ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿ ಸಂಚರಿಸುವ ಮಾರ್ಗದ ಬಳಿ ಜಿಲೆಟಿನ್ ಪತ್ತೆ ಪ್ರಕರಣ: ಆರೋಪಿ ಲೋಹಿತ್ ತಮಿಳುನಾಡಿನಿಂದ ತಂದಿರುವ ಶಂಕೆ
13/05/2026, 21:58
ಬೆಂಗಳೂರು(reporterkarnataka.com): ಬೆಂಗಳೂರಿನ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣದಲ್ಲಿ ಈಗ ತಮಿಳುನಾಡು ಕನೆಕ್ಷನ್ ಇದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಬೆಂಗಳೂರಿಗೆ ಬರುವ ಒಂದು ದಿನ ಮುಂಚಿತವಾಗಿ, ಅಂದರೆ ಮೇ 9ರಂದು ಆರೋಪಿ ಲೋಹಿತ್ ತಮಿಳುನಾಡಿಗೆ ಭೇಟಿ ನೀಡಿದ್ದ ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. ತಮಿಳುನಾಡಿನಲ್ಲಿ ಜಿಲೆಟಿನ್ ತಯಾರಿಕಾ ಘಟಕಗಳು ಹೆಚ್ಚಿರುವುದರಿಂದ, ಅಲ್ಲಿಂದಲೇ ಇವುಗಳನ್ನು ತರಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ತೆಯಾದ ಸ್ಫೋಟಕಗಳು ಎರಡು ವರ್ಷ ಹಳೆಯದಾಗಿದ್ದು, ಅವುಗಳ ಶಕ್ತಿ ಕುಂದಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಪ್ರಧಾನಿ ಸಂಚರಿಸುವ ಮಾರ್ಗದ ಸಮೀಪವೇ ಇವು ಪತ್ತೆಯಾಗಿರುವುದು ಭದ್ರತಾ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲ್ಪಟ್ಟಿದೆ.
ಸ್ಥಳೀಯ ಕ್ವಾರಿಗಳಿಂದ ಇವುಗಳನ್ನು ಎಸೆಯಲಾಗಿದೆಯೇ ಅಥವಾ ಪ್ರಧಾನಿ ಭೇಟಿ ವೇಳೆ ಆತಂಕ ಸೃಷ್ಟಿಸಲು ನಡೆಸಿದ ಸಂಚೇ ಎಂಬ ಆಯಾಮದಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಇನ್ನು, ತಮಿಳುನಾಡಿನ ಸ್ಫೋಟಕ ಮಾರಾಟಗಾರರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿ ತಮಿಳುನಾಡಿಗೆ ಭೇಟಿ ನೀಡಿದ್ದು ಯಾಕೆ? ಸ್ಫೋಟಕಗಳನ್ನು ತರಲು ಹೋಗಿದ್ದನೇ? ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಒಂದೆರೆಡು ದಿನಗಳಲ್ಲಿ ಪೊಲೀಸರು ಸಂಪೂರ್ಣ ಮಾಹಿತಿ ಸಂಗ್ರಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












