ಇತ್ತೀಚಿನ ಸುದ್ದಿ
ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ ಆದೇಶ
05/06/2026, 18:51
ಬೆಂಗಳೂರು(reporterkarnataka.com): ರಾಜ್ಯದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಯು.ಟಿ. ಖಾದರ್ ಅವರು ಆಡಳಿತ ಸುಧಾರಣೆಗೆ ಬಿರುಸಿನ ಚಾಲನೆ ನೀಡಿದ್ದಾರೆ.
ರಾಜ್ಯದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಿಲ್ಲದೆ ಉಚಿತ ಹಾಗೂ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಮತ್ತು ಇಲಾಖೆಯನ್ನು ತಳಮಟ್ಟದಿಂದ ಸಬಲೀಕರಿಸಲು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಖಾತೆ ವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಆರೋಗ್ಯ ಕ್ಷೇತ್ರವು ಅತ್ಯಂತ ವಿಶಾಲವಾಗಿದ್ದು, ಸಾರ್ವಜನಿಕರ ಜೀವದ ಜೊತೆ ನೇರ ಸಂಪರ್ಕ ಹೊಂದಿದೆ. ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನೀಗಿಸುವುದು, ಹೊಸ ಆರೋಗ್ಯ ನೀತಿಗಳ ಜಾರಿ ಹಾಗೂ ಸರ್ಕಾರದ ಉಚಿತ ಚಿಕಿತ್ಸಾ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವುದು ನಮ್ಮ ಮುಖ್ಯ ಗುರಿ” ಎಂದರು.
ಇದೇ ವೇಳೆ, ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ತಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದ ಜನಪರ ಯೋಜನೆಗಳು ಮತ್ತು ಉತ್ತಮ ಕಾರ್ಯಕ್ರಮಗಳನ್ನು ಯಾವುದೇ ಅಡೆತಡೆಯಿಲ್ಲದೆ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವುದಾಗಿ ಸ್ಪಷ್ಟಪಡಿಸಿದರು.
*ಎಂಬಿಬಿಎಸ್ ಪದವೀಧರರಿಗೆ ಬಂಪರ್ ಆಫರ್:*
ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾಡುತ್ತಿರುವ ವೈದ್ಯರ ಕೊರತೆಗೆ ಶಾಶ್ವತ ಮುಕ್ತಿ ನೀಡಲು ಸಚಿವರು ಭರ್ಜರಿ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ವೈದ್ಯಕೀಯ ಪದವಿ ಮುಗಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಆಸಕ್ತಿಯಿರುವ ಎಂಬಿಬಿಎಸ್ (MBBS) ಪದವೀಧರರಿಗೆ ನೇರ ನೇಮಕಾತಿಯ ಸುವರ್ಣಾವಕಾಶ ಕಲ್ಪಿಸಲಾಗಿದೆ. ಅರ್ಹ ವೈದ್ಯರು ಯಾವುದೇ ಕಠಿಣ ಪರೀಕ್ಷೆಗಳಿಲ್ಲದೆ ನೇರವಾಗಿ ವಾಕ್-ಇನ್ ಸಂದರ್ಶನದ ಮೂಲಕ ಆಯಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ (DHO) ತಮ್ಮ ಇಚ್ಛಾ ಪತ್ರ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ಕೇವಲ ಒಂದು ವಾರದ ಒಳಗಾಗಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಆಸ್ಪತ್ರೆಗಳಿಗೆ ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಈ ಯೋಜನೆಯಡಿ ತಾತ್ಕಾಲಿಕವಾಗಿ ನೇಮಕಗೊಳ್ಳುವ ವೈದ್ಯರಿಗೆ ಮಾಸಿಕ ₹60,000 ಆಕರ್ಷಕ ವೇತನ ನಿಗದಿಪಡಿಸಲಾಗಿದೆ. ಇದರೊಂದಿಗೆ ಆರೋಗ್ಯ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ವೈದ್ಯಕೀಯ ತಜ್ಞರು ಹಾಗೂ ಸಾರ್ವಜನಿಕರಿಂದ ಮುಕ್ತ ಸಲಹೆಗಳನ್ನು ಆಹ್ವಾನಿಸಿದ್ದಾರೆ.
ಇಲಾಖೆಯ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ‘ಆಯುಷ್ಮಾನ್ ಕರ್ನಾಟಕ’ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಯು.ಟಿ. ಖಾದರ್, ಬಡ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ದರ್ಪಕ್ಕೆ ಬ್ರೇಕ್ ಹಾಕಲು ಮತ್ತು ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ, ಇತ್ತೀಚಿನ ಸಚಿವ ಸಂಪುಟದ ಖಾತೆ ಹಂಚಿಕೆಯಲ್ಲಿ ತಮಗೆ ಅಸಮಾಧಾನವಿದೆ ಎಂಬ ರಾಜಕೀಯ ವದಂತಿಗಳಿಗೆ ಯು.ಟಿ. ಖಾದರ್ ಅತ್ಯಂತ ಪ್ರಬುದ್ಧತೆಯಿಂದ ಪೂರ್ಣವಿರಾಮ ಇಟ್ಟಿದ್ದಾರೆ. “ಪಕ್ಷ ಮತ್ತು ಸರ್ಕಾರ ನಮಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಷ್ಠೆಯಿಂದ ನಿಭಾಯಿಸುವುದು ನಮ್ಮ ಕರ್ತವ್ಯ. ಜನಸೇವೆಯಲ್ಲಿ ಸಿಗುವ ತೃಪ್ತಿಗಿಂತ ದೊಡ್ಡದು ಯಾವುದೂ ಇಲ್ಲ. ಪ್ರಸ್ತುತ ನೀಡಿರುವ ಆರೋಗ್ಯ ಖಾತೆಯ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ, ನಾನು ಸಂಪೂರ್ಣ ಸಮಾಧಾನ ಮತ್ತು ಸಂತೋಷದಿಂದ ಇದ್ದೇನೆ. ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ” ಎಂದು ಹೇಳುವ ಮೂಲಕ ತಮ್ಮ ಮೇಲಿನ ವದಂತಿಗಳನ್ನು ತಳ್ಳಿಹಾಕಿದ್ದಾರೆ.












