ಇತ್ತೀಚಿನ ಸುದ್ದಿ
ಕನ್ನಡ ಭಾಷೆಗೆ ಆಂಗ್ಲಪದ ಅರ್ಬುದ ರೋಗದಂತೆ ಅಪಾಯಕಾರಿ: ರಾಘವೇಶ್ವರ ಭಾರತೀ ಸ್ವಾಮೀಜಿ
28/07/2025, 22:47

ಗೋಕರ್ಣ(reporterkarnataka.com): ನಮ್ಮ ಆಡುಭಾಷೆಯಲ್ಲಿ ಆಂಗ್ಲಪದಗಳು ಅರ್ಬುದ ರೋಗ ಹರಡುವಂತೆ ವ್ಯಾಪಕವಾಗುತ್ತಿದ್ದು, ಮರೆತುಹೋದ ಒಂದೊಂದೇ ಕನ್ನಡ ಪದಗಳನ್ನು ಮರುಬಳಕೆಗೆ ತರುವ ಮೂಲಕ ಭಾಷೆ, ಆ ಮೂಲಕ ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ಭಾನುವಾರ ದಕ್ಷಿಣ ಬೆಂಗಳೂರು ಮಂಡಲದ ಕೋರಮಂಗಲ, ಜಯಪ್ರಕಾಶ, ಸರ್ವಧಾರೀ ಮತ್ತು ಸೋಮೇಶ್ವರ ವಲಯದ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಅರ್ಬುದ ರೋಗ ದೇಹದ ಒಂದು ಅಂಗದಲ್ಲಿ ಕಾಣಿಸಿಕೊಂಡು ಇಡೀ ದೇಹವನ್ನು ವ್ಯಾಪಿಸಿ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ಆಂಗ್ಲಪದಗಳು ಕೂಡಾ ನಮ್ಮ ಸ್ವಂತಿಕೆಯನ್ನು ಮರೆಯುವಷ್ಟರ ಮಟ್ಟಿಗೆ ಕನ್ನಡದಲ್ಲಿ ವ್ಯಾಪಕವಾಗಿಬಿಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸ್ವಭಾಷೆ ಕುಲಗೆಟ್ಟು ಹೋಗುತ್ತದೆ ಎಂದು ಎಚ್ಚರಿಸಿದರು.
ಅನಿವಾರ್ಯ ಸಂದರ್ಭಗಳಲ್ಲಿ ಆಂಗ್ಲಭಾಷೆ ಮಾತನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಆಂಗ್ಲವನ್ನು ಬಳಸಬೇಡಿ. ಭಾಷೆ ಎನ್ನುವುದು ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ; ಅದು ಸಂಸ್ಕೃತಿಯ ಪ್ರತೀಕ; ಭಾಷೆ ಮರೆತರೆ ಸಂಸ್ಕೃತಿ ನಾಶವಾದಂತೆ. ಆದ್ದರಿಂದ ಸ್ವಭಾಷೆ ಮನೆ- ಮನದ ಭಾಷೆಯಾಗಬೇಕು. ಊಟ, ವೇಷಭೂಷಣ, ನಡವಳಿಕೆಯಲ್ಲೂ ಸ್ವಂತಿಕೆ ಉಳಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ದೀಕ್ಷೆ ತೊಡಬೇಕು ಎಂದು ಆಶಿಸಿದರು.
ಮರೆತು ಹೋದ ಒಂದೊಂದೇ ಕನ್ನಡ ಪದಗಳನ್ನು ಮತ್ತೆ ಬಳಕೆ ಮಾಡುವ ತೊಡೋಣ. ಉದಾಹರಣೆಗೆ ಇಂದಿನ ಶಬ್ದ ಆತ್ಮವಿಶ್ವಾಸ. ಈ ಶುದ್ಧ ಕನ್ನಡ ಶಬ್ದದಲ್ಲಿ ಆತ್ಮದ ಬೆಳಕು ಇದೆ. ಆಂಗ್ಲದಲ್ಲಿ ಕಾನ್ಫಿಡೆನ್ಸ್ ಎಂಬ ಪದವನ್ನು ಬಳಕೆ ಮಾಡಲಾಗುತ್ತದೆ. ಆದರೆ ಇದು ಆತ್ಮವಿಶ್ವಾಸಕ್ಕೆ ಪರ್ಯಾಯವಾಗಲಾರದು ಎಂದು ವಿಶ್ಲೇಷಿಸಿದರು.
ನಮ್ಮ ಅಂತರಂಗದಲ್ಲಿ ಬೆಳಗುವ ಬೆಳಕು ಆತ್ಮ; ನಮ್ಮ ಜೀವಕ್ಕೂ ಆತ್ಮ ಎಂಬ ಹೆಸರಿದೆ. ಶರೀರವನ್ನೂ ಆತ್ಮ ಎಂದು ಕರೆಯುತ್ತಾರೆ. ಇಂದ್ರಿಯ- ಮನಸ್ಸುಗಳು ಕೂಡಾ ಆತ್ಮದ ಸ್ವರೂಪಗಳೇ. ನಮ್ಮ ನಮ್ಮ ಆತ್ಮದ ಬಗ್ಗೆ ವಿಶ್ವಾಸ ಇರಿಸಿಕೊಳ್ಳುವುದೇ ಆತ್ಮವಿಶ್ವಾಸ ಎಂದು ವಿವರಿಸಿದರು.
ಚಾತುರ್ಮಾಸ್ಯ ನಮ್ಮ ಮನಸ್ಸನ್ನು ತೊಳೆದು ಶುದ್ಧಗೊಳಿಸುತ್ತದೆ. ಮಳೆ ನೆಲವನ್ನು ಹಸಿರುಗೊಳಿಸುವಂತೆ ಚಾತುರ್ಮಾಸ್ಯದ ಗುರುದರ್ಶನ ನಿಮ್ಮ ಬದುಕನ್ನು ಹಸನಾಗಿಸುತ್ತದೆ ಎಂದು ಹೇಳಿದರು.
ಸಾಮವೇದ ಪಾರಾಯಣ
ವೇದಗಳಲ್ಲಿ ಸರ್ವಶ್ರೇಷ್ಠವಾದ ಸಾಮವೇದ ಪಾರಾಯಣ ಚಾತುರ್ಮಾಸ್ಯದಲ್ಲಿ ನಡೆದಿದೆ. ರಾಮನನ್ನು ಗಂಧರ್ವ ತತ್ವಜ್ಞ ಎನ್ನಲಾಗುತ್ತದೆ. ಚಂದ್ರಮೌಳೀಶ್ವರ ಸಾಮಗಾನ ಲೋಲ. ಶ್ರೀಮಠದ ಆರಾಧ್ಯದೇವರಾದ ರಾಮ ಹಾಗೂ ಚಂದ್ರಮೌಳೀಶ್ವರನಿಗೆ ಸಾಮಗಾನ ಸೇವೆ ನಡೆದಿದೆ. ರಾಮಚಂದ್ರಾಪುರ ಮಠಕ್ಕೆ ಎಲ್ಲ ನಾಲ್ಕು ವೇದಗಳ ಶಿಷ್ಯರಿದ್ದಾರೆ. 800 ಸಾಮವೇದಿ ಶಿಷ್ಯರ ಮನೆಗಳಿವೆ. ಸಾಮವೇದದ ಅಧ್ಯಯನ ಅಧ್ಯಾಪನಕ್ಕೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅವಕಾಶವಿದೆ ಎಂದು ವಿವರಿಸಿದರು.
ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ರಘುನಾಥ ರಾವ್ ದೇಶಪಾಂಡೆ ದಂಪತಿ, ಚಾತುಮಾಸ್ಯ ವ್ರತನಿರತ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ಭಟ್ ಉಂಚಗೇರಿ ನೇತೃತ್ವದಲ್ಲಿ ಸತತ ಐದು ದಿನಗಳ ಕಾಲ ರಾಮದೇವರ ಸನ್ನಿದಿಯಲ್ಲಿ ಸಾಮವೇದ ಪಾರಾಯಣ ನೆರವೇರಿತು. ಸಾಮವೇದ ವಿದ್ವಾಂಸ ಮೈಸೂರಿನ ಮಂಜುನಾಥ ಶ್ರೌತಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಚಾತುರ್ಮಾಸ್ಯ ತಂಡದ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಉದ್ಯಮಿ ಮುರಳೀಧರ ಪ್ರಭು, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಪಾಕತಜ್ಞರಾದ ರಾಜೀವ ಹೆಗಡೆ, ಚಿನ್ಮಯ, ದಿನೇಶ್, ಶರತ್ ಜೋಶಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಪಿಆರ್‍ಓ ಎಂ.ಎನ್.ಮಹೇಶ್ ಭಟ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು.