ಇತ್ತೀಚಿನ ಸುದ್ದಿ
Mangaluru | ಪಂಪ್‌ವೆಲ್ ಕೃತಕ ನೆರೆಗೆ ಬೀಳುತ್ತಾ ಬ್ರೇಕ್..?; ಪಡೀಲ್ ಅಂಡರ್‌ಪಾಸ್‌ನಲ್ಲಿ ಪಂಪಿಂಗ್ ವ್ಯವಸ್ಥೆ!
05/06/2026, 18:53
ಮಂಗಳೂರು(reporterkarnataka.com): ಮಳೆಗಾಲ ಪ್ರಾರಂಭವಾಯಿತೆಂದರೆ ಮಂಗಳೂರಿಗರಿಗೆ ಎದೆ ನಡುಕ ಶುರುವಾಗುತ್ತದೆ. ನಗರದೊಳಗೆ ನುಗ್ಗುವ ಕೃತಕ ನೆರೆಯೇ ಇದಕ್ಕೆ ಮುಖ್ಯ ಕಾರಣ. ಅದರಲ್ಲೂ ಪಂಪ್ ವೆಲ್ ಮತ್ತು ಪಡೀಲ್ ಅಂಡರ್ ಪಾಸ್ ವಿಷಯ ಹೇಳಿ ತೀರದು.
ನಗರದ ಪಂಪ್‌ವೆಲ್ ಜಂಕ್ಷನ್ ಮತ್ತು ಪಡೀಲ್ ರೈಲ್ವೆ ಅಂಡರ್‌ಪಾಸ್ ಪ್ರದೇಶಗಳು ಪ್ರತಿವರ್ಷ ಮಳೆ ನೀರಿನಿಂದ ಜಲಾವೃತಗೊಂಡು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತವೆ. ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಈ ಎರಡು ಪ್ರದೇಶಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿತ್ತು.
ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಪಂಪ್‌ವೆಲ್‌ನಲ್ಲಿ ಭಾರೀ ಮಳೆಯಾದಾಗ ಫ್ಲೈಓವರ್ ಕೆಳಭಾಗದ ರಸ್ತೆಯಲ್ಲಿ ನೀರು ನಿಂತು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವೊಮ್ಮೆ ಹಲವು ಗಂಟೆಗಳ ಕಾಲ ನೀರು ನಿಂತು ವಾಹನಗಳು ನೀರಿನಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಫ್ಲೈಓವರ್ ಅಡಿಯಲ್ಲಿರುವ ಸರ್ವಿಸ್ ರಸ್ತೆಯನ್ನು ಎತ್ತರಿಸುವ ಕಾಮಗಾರಿ ಆರಂಭಿಸಲಾಗಿದೆ. ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಉಳಿದ ಭಾಗದಲ್ಲೂ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಇದರೊಂದಿಗೆ ಪಂಪ್‌ವೆಲ್‌ಗೆ ಹರಿದುಬರುವ ಮಳೆ ನೀರನ್ನು ಶೀಘ್ರವಾಗಿ ಹೊರಹಾಕಲು ಚರಂಡಿ ವ್ಯವಸ್ಥೆಯನ್ನು ವಿಸ್ತರಿಸುವ ಕಾರ್ಯವೂ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯ ರಸ್ತೆಯಿಂದ ಹರಿದುಬರುವ ನೀರು ಸುಲಭವಾಗಿ ಸಾಗುವಂತೆ ಕಾಲುವೆಯ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಮಸೀದಿ ಸಮೀಪ ವಿವಿಧ ದಿಕ್ಕುಗಳಿಂದ ಬರುವ ನೀರಿಗೆ ಹೊಸ ನಿರ್ಗಮನ ಮಾರ್ಗಗಳನ್ನು ಕಲ್ಪಿಸುವ ಯೋಜನೆಯೂ ಜಾರಿಯಲ್ಲಿದ್ದು, ಈಗಾಗಲೇ ಎರಡು ಕಡೆ ಕಾಮಗಾರಿ ಪ್ರಾರಂಭವಾಗಿದೆ.
ಮತ್ತೊಂದೆಡೆ, ಪಡೀಲ್ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ಬಂದಾಗ ನೀರು ನಿಂತು ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಮಸ್ಯೆಗೆ ಈ ಬಾರಿ ವಿಶೇಷ ಗಮನ ನೀಡಲಾಗಿದೆ. ಪಡೀಲ್-ಬಜಾಲ್ ಮಾರ್ಗವಾಗಿ ಉಳ್ಳಾಲ, ತಲಪಾಡಿ ಮತ್ತು ಕೇರಳ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಅಂಡರ್‌ಪಾಸ್ ಜಲಾವೃತಗೊಂಡರೆ ಪರ್ಯಾಯ ಮಾರ್ಗಗಳನ್ನೇ ಅವಲಂಬಿಸಬೇಕಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರವಾಗಿ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಅಂಡರ್‌ಪಾಸ್‌ನಲ್ಲಿ ಸಂಗ್ರಹವಾಗುವ ನೀರನ್ನು ತಕ್ಷಣವೇ ಹೊರಹಾಕಲು ಪಂಪಿಂಗ್ ವ್ಯವಸ್ಥೆ ಅಳವಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದರಿಂದ ನೀರು ದೀರ್ಘಕಾಲ ನಿಲ್ಲುವುದನ್ನು ತಡೆಯುವ ಜೊತೆಗೆ ವಾಹನ ಸಂಚಾರಕ್ಕೆ ಆಗುವ ತೊಂದರೆಯೂ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಅವರ ಪ್ರಕಾರ, ಪಂಪ್‌ವೆಲ್ ಪ್ರದೇಶದಲ್ಲಿ ನೀರು ನಿಲ್ಲುವ ಅವಧಿ ಮತ್ತು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ಕಾಮಗಾರಿಗಳನ್ನು ಸಮನ್ವಯವಾಗಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಎತ್ತರಿಸುವುದು, ಚರಂಡಿ ವಿಸ್ತರಣೆ ಮತ್ತು ಹೆಚ್ಚುವರಿ ನೀರು ಹರಿವು ವ್ಯವಸ್ಥೆ ರೂಪಿಸುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ, ಪಡೀಲ್ ಅಂಡರ್‌ಪಾಸ್‌ನಲ್ಲಿ ಪಂಪಿಂಗ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಳೆಗಾಲದಲ್ಲಿ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವರ್ಷಗಳಿಂದ ಮಂಗಳೂರು ನಗರವನ್ನು ಕಾಡುತ್ತಿರುವ ಕೃತಕ ನೆರೆ ಸಮಸ್ಯೆಗೆ ಈ ಕ್ರಮಗಳು ಎಷ್ಟರ ಮಟ್ಟಿಗೆ ಪರಿಹಾರ ನೀಡಲಿವೆ ಎಂಬುದು ಈ ಮುಂಗಾರು ಅವಧಿಯಲ್ಲೇ ಗೊತ್ತಾಗಲಿದ್ದು, ಸಾರ್ವಜನಿಕರ ನಿರೀಕ್ಷೆಯೂ ಇದೇ ಕಡೆ ನೆಟ್ಟಿದೆ.












