಿಪ್ಪೇಸ್ವಾಮಿ, ಮಾಜಿ ಕೌನ್ಸಿಲರ್ ಬಸಣ್ಣ, ಮುಖಂಡರಾದ ಶ್ರೀಕಾಂತ, ಪಂಚಾಕ್ಷರಯ್ಯ ಮತ್ತಿತರರಿದ್ದರು.
ಸಣ್ಣ ನೀರಾವರಿ ಇಲಾಖೆ ಎಇಇ, ಗುರು ಬಸವರಾಜಯ್ಯ, ಕೆರೆ ಏರಿಗೆ ಹಾನಿಯಾಗುವಂತೆ ಪೈಪ್ ಲೈನ್ ಹಾಕಲು ಅವಕಾಶವಿಲ್ಲ. ಜತೆಗೆ ಈಗ ಹಾಕಲಾಗುತ್ತಿರುವ ಪೈಪ್‍ಗಳು ಪಿವಿಸಿ ಪೈಪ್‍ಗಳಲ್ಲ. ಡಿಐ (ಡಕ್ಟೈಲ್ ಐರನ್) ಎಂದು ಕರೆಯಲಾಗುವ ಈ ಪೈಪ್ ಗಳು ತುಕ್ಕು ಹಿಡಿಯದ ಹಾಗೂ ಸೋರಿಕೆಯಿಲ್ಲದ ಹೆಚ್ಚಿನ ಒತ್ತಡವನ್ನು ತಡೆಯಬಲ್ಲವಾಗಿವೆ. ಸಾರ್ವಜನಿಕ ವಿರೋಧವನ್ನು ಪರಿಗಣಿಸಿ ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲಿ ಪಿಡಬ್ಲೂಡಿ, ಪಪಂ ಹಾಗೂ ನೀರು ಪೂರೈಕೆ ಇಲಾಖೆ ಅಧಿಕಾರಿಗಳ ಜತೆಗೆ ಸ್ಥಳ ಪರಿಶೀಲನೆ ನಡೆಸಲಾಗುವುದು.
ಫೋಟೋಡಿ16-ಸಿಎಲ್‍ಕೆ3 ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಕೆರೆ ಏರಿ ಮೇಲೆ ಪೈಪ್ ಲೈನ್ ಕಾಮಗಾರಿ ತಡೆ ಪ್ರದೇಶಕ್ಕೆ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.