ಇತ್ತೀಚಿನ ಸುದ್ದಿ
ಭಾಷೆಗೆ ಬಾಂಧವ್ಯ ಗಟ್ಟಿಗೊಳಿಸುವ ಅಗಾಧ ಸೆಳೆತ ಇದೆ: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಕವಿ, ವಿಮರ್ಶಕ ಉದಯನ್ ವಾಜಪೇಯಿ
04/11/2023, 23:55
ಮಂಗಳೂರು(reporterkarnataka.com): ಭಾಷೆಗೆ ಎಲ್ಲರನ್ನು ಒಂದು ಕಡೆ ಹಿಡಿದು ಇಡುವ ಶಕ್ತಿ ಇದೆ. ಭಾಷೆಗೆ ಬಾಂಧವ್ಯ ಗಟ್ಟಿಗೊಳಿಸುವ ಅಗಾಧ ಸೆಳೆತ ಇದೆ. ಭಾಷೆಗಳ ನಿರಂತರತೆಯಿಂದಾಗಿ ನಮಗೆ ಬೇರೆ ಭಾಷೆ ಅರಿವು, ಜ್ಞಾನ ಇಲ್ಲದೇ ಇದ್ದರೂ ನಮ್ಮಲ್ಲಿ ಅನ್ಯತೆಯ ಭಾವನೆ ಬೆಳೆಯುತ್ತದೆ ಎಂದು ಕವಿ, ವಿಮರ್ಶಕ ವಿದ್ವಾಂಸಕ ಉದಯನ್ ವಾಜಪೇಯಿ ಹೇಳಿದರು.
ಅಖಿಲ ಭಾರತೀಯ ಕೊಂಕಣಿ ಪರಿಷದ್ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಬಸ್ತಿ ವಾಮನ ಶೆಣೈ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿಗಳ ಹರಿತ ಲೇಖನಿಯ ಮೂಲಕ ಇಂದಿಗೂ ಸಮಾಜದಲ್ಲಿ ಸತ್ಯವನ್ನು ಸಮಾಜದ ಮುಂದಿಡುವ ಎದೆಗಾರಿಕೆ ಉಳಿದಿದೆ. ದೇಶದ ವಿವಿಧ ಭಿನ್ನ ಸಂಸ್ಕೃತಿ, ಕಲೆಗಳ ಜತೆಗೆ ಆಯಾ ಪ್ರದೇಶಗಳ ಭಾಷೆಗಳು ಭಾರತದ ಏಕತೆ ಆಧಾರ ಎಂದು ಅವರು ನುಡಿದರು.
ಜೀವನದಲ್ಲಿ ನೈತಿಕತೆ ಅರಿವು ಅಗತ್ಯ. ಇದು ಪ್ರತಿಯೊಬ್ಬರಲ್ಲೂ ಭಿನ್ನ ಆಗಿರುತ್ತದೆ. ಆದರೆ, ಹಿಂಸೆ, ದ್ವೇಷವನ್ನು ವಿರೋಧಿಸುವ, ಸತ್ಯವನ್ನು ಪ್ರತಿಪಾದಿಸುವ ನೈತಿಕತೆ ಸಾಹಿತ್ಯ ಮತ್ತು ಕಲೆಯಿಂದ ಜೀವಂತ ಆಗಿದೆ. ಸಾಹಿತ್ಯ ಮತ್ತು ಕಲೆಗಳಿಂದ ಮಾತ್ರವೇ ಪ್ರಶ್ನಿಸುವ ಸೃಜನಾತ್ಮಕತೆ ಉಳಿದುಕೊಂಡಿದೆ ಎಂದರು.
ಸಾಹಿತಿ ಹೇಮಾ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಶಿಸ್ತು ಮತ್ತು ಅಚ್ಚುಕಟ್ಟುತನ ಶ್ಲಾಘನೀಯ ಎಂದು ಅವರು ನುಡಿದರು.
ಸಮಾರಂಭದಲ್ಲಿ ಕೊಂಕಣಿ ಲೇಖಕ, ಬರಹಗಾರ ಶಿವರಾಮ್ ಕಾಮತ್, ಉದಯ್ ದೇಶ್‌ಪ್ರಭು, ಡಾ. ಹನುಮಂತ್ ಚೋಪ್ಡೆಕರ್, ಡಾ. ರಜಯ್ ಪವಾರ್, ವಿಶಾಲ್ ಖಂಡೇಪರ್ಕರ್, ಸರಸ್ವತಿ ದಾಮೋದರ್ ನಾಯ್ಕೆ, ವನಧಾ ಸಿನಾಯಿ, ಅಭಯ್ ಕುಮಾರ್ ವೆಲಿಂಗರ್, ಆರ್.ಎಸ್. ಭಾಸ್ಕರ್, ಪಂಢರಿನಾಥ್ ಲೋಟ್ಲಿಕರ್, ವಿಲ್ಸನ್ ಕಟೀಲ್ ಮೊದಲಾದವರ ಪುಸ್ತಕಗಳನ್ನು ಅನಾವರಣ ಮಾಡಲಾಯಿತು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಮೆಲ್ವಿನ್ ರೊಡ್ರಿಗಸ್ (ಉಪಾಧ್ಯಕ್ಷರು, ಅಖಿಲ ಭಾರತೀಯ ಕೊಂಕಣಿ ಪರಿಷದ್), ಚೇತನ್ ಆಚಾರ್ಯ(ಕಾರ್ಯಾಧ್ಯಕ್ಷರು, ಅಖಿಲ ಭಾರತೀಯ ಕೊಂಕಣಿ ಪರಿಷದ್ ), ಟೈಟಸ್ ನೊರೊನ್ಹಾ (ಕಾರ್ಯದರ್ಶಿ, ಸಮ್ಮೇಳನ ಸ್ವಾಗತ ಸಮಿತಿ) ಮುಂತಾದವರು ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ ಸ್ವಾಗತಿಸಿದರು. ಅಖಿಲ ಭಾರತ ಕೊಂಕಣಿ ಪರಿಷತ್‌ನ ಅಧ್ಯಕ್ಷ ಅರುಣ್ ಉಭಯಕರ್ ಹಾಗೂ ಉಪಾಧ್ಯಕ್ಷ ನಂದಗೋಪಾಲ್ ಶೆಣೈ ಶುಭ ಹಾರೈಸಿದರು. ಕಾರ್ಯಾಧ್ಯಕ್ಷ ಎಚ್.ಎಂ. ಪೆರ್ನಾಲ್ ಪ್ರಾಸ್ತಾವಿಕ ಮಾತನಾಡಿದರು. ಪರಿಷದ್‌ನ ಕಾರ್ಯದರ್ಶಿ ಗೌರೀಶ್ ವರ್ಣೇಕರ್ ವಂದಿಸಿದರು.