ಇತ್ತೀಚಿನ ಸುದ್ದಿ
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ: ಕುಮಾರಸ್ವಾಮಿ ಎಚ್ಚರಿಕೆ
19/10/2026, 15:45
ಬೆಂಗಳೂರು(reporterkarnataka.com): ಮಾಜಿ ಸಿಎಂ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಿಜಯದಶಮಿ ಹಬ್ಬದೊಳಗೆ ಬಂಧಿಸಬೇಕೆಂದು ಮತ್ತೊಂದು ಗಡುವು ವಿಧಿಸಿದ್ದು,ಒಂದು ವೇಳೆ ಸರ್ಕಾರ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದರೆ, ರಾಜ್ಯದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೂ ಕುಮಾರಸ್ವಾಮಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ್ದರು. ಮೊದಲ ಹಂತವಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಬಳಿ ಧರಣಿ ನಡೆಸಿದ್ದರು. ನಂತರ ಪಾದಯಾತ್ರೆಯ ಮೂಲಕ ಡಿಜಿ ಮತ್ತು ಐಜಿಪಿ ಅವರ ಕಚೇರಿ ಮುಂದೆ ಕೂಡ ಹೋರಾಟವನ್ನು ಮಾಡಿದ್ದರು. ಈಗ ಮತ್ತೊಂದು ಸುತ್ತಿನ, ತೀವ್ರವಾದ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
*ರಾಜ್ಯದಾದ್ಯಂತ ಜೆಡಿಎಸ್ ಸತ್ಯಾಗ್ರಹ*
ಕುಮಾರಸ್ವಾಮಿಯವರು ನೀಡಿರುವ ಗಡುವಿನ ಪ್ರಕಾರ, ವಿಜಯದಶಮಿ ಹಬ್ಬದ ಒಳಗೆ ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಬಂಧಿಸದಿದ್ದರೆ, ಜೆಡಿಎಸ್ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಈ ಸತ್ಯಾಗ್ರಹವು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಮುಂದೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.












