ಇತ್ತೀಚಿನ ಸುದ್ದಿ
ರಾಜ್ಯಸಭೆ ಚುನಾವಣೆ: ದೇವೇಗೌಡ್ರ ಬದಲಿಗೆ ಸದಾನಂದ ಗೌಡ ಆಯ್ಕೆ: ಬಿಜೆಪಿ ಸಭೆಯಲ್ಲಿ ಚರ್ಚೆ
24/05/2026, 14:47
ಬೆಂಗಳೂರು(reporterkarnataka.com): ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ಸ್ಥಾನಗಳಿಗೆ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಪರಿಗಣಿಸಬೇಕು ಎಂದು ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್, ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್‌ವಾಲ್, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಪ್ರಮುಖರ ಸಭೆ ಗುರುವಾರ ಇಲ್ಲಿ ನಡೆಯಿತು.
ಸದಾನಂದ ಗೌಡ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಅವರು ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ನಂತರ ಅವರಿಗೆ ಯಾವುದೇ ಸ್ಥಾನ ನೀಡಿರಲಿಲ್ಲ. ಈಗ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಸ್ಥಾನಗಳನ್ನು ಆಯ್ಕೆ ಮಾಡಲು ಅವಕಾಶವಿದ್ದು, ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ. ಆ ಸ್ಥಾನಕ್ಕೆ ಸದಾನಂದ ಗೌಡರನ್ನು ಪರಿಗಣಿಸಬೇಕು ಎಂದು ಹಲವು ನಾಯಕರು ಪ್ರಸ್ತಾಪ ಮಾಡಿದರು.
ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಎಚ್.ಡಿ.ದೇವೇಗೌಡ ಅವರ ಅವಧಿ ಜೂನ್ 25ಕ್ಕೆ ಮುಕ್ತಾಯವಾಗಲಿದೆ. ಅವರು ಈ ಹಿಂದೆ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಬದಲಾದ ಕಾಲಮಾನದಲ್ಲಿ ದೇವೇಗೌಡರ ನೇತೃತ್ವದ ಜೆಡಿಎಸ್- ಎನ್‌ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದೆ. ಅವರನ್ನು ಪುನರಾಯ್ಕೆ ಮಾಡುವಷ್ಟು ಸದಸ್ಯ ಬಲ ಜೆಡಿಎಸ್‌ನಲ್ಲಿ ಇಲ್ಲ. ದೇವೇಗೌಡರು ಬಿಜೆಪಿ ಬೆಂಬಲದೊಂದಿಗೆ ಮರು ಆಯ್ಕೆ ಬಯಸಿದ್ದಾರೆ. ಆದರೆ, ಅವರ ಬದಲು ಪಕ್ಷದವರಿಗೆ ಅವಕಾಶ ಕಲ್ಪಿಸಬೇಕೆಂಬ ಚರ್ಚೆ ಬಿಜೆಪಿಯಲ್ಲಿ ನಡೆದಿದೆ.
ವಿಧಾನ ಪರಿಷತ್ ಸದಸ್ಯತ್ವಕ್ಕೂ ಚರ್ಚೆ: ‘ವಿಧಾನ ಪರಿಷತ್‌ನಲ್ಲಿ ಏಳು ಸ್ಥಾನಗಳು ಖಾಲಿಯಾಗಲಿದ್ದು, ಅದರಲ್ಲಿ ಎರಡು ಸ್ಥಾನಗಳು ಬಿಜೆಪಿಗೆ ಸಿಗಲಿವೆ. ಭಾರತಿ ಶೆಟ್ಟಿ ಅವರನ್ನು ಪುನರಾಯ್ಕೆ ಮಾಡಲು, ಹೊಸಬರಿಗೆ ಒಂದು ಸ್ಥಾನ ನೀಡುವ ಕುರಿತು ಚರ್ಚೆಗಳು ನಡೆದವು’ ಎಂದು ಪಕ್ಷದ ಮೂಲಗಳು ತಿಳಿಸಿವೆ.













