ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಪತ್ರಿಕಾ ದಿನಾಚರಣೆ: ಕನ್ನಡದ ಪ್ರಥಮ ಪತ್ರಿಕೆ ಸಂಪಾದಕ ಮ್ಯೋಗ್ಲಿಂಗ್ ಸ್ಮರಣೆ
01/07/2023, 16:36
ಮಂಗಳೂರು(reporterkarnataka.com): ಕನ್ನಡ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರದ ನೆನಪಿನಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಈ ಪತ್ರಿಕೆ ಹಾಗೂ ಅದರ ಸಂಪಾದಕ ಡಾ.ಹೆರ್ಮನ್ ಮ್ಯೋಗ್ಲಿಂಗ್ ಅವರ ಚರಿತ್ರೆಯನ್ನು ಜನತೆಯ ಮುಂದಿಡುವ ಕೆಲಸ ನಡೆಯಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ನಗರದ ಬಲ್ಮಠ ಥಿಯೋಲಾಜಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಹಾಗೂ ಡಾ.ಹೆರ್ಮನ್ ಮ್ಯೋಗ್ಲಿಂಗ್ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
180 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಸವಾಲುಗಳ ನಡುವೆ ಪತ್ರಿಕೆ ಆರಂಭಿಸಿದ ಹೆರ್ಮನ್ ಮ್ಯೋಗ್ಲಿಂಗ್ ಅವರ ಸಾಧನೆ, ಶಾಲೆಗಳನ್ನು ಆರಂಭಿಸಿದ ಅವರ ಸೇವಾ ಬದ್ಧತೆ ಸದಾ ಸ್ಮರಣೀಯ ಎಂದು ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್ ಅವರು ಮಾತನಾಡಿ, ಕನ್ನಡದ ಮೊದಲ ಪತ್ರಿಕೆಯನ್ನು ಆರಂಭಿಸಿದ ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರಿನಲ್ಲಿ ಮಂಗಳೂರಿನಲ್ಲಿ ಯಾವುದೇ ಸ್ಮಾರಕಗಳು ಇಲ್ಲದೇ ಇರುವುದರಿಂದ ನಗರದ ರಸ್ತೆಯೊಂದಕ್ಕೆ ಹಾಗೂ ವೃತ್ತವೊಂದಕ್ಕೆ ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರು ಇರಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈದಿನ ಡಾಟ್ ಕಾಮ್ ಸಂಯೋಜಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಯು.ಎಚ್. ಶುಭಕೋರಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮುತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಮಾತನಾಡಿ, ಮಂಗಳೂರು ಸಮಾಚಾರ ಪತ್ರಿಕೆ ಉದಯಿಸಿದ ಸ್ಥಳದಲ್ಲಿಯೇ ಮ್ಯೋಗ್ಲಿಂಗ್ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಯೂನಿಯನ್ ವತಿಯಿಂದ ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿ ವಂದಿಸಿದರು. ಯೂನಿಯನ್ ಪದಾಧಿಕಾರಿಗಳಾದ ಈಶ್ವರ್ ವಾರಾಣಸಿ, ಗಿರಿಧರ್ ಶೆಟ್ಟಿ , ಹಮಿದ್ ವಿಟ್ಲ ಭಾಗವಹಿಸಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶುಭೋದಯ ಆಳ್ವ, ಯೋಗೀಶ್ , ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.