ಇತ್ತೀಚಿನ ಸುದ್ದಿ
ಮೌನ ಸಾಧಕಿ, ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
18/07/2026, 19:36
ಬೆಂಗಳೂರು(reporterkarnataka.com): ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು.
ಮಾಹಿತಿಯ ಪ್ರಕಾರ, ಜುಲೈ 15ರಂದು ರಾತ್ರಿ ಚೆನ್ನಮ್ಮ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಆರಂಭದಲ್ಲಿ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುವ ನಿರೀಕ್ಷೆಯಿದೆ ಎಂದು ಕುಟುಂಬದವರು ತಿಳಿಸಿದ್ದರು. ಆದರೆ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಪರಿಣಾಮ ಇಂದು ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರ ಆರೋಗ್ಯದಲ್ಲಿ ಸಣ್ಣ ಪ್ರಮಾಣದ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸುಮಾರು 25 ದಿನ ಚಿಕಿತ್ಸೆ ಪಡೆದುಕೊಂಡು ಮನೆಗೆ ಹಿಂದಿರುಗಿದ್ದರು. ಜುಲೈ 15ರಂದು ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.








ಹೆಚ್‌ಡಿ ದೇವೇಗೌಡ ಮತ್ತು ಚೆನ್ನಮ್ಮಾ ದಂಪತಿಗೆ ಆರು ಮಕ್ಕಳಿದ್ದು, ರಾಜಕೀಯ-ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹೆಚ್‌ಡಿ ರೇವಣ್ಣ (ಹಿರಿಯ ಮಗ) ಹೆಚ್.ಡಿ. ಕುಮಾರಸ್ವಾಮಿ (ಎರಡನೇ ಮಗ) ಕೇಂದ್ರ ಸಚಿವ ಹೆಚ್‌ಡಿ ಬಾಲಕೃಷ್ಣ (ಮೂರನೇ ಮಗ) ಉದ್ಯಮಿ ಹೆಚ್‌ಡಿ ರಮೇಶ್ (ನಾಲ್ಕನೇ ಮಗ) ವೈದ್ಯಕೀಯ ವಿಭಾಗ ಹೆಚ್‌ಡಿ ಅನುಸೂಯಾ (ಮಗಳು) ಹೆಚ್‌ಡಿ ಶೈಲಜಾ (ಮಗಳು) ಅವರನ್ನು ಚೆನ್ನಮ್ಮಾ ಅಗಲಿದ್ದಾರೆ.
ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು. ಅವರ ನಿಧನದಿಂದ ದೇವೇಗೌಡ ಕುಟುಂಬಕ್ಕೆ ಅಪಾರ ದುಃಖ ಉಂಟಾಗಿದೆ.
ರಾಜಕೀಯ ನಾಯಕರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ. ಕಂಬನಿ ನಡೆದ ಪುತ್ರರು
ಚೆನ್ನಮ್ಮ ದೇವೇಗೌಡ ಗೌಡ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ಪುತ್ರರು ಮತ್ತು ಪುತ್ರಿಯರು ತಮ್ಮ ತಾಯಿಯನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅತ್ತರು. ತಮ್ಮ ಜೀವನದ ಏಳಿಗೆಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ತಾಯಿಯನ್ನು ಸ್ಮರಿಸಿಕೊಂಡು ದುಃಖ ತಡಲಾರದೆ ಕಣ್ಣೀರು ಸುರಿಸಿದರು.
*ಧೀಮಂತ ನಾಯಕನ ‘ಶಕ್ತಿ’ಯಾಗಿದ್ದ ಚೆನ್ನಮ್ಮ:* ಅಧಿಕಾರದ ಉತ್ತುಂಗದಲ್ಲೂ ಸರಳತೆಯ ಸಾಕಾರ
ಎಚ್. ಡಿ. ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ, ನಂತರ ದೇಶದ ಪ್ರಧಾನಿಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ, ಅವರ ಮನೆಯಲ್ಲಿನ ಸರಳತೆಯನ್ನು ಕಾಯ್ದುಕೊಳ್ಳುವಲ್ಲಿ ಚೆನ್ನಮ್ಮನವರ ಪಾತ್ರ ಹಿರಿದು. ಅಧಿಕಾರದ ಆಮಿಷಗಳಿಗಿಂತ, ಸಂಸಾರಿಕ ಬದ್ಧತೆ ಮತ್ತು ಮೌಲ್ಯಗಳಿಗೇ ಅವರು ಹೆಚ್ಚಿನ ಆದ್ಯತೆ ನೀಡಿದ್ದರು.ರಾಜಕೀಯದ ಗದ್ದಲಗಳ ನಡುವೆಯೂ ಕುಟುಂಬವನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದ ಅವರು, ದೇವೇಗೌಡರಿಗೆ ದೈಹಿಕ ಮತ್ತು ಮಾನಸಿಕ ನೆಮ್ಮದಿಯ ತಾಣವಾಗಿದ್ದರು. ದೇವೇಗೌಡರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ, ರಾಜಕೀಯದ ಏರಿಳಿತಗಳನ್ನು ಎದುರಿಸುತ್ತಿದ್ದಾಗ, ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಪತಿಗೆ ಸಂಪೂರ್ಣ ಬೆಂಬಲ ನೀಡಿದವರು ಚೆನ್ನಮ್ಮನವರು.
ಕಷ್ಟದ ದಿನಗಳಲ್ಲಿಯೂ ಧೃತಿಗೆಡದೆ, ಗೌಡರಿಗೆ ಬೆನ್ನೆಲುಬಾಗಿ ನಿಂತು ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಬಲ ತುಂಬಿದ್ದರು.”ನನ್ನ ರಾಜಕೀಯ ಜೀವನದ ಪ್ರತಿ ಹಂತದಲ್ಲೂ ಚೆನ್ನಮ್ಮನವರ ಬೆಂಬಲವಿದೆ. ನನ್ನ ಯಶಸ್ಸಿನ ಹಿಂದೆ ಅವರ ತ್ಯಾಗ ಮತ್ತು ತಾಳ್ಮೆಯ ಪಾತ್ರ ಅತಿ ದೊಡ್ಡದು,” ಎಂದು ಸ್ವತಃ ದೇವೇಗೌಡರೇ ಅನೇಕ ವೇದಿಕೆಗಳಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು.
*ಮೌನ ಸಾಧಕಿ:*
ಸಾರ್ವಜನಿಕವಾಗಿ ಹೆಚ್ಚಿನ ಪ್ರಚಾರವನ್ನು ಬಯಸದ ಚೆನ್ನಮ್ಮನವರು, ತೆರೆಮರೆಯಲ್ಲಿಯೇ ಕುಟುಂಬದ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸಿದ್ದರು. ದೇವೇಗೌಡರ ಸುದೀರ್ಘ ರಾಜಕೀಯ ಪಯಣದಲ್ಲಿ ಅವರು ಅನುಭವಿಸಿದ ಕಷ್ಟಗಳು, ತಳಮಳಗಳು ಮತ್ತು ಸವಾಲುಗಳನ್ನು ಮೌನವಾಗಿ ಭರಿಸಿದವರು ಅವರು.
ಭಾರತದ ರಾಜಕಾರಣದಲ್ಲಿ ಅಪರೂಪದ ವ್ಯಕ್ತಿತ್ವಗಳ ಸಾಲಿನಲ್ಲಿ ನಿಲ್ಲುವವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು. ಕೇವಲ ಒಬ್ಬ ಸಾಮಾನ್ಯ ಶಾಸಕರಾಗಿ ಆರಂಭವಾದ ಅವರ ಪಯಣ, ದೇಶದ ಉನ್ನತ ಹುದ್ದೆಯಾದ ಪ್ರಧಾನಿ ಪಟ್ಟದವರೆಗೆ ತಲುಪಿದ ಕಥೆಯ ಹಿಂದೆ ಎದ್ದು ಕಾಣುವ ಶಕ್ತಿ ಅವರ ಪತ್ನಿ ಚೆನ್ನಮ್ಮನವರದ್ದು.ಬೆನ್ನೆಲುಬಾಗಿ ನಿಂತ
*ಧೈರ್ಯದ ಸಂಕೇತ:*
ದೇವೇಗೌಡರು ರಾಜಕೀಯದ ಏರಿಳಿತಗಳಲ್ಲಿ, ಸೋಲು-ಗೆಲುವುಗಳ ಸವಾಲುಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾಗ, ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡವರು ಚೆನ್ನಮ್ಮನವರು. ಗೌಡರು ಹಳ್ಳಿ ಹಳ್ಳಿಗಳಲ್ಲಿ ತಿರುಗುತ್ತಾ, ಜನಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ಮುಳುಗಿದ್ದಾಗ, ಮನೆಯ ವ್ಯವಸ್ಥೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಸ್ಥಿರತೆಯನ್ನು ಕಾಪಾಡುವ ಮೂಲಕ ಅವರು ಗೌಡರಿಗೆ ಬಲವಾದ ಬೆನ್ನೆಲುಬಾಗಿ ನಿಂತರು.
*ನನ್ನ ಯಶಸ್ಸಿನ ಹಿಂದೆ ಅವರಿದ್ದಾರೆ:*
ದೇವೇಗೌಡರೇ ಸ್ವತಃ ಹಲವು ವೇದಿಕೆಗಳಲ್ಲಿ, “ನನ್ನ ರಾಜಕೀಯ ಜೀವನದ ಏಳಿಗೆಯಲ್ಲಿ ಚೆನ್ನಮ್ಮನ ಪಾತ್ರ ಅತಿ ದೊಡ್ಡದು. ನಾನು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ಅವರು ಕೊಟ್ಟ ಬೆಂಬಲ ಮತ್ತು ಮನೆ ನಡೆಸಿದ ರೀತಿ ಕಾರಣ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಠಿಣ ಸಂದರ್ಭಗಳಲ್ಲಿ, ರಾಜಕೀಯ ಪಿತೂರಿಗಳು ನಡೆದಾಗಲೂ ದೇವೇಗೌಡರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಚೆನ್ನಮ್ಮನವರು ಮಾಡಿಕೊಂಡು ಬಂದಿದ್ದರು.
ತ್ಯಾಗ ಮತ್ತು ಸಹನೆ
ಅಧಿಕಾರದ ಉತ್ತುಂಗದಲ್ಲಿದ್ದಾಗಲೂ ಪ್ರಚಾರದ ಹಂಗಿಲ್ಲದ, ಸರಳ ಜೀವನ ನಡೆಸುವ ಮೂಲಕ ರಾಜಕೀಯ ಕುಟುಂಬಗಳಿಗೆ ಅವರು ಮಾದರಿಯಾಗಿದ್ದಾರೆ. ಪರಿವಾರದ ಒಗ್ಗಟ್ಟು: ರಾಜಕೀಯ ಒತ್ತಡಗಳ ನಡುವೆಯೂ ಕುಟುಂಬವನ್ನು ಒಗ್ಗೂಡಿಸಿ ಕೊಂಡು ಹೋಗುವ ಕಲೆ ಚೆನ್ನಮ್ಮನವರದ್ದು. ಇದು ಇಂದಿನ ಪೀಳಿಗೆಯ ರಾಜಕಾರಣಿಗಳಿಗೆ ಕುಟುಂಬದ ಮೌಲ್ಯಗಳನ್ನು ಕಲಿಸುತ್ತದೆ.
ಒಬ್ಬ ನಾಯಕನ ಯಶಸ್ಸಿನ ಹಿಂದೆ ಕೇವಲ ಆತನ ವ್ಯಕ್ತಿತ್ವ ಮಾತ್ರವಲ್ಲ, ಆತನಿಗೆ ಆಧಾರಸ್ತಂಭವಾಗಿ ನಿಲ್ಲುವ ಸಹಧರ್ಮಿಣಿಯ ಪಾತ್ರ ಎಷ್ಟು ನಿರ್ಣಾಯಕ ಎಂಬುದನ್ನು ಇವರ ಬದುಕು ಸಾಬೀತುಪಡಿಸುತ್ತದೆ. ಹಿಂದೆ ದೇವೇಗೌಡರು ಪ್ರಧಾನಿಯಾದಾಗ ಅಥವಾ ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟುಗಳು ಎದುರಾದಾಗ, ಚೆನ್ನಮ್ಮನವರು ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಪರದೆಯ ಹಿಂದಿನಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದ ಶಕ್ತಿ ಅವರು. ಕೃಷಿ ಭೂಮಿಯ ಕೆಲಸದಿಂದ ಹಿಡಿದು ರಾಜಕೀಯ ಸಭೆಗಳವರೆಗೆ ಗೌಡರ ಪ್ರತಿಯೊಂದು ನಡೆಯ ಹಿಂದೆಯೂ ಚೆನ್ನಮ್ಮನವರ ಮೌನ ಸಮ್ಮತಿ ಮತ್ತು ಪ್ರೇರಣೆ ಇರುತ್ತಿತ್ತು ಎಂಬುದು ಕುಟುಂಬದ ಆಪ್ತ ವಲಯದ ಮಾತು.












