7:52 PM Monday7 - April 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್… FKCCI Udyog Mela | ಉದ್ಯೋಗ ನೀಡುವ ಜತೆಗೆ ಉತ್ತಮ ಸಂಬಳ ನೀಡಿ:… Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ…

ಇತ್ತೀಚಿನ ಸುದ್ದಿ

Mandya | ಕುದುರೆಮುಖ ಕಾರ್ಖಾನೆ ಪುನಶ್ಚೇತನಕ್ಕೆ ಕಾಂಗ್ರೆಸ್ ಸರಕಾರ ಅಡ್ಡಿ: ಕೇಂದ್ರ ಸಚಿವ ಕುಮಾರಸ್ವಾಮಿ

07/04/2025, 19:35

ಮಂಡ್ಯ(reporterkarnataka.com): ರಾಜಕೀಯ ಅಸೂಯೆಯಿಂದ ರಾಜ್ಯ ಕಾಂಗ್ರೆಸ್ ಸರಕಾರ ಹೆಜ್ಜೆ ಹೆಜ್ಜೆಗೂ ನನಗೆ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿ ಕೆಲಸ ಮಾಡಲು ನನಗೆ ಬಿಡುತ್ತಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.


ಮಳವಳ್ಳಿ ತಾಲೂಕಿನ ಹಂಡನಹಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿ ವಿನಾಯಕ ದೇವರು ಹಾಗೂ ನಾಗದೇವತೆಗಳ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡ್ಯ ಜನರು ನನ್ನನ್ನು ಲೋಕಸಭೆ ಸದಸ್ಯನಾಗಿ ಗೆಲ್ಲಿಸಿದ್ದಾರೆ. ಅವರ ಆಶೀರ್ವಾದ, ವಿಶ್ವಾಸಕ್ಕೆ ನಾನು ಋಣಿ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಗಳನ್ನು ನೀಡಿದ್ದಾರೆ. ಹೇಗಾದರೂ ಪ್ರಯತ್ನಪಟ್ಟು ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳ ಯಾವುದೇ ಭಾಗಕ್ಕೆ ಒಂದೆರೆಡು ಕೈಗಾರಿಕೆ ತರಬೇಕು ಎಂದು ಶ್ರಮ ಹಾಕುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ನನಗೆ ಬೆಂಬಲ ಕೊಡುತ್ತಿಲ್ಲ ಎಂದು ನೇರ ಆರೋಪ ಮಾಡಿದರು.
*ಕುದುರೆಮುಖ ಕಾರ್ಖಾನೆ ಪುನಶ್ಚೇತನಕ್ಕೆ ಅಡ್ಡಿ:*
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ ರಾಜ್ಯದ ಹೆಮ್ಮೆಯ ಕಾರ್ಖಾನೆಗಳಲ್ಲಿ ಒಂದು. ಮಂಗಳೂರಿನ ಕಡಲ ದಂಡೆಯಲ್ಲಿ ಅದರ ಪ್ರಮುಖ ಕಾರ್ಖಾನೆ ಇದೆ. ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡದೆ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತವಾದ ಮೇಲೆ ಬಳ್ಳಾರಿಯ ಸಂಡೂರಿನ ದೇವದಾರಿಯಲ್ಲಿ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಹಣ ಪಡೆದುಕೊಂಡು ಅನುಮತಿ ನೀಡಿತ್ತು. ಗಣಿ ಹಂಚಿಕೆ ಮಾಡಲು ಕೋಟಿಗಟ್ಟಲೆ ಹಣ ಪಡೆದು ಅನೇಕ ವರ್ಷವಾದರೂ ಗಣಿ ಮಾಡಿಲ್ಲ. ಅಲ್ಲಿ ಗಣಿಗಾರಿಕೆ ಮಾಡದ ಹೊರತು ಕಾರ್ಖಾನೆಗೆ ಅದಿರು ಸಿಗದಂತಾಯಿತು ಎಂದು ಕೇಂದ್ರ ಸಚಿವರು ವಸ್ತುಸ್ಥಿತಿಯನ್ನು ಜನರ ಮುಂದೆ ಬಿಡಿಸಿಟ್ಟರು.
ನಾನು ಕೇಂದ್ರದಲ್ಲಿ ಉಕ್ಕು ಸಚಿವನಾದ ಕೂಡಲೇ ಸಚಿವಾಲಯದ ಅಧಿಕಾರಿಗಳು ಈ ವಿಷಯವನ್ನು ನನ್ನ ಗಮನಕ್ಕೆ ತಂದರು. ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿರುವ ಬಗ್ಗೆ ತಿಳಿಸಿದರು. ಅಲ್ಲದೆ, ಕುದುರೆಮುಖ ಕಂಪನಿಗೆ ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಹಣದ ಅವಶ್ಯಕತೆ ಇತ್ತು. ₹1,700 ಕೋಟಿ ಮೊತ್ತದ ಹಣಕಾಸು ನೆರವು ಕೊಡುವ ಪ್ರಸ್ತಾವನೆ ವಿತ್ತ ಸಚಿವಾಲಯಕ್ಕೆ ಹೋಗುವ ಕಡತಕ್ಕೆ ಸಹಿ ಹಾಕಿದೆ. ಉಕ್ಕು ಸಚಿವನಾಗಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಮೊತ್ತ ಮೊದಲ ಸಹಿಯನ್ನು ನಾನು ಹಾಕಿದೆ. ರಾಜಕೀಯವಾಗಿ ನನ್ನ ವಿರುದ್ಧ ಅಸೂಯೆ ಪಡುತ್ತಿರುವ ರಾಜ್ಯ ಸರ್ಕಾರ ಅದಕ್ಕೆ ಅಡ್ಡಿಪಡಿಸಿತು. ಮಂಗಳೂರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎರಡು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಕೊನೆಗೆ ಇವರ ಹಿತ, ರಾಜ್ಯದ ಹಿತಕ್ಕಾಗಿ ನಾನು ಕುದುರೆಮುಖ ಸಂಸ್ಥೆಯನ್ನು ರಾಷ್ಟ್ರೀಯ ಖನಿಜಾವೃದ್ಧಿ ನಿಗಮ (NMDC) ವಿಲೀನ ಮಾಡುವ ನಿರ್ಧಾರ ಕೈಗೊಂಡೆ. ಅದೇ ರೀತಿ ಹೆಚ್ ಎಂಟಿ ಅಭಿವೃದ್ಧಿ ವಿಷಯದಲ್ಲಿಯೂ ರಾಜ್ಯ ಸರಕಾರ ರಾಜಕೀಯ ಮಾಡುತ್ತ ಅಡ್ಡಗಾಲು ಹಾಕುತ್ತಿದೆ ಎಂದು ಕೇಂದ್ರ ಸಚಿವರು ದೂರಿದರು.
ನೆರೆಯ ಆಂಧ್ರ, ತೆಲಂಗಾಣ *ಇನ್ನಿತರೆ ರಾಜ್ಯಗಳ ಸಹಕಾರ ನೆನೆಸಿದ ಕೇಂದ್ರ ಸಚಿವರು;* ವೈಜಾಗ್ ಸ್ಟೀಲ್ ಉದಾಹರಣೆ ಕೊಟ್ಟರು. ಚಂದ್ರಬಾಬು ನಾಯ್ಡು ಅವರು ಈ ಕಾರ್ಖಾನೆಯನ್ನು ಪುನಶ್ಚೇತನ ಮಾಡುವ ಉದ್ದೇಶದಿಂದ ಅನೇಕ ಸಲ ನನ್ನನ್ನು ಭೇಟಿಯಾದರು. ಅನೇಕ ಸಭೆಗಳಿಗೆ ಬಂದರು. ಆ ರಾಜ್ಯದ ನಾಯಕರು ಪಕ್ಷಾತೀತವಾಗಿ ನನಗೆ ಬೇಡಿಕೆ ಇಟ್ಟರು. ಅವರ ಬದ್ಧತೆ ನಮ್ಮ ಸರಕಾರಕ್ಕೆ ಏಕಿಲ್ಲ? ನಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ರಾಜಕೀಯ ಬೆರೆಸುವುದು ಎಷ್ಟು ಸರಿ? ಇದರಿಂದ ಯಾರಿಗೆ ನಷ್ಟ? ಯುವ ಜನರಿಗೆ ಉದ್ಯೋಗ ದೊರೆಯುತ್ತಿಲ್ಲ, ಅದಕ್ಕೆ ಹೊಣೆ ಯಾರು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಅಭಿವೃದ್ಧಿಯಲ್ಲಿ ಕೂಡ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ. ತಮ್ಮ ರಾಜಕೀಯ ವಿರೋಧಿಗಳಿಗೆ ಸಹಕಾರ ನೀಡುವುದು ಇರಲಿ, ಅವರ ಒಳ್ಳೆಯ ಕೆಲಸಗಳನ್ನು ಬೆಂಬಲಿಸುವ ಕೆಲಸವನ್ನು ಮಾಡುತ್ತಿಲ್ಲ. ಹೀಗಾದರೆ ರಾಜ್ಯಕ್ಕೆ ಕೈಗಾರಿಕೆಗಳು ಎಲ್ಲಿಂದ ಬರುತ್ತವೆ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
ಮಂಡ್ಯ ಜನರು ನೀವು ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದೀರಿ. ಎಂಪಿ ಯಾಗಿ ಗೇಲಿಸಿದ್ದೀರಿ. ನಿಮ್ಮ ಋಣ ತೀರಿಸುತ್ತೇನೆ. ಇಲ್ಲಿ ದೇವರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಈ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಮಂಡ್ಯ ಜನರ ನಿರೀಕ್ಷೆಗಳನ್ನು ನಾನು ತಪ್ಪದೇ ಈಡೇರಿಸುತ್ತೇನೆ ಎಂದು ಅವರು ವಚನ ನೀಡಿದರು.

*ಹಳ್ಳಿಗಳು ನೆಮ್ಮದಿಯಾಗಿರಲಿ:*
ಹಳ್ಳಿಗಳು ಹಿಂದಿನಂತೆ ನೆಮ್ಮದಿಯಾಗಿರಬೇಕು ಎಂದು ಆಶಿಸಿದ ಸಚಿವ ಕುಮಾರಸ್ವಾಮಿ ಅವರು; ಶುಭ ಕಾರ್ಯಗಳು, ದೇವರ ಕಾರ್ಯಗಳು ರಾಜಕೀಯ, ಪಕ್ಷ ರಾಜಕೀಯಕ್ಕೆ ಮೀರಿ ನಡೆಯಬೇಕು. ಹಳ್ಳಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು. ನಮ್ಮ ಬಾಲ್ಯ ಹೇಗಿತ್ತು ಎಂದು ನೆನೆಪು ಮಾಡಿಕೊಂಡರೆ ಈಗಲೂ ಭಾವುಕನಾಗಿದ್ದೇನೆ. ಹಿಂದೆ ಯಾವುದೇ ಸೌಲಭ್ಯ ಇರಲಿಲ್ಲ, ತಾಂತ್ರಿಕತೆ ಅನುಕೂಲಗಳು ಕಡಿಮೆ ಇದ್ದವು. ಆಗ ಎಲ್ಲರೂ ಪರಸ್ವರ ಅನ್ಯೋನ್ಯತೆ, ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದರು. ಅಂತಹ ವಾತಾವರಣ ಇಲ್ಲವಾಗಿದೆ. ನಾವು ಸಂಕುಚಿತರಾಗುತ್ತಿದ್ದೇವೆ ಎಂದು ನೋವು ವ್ಯಕ್ತಪಡಿಸಿದರು.
ಹಿಂದಿನ ದಿನಗಳಲ್ಲಿ ಯಾರ ಮನೆಯಲ್ಲಾದರೂ ಮದುವೆ ನಡೆದರೆ ಇಡೀ ಊರಿಗೆ ಊರೇ ನೆರೆದಿರುತ್ತಿತ್ತು. ಸೌಧೆ ಒಡೆಯುವುದರಿಂದ ಮೊದಲುಗೊಂಡು, ಚಪ್ಪರ ಹಾಕುವುದು, ಅಡುಗೆ ಮಾಡುವುದು, ಬಡಿಸುವುದು ಎಲ್ಲವನ್ನೂ ಊರಿನ ಜನರೇ ಮಾಡುತ್ತಿದ್ದರು. ಪಂಕ್ತಿಯಲ್ಲಿ ಕೂತು ಬೂಂದಿ ಪಾಯಸ ಸವಿಯುತ್ತಿದ್ದ ದಿನಗಳು ನನಗೆ ಇನ್ನೂ ನೆನಪಿವೆ ಎಂದು ಅವರು ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಮನಗರದ ಶಿವಗಿರಿ ಕ್ಷೇತ್ರದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಮಾಜಿ ಶಾಸಕ ಡಾ. ಕೆ.ಅನ್ನದಾನಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು