ಇತ್ತೀಚಿನ ಸುದ್ದಿ
ಸೌಜನ್ಯಕ್ಕೂ ಪ್ರಧಾನಿ ಮೋದಿ ಬಿಎಸ್ ವೈ, ನಳಿನ್ ಹೆಸರು ಹೇಳಲಿಲ್ಲ: ಕಾಂಗ್ರೆಸ್ ವ್ಯಂಗ್ಯ
02/09/2022, 23:27
ಬೆಂಗಳೂರು(reporterkarnataka.com): ಮಂಗಳೂರಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಭಾಷಣದ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿಯವರು ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ. ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಇದನ್ನು ಅಸ್ತ್ರವಾಗಿ ಬಳಸಿ ಕಟು ಟೀಕೆ ಮಾಡಿದೆ.
ಬಿ.ಎಸ್.ಯಡಿಯೂರಪ್ಪ ಅವರೀಗ ಬಿಜೆಪಿಯಲ್ಲಿ ಚಲಾವಣೆ ಇಲ್ಲದ ನಾಣ್ಯ. ಬಿಎಸ್ ವೈ ವೇದಿಕೆಯಲ್ಲಿದ್ದರೂ ಮೋದಿಯವರು ಸೌಜನ್ಯಕ್ಕೂ ಅವರ ಹೆಸರು ಹೇಳಲಿಲ್ಲ, ಇಷ್ಟು ಬೇಗ BSYBJP ಅವರು ಒಡೆದ ಮಡಕೆಯಂತಾದರೇ ಬಿಜೆಪಿಯವರಿಗೆ? ಅಡ್ವಾಣಿಯನ್ನೇ ಮುಕ್ತ ಮಾಡಿರುವಾಗ #BSYmuktaBJP ಮಾಡುವುದು ಮೋದಿಯವರಿಗೆ ಯಾವ ಲೆಕ್ಕ! ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪ್ರಧಾನಿ ಮೋದಿ ಭೇಟಿಯ ಬಳಿಕ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ಬೆಂಗಳೂರ್ – ಮೈಸೂರ್ ರೈಲನ್ನು ಭಾಷಣದಲ್ಲಿ ಅದ್ಭುತವಾಗಿ ಬಿಟ್ಟಿದ್ದ ನರೇಂದ್ರ ಮೋದಿ ಅವರೇ, ಮೈಸೂರು ಪ್ಯಾರಿಸ್ ಆಗ್ಲಿಲ್ಲ. ಸಬ್ ಅರ್ಬನ್ ರೈಲು ನಿಗದಿತ ಅವಧಿ ಮುಗಿಯುತ್ತಾ ಬಂದರೂ ಓಡಲಿಲ್ಲ. ಮೈಸೂರು ಹೆದ್ದಾರಿಯು ಜಲಮಾರ್ಗವಾಗಿದೆ! ರಸ್ತೆ ಗುಂಡಿಗಳು ಪ್ರಾಣ ತೆಗೆಯುತ್ತಿವೆ. ಇದಕ್ಕೆ #NimHatraIdyaUttara ? #ModiMosa ಎಂದು ಟೀಕಿಸಿದೆ.
ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ, ದಕ್ಷಿಣ ಕನ್ನಡದ ಸಂಸದ, ಹೀಗಿದ್ದೂ ವೇದಿಕೆಯಲ್ಲಿ ಪ್ರಧಾನಿ ಕಟೀಲ್ ರ ಹೆಸರು ಹೇಳದಿರುವುದು ಏಕೆ..? ಕಾರ್ಯಕರ್ತರು ಕಾರು ಅಲ್ಲಾಡಿಸಿದ ಪರಿಣಾಮವೇ? ನಳಿನ್ ವಿರೋಧಿ ಬಣದ ಅಭಿಯಾನಕ್ಕೆ ಸಿಕ್ಕ ಯಶಸ್ಸೇ.? ಸಂಸತ್ ಅಭ್ಯರ್ಥಿ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.














