ಇತ್ತೀಚಿನ ಸುದ್ದಿ
ವೇದಿಕೆಯಲ್ಲಿ ಭಾಷಣಕ್ಕೆ ಅವಕಾಶ ಸಿಗದಿದ್ದರೆ ಕಣ್ಣೀರು ಹಾಕಬೇಕಾ? ಡಿಕೆಶಿ ಪಾಕಿಸ್ತಾನದ ಮುಖ್ಯಮಂತ್ರಿ ಅಲ್ಲ: ಪ್ರತಿಪಕ್ಷದ ನಾಯಕ ಆರ್. ಆಶೋಕ್
13/11/2026, 17:18
ಬೆಂಗಳೂರು(reporterkarnataka com):ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮಾತಿನ ಸಮರ ಜೋರಾಗಿದೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸುತ್ತಿರುವುದರಿಂದ ಬೆಂಗಳೂರಿನ ಜನರಿಗೆ ಸಂತಸವಾಗಿದೆ. ಕೇಂದ್ರ ಸರ್ಕಾರದ ಕೊಡುಗೆಗಳ ಬಲದಿಂದ ಮುಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಅಂದರೆ ಜಿಬಿಎ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮೈಸೂರಿಗೆ ದೇಶದ ಮೊದಲ ವಿನೂತನ ಡೋಮ್ ತಾರಾಲಯವನ್ನು ಕೇಂದ್ರ ಸರ್ಕಾರ ಕೊಡುಗೆಯಾಗಿ ನೀಡಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಗಿಂತಲೂ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಂದಿದೆ ಎಂದು ಹೇಳಿದರು.
ದೇಶದಲ್ಲಿ ಬಡತನ ಕಡಿಮೆಯಾಗಿದ್ದು, ಸ್ಥಿರ ಸರ್ಕಾರ ಇರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಮುಂದಾಗಿವೆ ಎಂದು ಅಶೋಕ್ ಅಭಿಪ್ರಾಯಪಟ್ಟರು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಎನ್‌ಡಿಎಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದು, ಮುಂದಿನ ಜಿಬಿಎ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
*ಡಿಕೆಶಿ ಪಾಕಿಸ್ತಾನದ ಮುಖ್ಯಮಂತ್ರಿ ಅಲ್ಲ!*
ಇನ್ನು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡರಿಗೆ ಮಾತನಾಡಲು ಅವಕಾಶ ಸಿಗದ ವಿಚಾರಕ್ಕೂ ಆರ್. ಅಶೋಕ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಬಂದಾಗ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ನಾವೇನೂ ಕಣ್ಣೀರು ಹಾಕಿಲ್ಲ. ಹಿಂದೆ ನನಗೆ ವೇದಿಕೆ ಮೇಲೆ ಹೋಗುವ ಅವಕಾಶ ಸಿಕ್ಕಿತ್ತು. ಈಗ ಸಿಕ್ಕಿಲ್ಲ. ಶಿಷ್ಟಾಚಾರ ಇರುವುದರಿಂದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೃಷ್ಣ ಬೈರೇಗೌಡರಿಗಿಂತಲೂ ಚೆನ್ನಾಗಿ ಮಾತನಾಡುತ್ತಾರೆ. ಅವರು ಕರ್ನಾಟಕದ ಮುಖ್ಯಮಂತ್ರಿಯೇ ಹೊರತು ಪಾಕಿಸ್ತಾನದ ಮುಖ್ಯಮಂತ್ರಿ ಅಲ್ಲ. ಮುಖ್ಯಮಂತ್ರಿ ಮಾತನಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅಶೋಕ್ ತಿರುಗೇಟು ನೀಡಿದರು.












