ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ತೊಕ್ಕೊಟ್ಟು ಶಾಖೆಯ 5ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ
20/07/2026, 19:10
ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ತೊಕ್ಕೊಟ್ಟು ಶಾಖೆಯ 5ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ತೊಕ್ಕೊಟ್ಟು ಶಾಖೆಯಲ್ಲಿ ಜರುಗಿತು.
ಸಂಘದ ಸದಸ್ಯರುಗಳಾದ ಶ್ರೀ ಮನೋಹರ , ಶ್ರೀ ಜೆ. ಲೋಕನಾಥ ಪೂಜಾರಿ, ಶ್ರೀ ಸುಧಾಕರ ಹಾಗೂ ಶ್ರೀಮತಿ ಭಾರತಿ ಎಂ. ಅವರುಗಳು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಶ್ರೀ ಮನೋಹರ ಅವರು “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಗ್ರಾಹಕ ಸ್ನೇಹಿ ಸಹಕಾರಿ ಸಂಘವಾಗಿದ್ದು, ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ. ಸಂಘವು ಇನ್ನಷ್ಟೂ ಅಭಿವೃದ್ದಿಗೊಳ್ಳಲಿ” ಎಂದು ಶುಭ ಹಾರೈಸಿದರು.
ಸದಸ್ಯರಾದ ಶ್ರೀ ವಿವೇಕ್ ಪೂಂಜ ರವರು ಮಾತನಾಡಿ “ಸಂಘವು 95% ಮಹಿಳಾ ಸಿಬ್ಬಂದಿಗಳಿಗೆ ಉದ್ಯೋಗವಕಾಶವನ್ನು ನೀಡಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯಲಿ” ಎಂದರು.
ಸದಸ್ಯರಾದ ಶ್ರೀಮತಿ ಅಮಿತಾ ಅವರು ಮಾತನಾಡಿ “ಶಾಖೆಗಳಿಗೆ ಭೇಟಿ ನೀಡಿದಾಗ ಸಿಬ್ಬಂದಿಗಳ ಸಹಕಾರ ಅತ್ಯುತ್ತಮವಾಗಿದ್ದು, ನಗುಮುಖದಿಂದ ಸೇವೆಯನ್ನು ನೀಡುತ್ತಿದ್ದಾರೆ. ದೈನಂದಿನ ವ್ಯವಹಾರಕ್ಕೆ ಉತ್ತಮ ಸೊಸೈಟಿ” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ “ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಉತ್ತಮ ಪ್ರಗತಿಯನ್ನು ಹೊಂದಲು ಸಾಧ್ಯವಾಗಿದೆ. ಸಂಘವು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜೊತೆಯಲ್ಲಿ ಸದಸ್ಯರ ಆರೋಗ್ಯದ ಕಾಳಜಿಯಿಂದ ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಸಂಘದ ಸದಸ್ಯರಿಗೆ ಸ್ಮರ್ಧಾತ್ಮಕ ದರದಲ್ಲಿ ವಿಮಾ ಸೌಲಭ್ಯಗಳನ್ನು ನೀಡುತ್ತಿದೆ. ತೊಕ್ಕೊಟ್ಟು ಶಾಖೆಯ 5ನೇ ವಾರ್ಷಿಕೋತ್ಸವ ಪ್ರಯುಕ್ತ 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10 ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.50 ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಠ ಮೌಲ್ಯವನ್ನು ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು” ಎಂದರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ನಿರ್ದೇಶಕರಾದ ಶ್ರೀ ಗೋಪಾಲ್ ಎಂ. ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಶಾಖೆಯ ಸಿಬ್ಬಂದಿಯಾದ ಶ್ರೀಮತಿ ಪ್ರೀತಿಕಾ ಅವರು ಸ್ವಾಗತಿಸಿ, ಶಾಖಾಧಿಕಾರಿಯಾದ ಶ್ರೀಮತಿ ಭವ್ಯ ಅವರು ಕಾರ್ಯಕ್ರಮ ನಿರೂಪಿಸಿದರು.












