ಇತ್ತೀಚಿನ ಸುದ್ದಿ
ಧರ್ಮಸ್ಥಳ ಪ್ರಕರಣ: ಇಂದು 7ನೇ ಸ್ಪಾಟ್ ಉತ್ಖನನ; ಬಿಗಿ ಭದ್ರತೆ; ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ
01/08/2025, 11:09

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂತಿಟ್ಟ ಶವಗಳ ಅವಶೇಷ ಮೇಲೆತ್ತುವ ಪ್ರಕ್ರಿಯೆ ಇಂದು(ಶುಕ್ರವಾರ)4ನೇ ದಿನಕ್ಕೆ ಕಾಲಿಟ್ಟಿದ್ದು, ಮಾನವ ಮೂಳೆ ದೊರೆತ ಸ್ಪಾಟ್ ನಂಬರ್ 6ರಲ್ಲಿ ಮತ್ತಷ್ಟು ಉತ್ಖನನ ಕಾರ್ಯ ಮುಂದುವರಿಯಲಿದ್ದು, ಜತೆಗೆ 7ನೇ ಸ್ಪಾಟ್ ನ ಉತ್ಖನನ ಆರಂಭವಾಗಲಿದೆ.
ಎಸ್ಐಟಿ ತಂಡದೆದುರು ದೂರುದಾರ ಗುರುತಿಸಿದ 13 ಸ್ಪಾಟ್ ಗಳ ಪೈಕಿ ಅನುಕ್ರಮವಾಗಿ 1ರಿಂದ 5 ಸ್ಪಾಟ್ ವರೆಗೆ ಅಸ್ತಿಪಂಜರದ ಯಾವುದೇ ಕುರುಹು ಲಭ್ಯವಾಗದಿದ್ದರೂ ಸ್ಪಾಟ್ ನಂಬರ್ 6ರಲ್ಲಿ ಮಾನವ ಮೂಳೆಗಳ ಅವಶೇಷಗಳು ನಿನ್ನೆ(ಗುರುವಾರ) ದೊರಕಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಸಮಾಧಿ ಅಗೆಯುವ ಕೆಲಸವನ್ನು ಮುಂದುವರಿಸಲಾಗಿದೆ.
ಇಂದು 7ನೇ ಸ್ಪಾಟ್ ನ ಅಗೆತ ಆರಂಭಿಸಲಾಗುವುದರ ಜತೆಗೆ 8ನೇ ಸ್ಪಾಟ್ ನ ಅಗೆತಕ್ಕೆ ಸಿದ್ದತೆ ನಡೆಸಲಾಗುತ್ತಿದೆ.
6ನೇ ಸ್ಪಾಟ್ ನಲ್ಲಿ ನಿನ್ನೆ ಒಟ್ಟು 12 ಮಾನವ ಮೂಳೆ ಸಿಕ್ಕಿದ್ದು, ಸದ್ಯ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಆರನೇ ಪಾಯಿಂಟ್‌ನಲ್ಲಿ ಎಸ್ಐಟಿ ತಂಡ ಕಾನೂನು ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಮುಂದುವರಿಸುತ್ತಿದ್ದಾರೆ. ಎಸ್ಐಟಿ ಅಧಿಕಾರಿಗಳು ಯಾವುದೇ ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ ಕೈಗೊಂಡಿದ್ದಾರೆ.
ಸಮಾಧಿಯೊಳಗೆ ನೀರು ತುಂಬುವ ಸಾಧ್ಯತೆ ಇರುವ ಕಾರಣದಿಂದ ಸಾಕ್ಷ್ಯಗಳು ಹಾನಿಯಾಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ, ಸಮಾಧಿಯ ಮೇಲ್ಭಾಗ ಹಾಗೂ ನಾಲ್ಕು ದಿಕ್ಕುಗಳಲ್ಲಿ ಶೀಟ್‌ಗಳನ್ನು ಅಳವಡಿಸಿ ಪ್ರಾಥಮಿಕ ಸಂರಕ್ಷಣಾ ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿರುವ ಗುಂಡಿಯ ಸುತ್ತಲೂ ನಾಲ್ಕು ತಡೆಗೋಡೆಗಳಂತೆ ಶೀಟ್ ಹಾಕಿ ಸುರಕ್ಷತೆ ಒದಗಿಸಲಾಗಿದೆ.