ಇತ್ತೀಚಿನ ಸುದ್ದಿ
ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ‘ಸಾಂಸ್ಕೃತಿಕ ಕಾರ್ಯಕ್ರಮ’: ಸಿಂಹಮಾಸದ ವಿಶೇಷ ಪೂಜೆಯ ಪ್ರಯುಕ್ತ ನೃತ್ಯೋತ್ಸವ
16/09/2026, 20:20
ವಿಟ್ಲ(reporterkarnataka.com): ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯಲಿರುವ ಸಿಂಹಮಾಸದ ವಿಶೇಷ ಪೂಜೆಯ ಪ್ರಯುಕ್ತ ‘ವೈಷ್ಣವೀ ರಜತ ನೃತ್ಯಾಂತರ್ಯಾನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೆಪ್ಟೆಂಬರ್ 17ರಂದು ಸಂಜೆ 4.45ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ದೀಪ ಪ್ರಜ್ವಲನೆ ಕಾರ್ಯಕ್ರಮವನ್ನು ಗೌರವಾಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ, ಮುಳಿಯ ಸಮೂಹ ಸಂಸ್ಥೆಗಳ ಚೇರ್ಮನ್ ಅವರು ನೆರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ಶ್ರೀ ಕೇಶವ ಆರ್.ವಿ ಶ್ರೀ ಭಗವತಿ ದೇವಸ್ಥಾನ ವ್ಯವಸ್ಥಾಪಕರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸುಭಾಷ್ ಚಂದ್ರ ನಾಯಕ್ ಉದ್ಯಮಿಗಳು ವಿಟ್ಲ ಹಾಗೂ ವಿದುಷಿ ಶ್ರೀಮತಿ ಪಾರ್ವತಿ ಗಣೇಶ ಭಟ್ ಹೊಸಮೂಲೆ (ಗಾನಗಂಧರ್ವ ಸಂಗೀತ ಶಾಲೆ) ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ವಿವಿಧ ಸಾಂಸ್ಕೃತಿಕ ಹಾಗೂ ನೃತ್ಯ ಪ್ರದರ್ಶನಗಳು ನಡೆಯಲಿವೆ.

ಕಾರ್ಯಕ್ರಮದ ಅಂಗವಾಗಿ ಸಂಜೆ 6 ಗಂಟೆಯಿಂದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ನಟುವಾಂಗ, ಹಾಡುಗಾರಿಕೆ, ಮೃದಂಗ ಹಾಗೂ ಕೊಳಲು ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಸಂಗೀತ–ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಳ್ಳಲಿವೆ.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಕಲಾವಿದರು ಹಾಗೂ ನೃತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.












