ಇತ್ತೀಚಿನ ಸುದ್ದಿ
ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
10/08/2024, 20:31
ಮಂಗಳೂರು(reporterkarnataka.com): ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಸಮಾರಂಭವು ಇಮಾಮ್ ಜನಾಬ್ ಇಝೂದ್ದೀನ್ ಕೌಸರಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಾರ್ಥನೆಯನ್ನು ಸಾಲಿ ಅಶಾಮ್ (ಸಹಾಯಕ ಪ್ರಾಧ್ಯಾಪಕರು) ಅವರು ಅನುವಾದಿಸಿದರು. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ (ಮೌಲ್ಯಮಾಪನ) ಡಾ. ದೇವೇಂದ್ರಪ್ಪ ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿ ಉನ್ನತ ಶಿಕ್ಷಣದ ಮಹತ್ವ ಮತ್ತು ಮುಂದಿನ ಜೀವನದ ಸಾಧನೆಗೆ ನೆರವಾಗುವ ಹಿತನುಡಿಗಳನ್ನು ನುಡಿದರು.
ಕ್ಯಾಲಿಕಟ್ ಮತ್ತು ಕಣ್ಣೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಬ್ದುಲ್ ರಹಿಮಾನ್ , ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ, ಟ್ರಸ್ಟಿ ಅಬ್ದುಲ್ ಲತೀಫ್ ಇಬ್ರಾಹಿಂ, ಹಣಕಾಸಿನ ನಿರ್ದೇಶಕರಾದ ಅಹ್ಮದ್ ಕುಟ್ಟಿ , ಎಜಿಎಂ ಕ್ಯಾಂಪಸ್ ಶರಪುದ್ಧೀನ್ ಪಿ.ಕೆ., ವಿದ್ಯಾರ್ಥಿ ವ್ಯವಹಾರ ಮುಖ್ಯಸ್ಥರಾದ ಸಯ್ಯದ್ ಅಮೀನ್ ಅಹಮದ್ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತಿದ್ದರು.
ಪ್ರಾಂಶುಪಾಲ ಡಾ. ಸರ್ಫ್ರಾಜ್ ಜೆ ಹಾಸಿಮ್ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು.
ಫುಟ್‌ಬಾಲ್ ಆರ್ಮ್ ರೊಟೇಶನ್‌ಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಛಾಪನ್ನು ಮೂಡಿಸಿದ ಬಿಸಿಎ ವಿದ್ಯಾರ್ಥಿ ಕೃತಿಕ್ ರೋಶನ್ ಅವರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಇದು ಶೈಕ್ಷಣಿಕವಾಗಿ ಮೀರಿದ ಪ್ರತಿಭೆಯನ್ನು ಪೋಷಿಸುವ ಕಾಲೇಜಿನ ಬದ್ಧತೆಗೆ ಸಾಕ್ಷಿಯಾಗಿದೆ.
ಪದವೀಧರರು ತಮ್ಮ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಿದ್ದಂತೆ, ವಾತಾವರಣವು ಹೆಮ್ಮೆ, ಸಂತೋಷ ಮತ್ತು ಸಾಧನೆಯ ಭಾವದಿಂದ ತುಂಬಿತ್ತು. ತಮ್ಮ ಪ್ರೀತಿಪಾತ್ರರು ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ ಎಂದು ತಿಳಿದ ಪೋಷಕರು ಮತ್ತು ಅಧ್ಯಾಪಕರು ಹೆಮ್ಮೆಯಿಂದ ಖುಷಿಪಟ್ಟರು.
ಉಪ ಪ್ರಾಂಶುಪಾಲ ಡಾ. ಜಿ. ಹರಿಕೃಷ್ಣನ್ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕಿ ವಾಣಿಶ್ರೀ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕರುಗಳಾದ ಲವೀನಾ ಡಿ ಸೋಜಾ ಮತ್ತು ಅಫ್ರತ್ ಅಮಾನ್ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಸಹಾಯಕ ಪ್ರಾಧ್ಯಾಪಕರುಗಳಾದ ಅಬ್ದುಲ್ ಸಮೀರ್, ಮುನೀರಾ, ಕೃತಿಕಾ ಸಂಯೋಜಿಸಿದರು.