6:11 PM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಉಗುಳು ಮುಕ್ತ ‘ಕುಡ್ಲ’ ನಮ್ಮದಾಗಲಿ: ಕಡಲನಗರಿಯ ಅಂದಕ್ಕೆ ಮಸಿ ಬಳಿಯದಿರಿ!

18/08/2026, 14:46

ಮನೋಜ್ ಕೆ. ಬೆಂಗ್ರೆ, ಮಂಗಳೂರು

info.reporterkarnataka@gmail.com

ಕರಾವಳಿಯ ಹೆಮ್ಮೆಯ ನಗರಿ, ಶೈಕ್ಷಣಿಕ ಹಾಗೂ ವೈದ್ಯಕೀಯ ರಂಗದಲ್ಲಿ ತನ್ನದೇ ಆದ ಸ್ವಚ್ಛ ಹಾಗೂ ಸುಂದರ ಛಾಪು ಮೂಡಿಸಿರುವ ‘ಕುಡ್ಲ’ (ಮಂಗಳೂರು) ಇಂದು ಕಣ್ಣಿಗೆ ಕಾಣದ ಮತ್ತೊಂದು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಅದೇನೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳಿ ನಗರವನ್ನು ಗಲೀಜು ಮಾಡುವುದು!


​ವಿಶೇಷವಾಗಿ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ಹೊರ ಊರುಗಳಿಂದ, ಹೊರ ರಾಜ್ಯಗಳಿಂದ ಮಂಗಳೂರಿಗೆ ಬರುವ ಕೆಲವರಲ್ಲಿ ಸಾರ್ವಜನಿಕ ನೈರ್ಮಲ್ಯದ ಅರಿವೇ ಇಲ್ಲದಿರುವುದು ದುರಂತ. ಬಸ್ ತಂಗುದಾಣಗಳು, ರಸ್ತೆ ಬದಿ ಗೋಡೆಗಳು, ವಾಣಿಜ್ಯ ಸಂಕೀರ್ಣದ ಮೆಟ್ಟಿಲುಗಳು, ಡಿವೈಡರ್‌ಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಪಾನ್ ಮೆಲ್ಲುವುದು, ಗುಟ್ಕಾ ಜಗಿದು ಉಗುಳುವುದು ಹಾಗೂ ಕಂಡಕಂಡಲ್ಲಿ ಎಂಜಲು ಚೆಲ್ಲುವುದು ಇಂದು ನಿತ್ಯದ ದೃಶ್ಯವಾಗಿದೆ.

*​ಉಗುಳುವಿಕೆ ಹೆಚ್ಚಳ, ರೋಗ ಭೀತಿ*
ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಪ್ರತಿಯೊಬ್ಬರಿಗೂ ನಗರ ಆಶ್ರಯ, ಸೌಲಭ್ಯ ನೀಡುತ್ತದೆ. ಆದರೆ, ಈ ಮಣ್ಣಿಗೆ ಬಂದು ಇಲ್ಲಿನ ಸೌಂದರ್ಯ ಮತ್ತು ನೈರ್ಮಲ್ಯವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕೇವಲ ಅಸಹ್ಯಕರ ನೋಟವನ್ನು ನೀಡುವುದಷ್ಟೇ ಅಲ್ಲ, ಹಲವು ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ನೇರ ದಾರಿಯಾಗಿದೆ.

*​ಅಧಿಕಾರಿಗಳೇ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ*
ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವು ‘ಸ್ವಚ್ಛ ಭಾರತ್’ ಅಭಿಯಾನದಡಿ ನೀರಿನಂತೆ ಹಣ ವೆಚ್ಚ ಮಾಡಿ ನಗರವನ್ನು ಅಲಂಕರಿಸುತ್ತಿದೆ. ಆದರೆ, ಈ ರೀತಿ ಸಾರ್ವಜನಿಕ ಆಸ್ತಿಯನ್ನು ಗಲೀಜು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಇಲ್ಲದಿರುವುದೇ ಈ ಬೇಜವಾಬ್ದಾರಿತನಕ್ಕೆ ಮುಖ್ಯ ಕಾರಣವಾಗಿದೆ.

*ದಂಡ ಪ್ರಹಾರ, ಜಾಗೃತಿ*
ಮೆಟ್ರೋ ನಗರಗಳಲ್ಲಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ವ್ಯವಸ್ಥೆ ತಕ್ಷಣ ಜಾರಿಯಾಗಬೇಕಿದೆ. ಪ್ರಮುಖ ವೃತ್ತಗಳು, ಬಸ್ ನಿಲ್ದಾಣಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಿಸಿ ಟಿವಿ ಮೂಲಕ ನಿಗಾ ವಹಿಸಿ, ನಿಯಮ ಉಲ್ಲಂಘಿಸುವವರಿಗೆ ದಂಡದ ಚಲನ್ ಕಳುಹಿಸುವ ಕೆಲಸವಾಗಬೇಕು. ನಗರಕ್ಕೆ ಬರುವ ಹೊರರಾಜ್ಯದ ಕಾರ್ಮಿಕರು ಹಾಗೂ ಜನರಿಗೆ ಅವರವರ ಭಾಷೆಯಲ್ಲೇ ಸಾರ್ವಜನಿಕ ನೈರ್ಮಲ್ಯ ಕಾಪಾಡುವ ಬಗ್ಗೆ ಅರಿವು ಮೂಡಿಸುವ ಬೋರ್ಡ್‌ಗಳನ್ನು ಪ್ರದರ್ಶಿಸಬೇಕು.

*​ನಮ್ಮ ನಗರ, ನಮ್ಮ ಜವಾಬ್ದಾರಿ*
ಬಂದವರನ್ನು ಪ್ರೀತಿ-ನಂಬಿಕೆಯಿಂದ ಅಪ್ಪಿಕೊಳ್ಳುವುದು ಕರಾವಳಿಯ ಸಂಸ್ಕೃತಿ. ಆದರೆ, ನಗರದ ನೈರ್ಮಲ್ಯವನ್ನು ಕಾಪಾಡುವುದು ಇಲ್ಲಿ ವಾಸಿಸುವ ಎಲ್ಲ ನಾಗರಿಕರ ಮತ್ತು ಬಂದು ಹೋಗುವ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಮಂಗಳೂರಿನ ಸ್ವಚ್ಛತೆ ಮತ್ತು ಹಿರಿಮೆ- ಗರಿಮೆಯನ್ನು ಎತ್ತಿ ಹಿಡಿಯಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು