ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಫೆಬ್ರವರಿ ತಿಂಗಳ ಟಾಪರ್ ಆಗಿ ಮಾನ್ಸಿ ಎಸ್. ಪೂಜಾರಿ ಹಾಗೂ ಮೌರ್ಯ ನಾರ್ಕೋಡು ಆಯ್ಕೆ
25/03/2026, 12:48
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳ ಟಾಪರ್ ಆಗಿ ಮಾನ್ಸಿ ಎಸ್. ಪೂಜಾರಿ ಹಾಗೂ ಮೌರ್ಯ ನಾರ್ಕೋಡು ಆಯ್ಕೆಯಾಗಿದ್ದಾರೆ.
ಮಂಗಳೂರಿನ ಆಕಾಶಭವನ ನಿವಾಸಿಗಳಾದ ಭಾರತಿ ಮತ್ತು ಶ್ರೀನಿವಾಸ್ ಪೂಜಾರಿ ದಂಪತಿಯ ಪುತ್ರಿಯಾದ ಮಾನ್ಸಿ ಎಸ್. ಪೂಜಾರಿ ಕೆನರಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಈಕೆ ಕಠಿಣ ಯೋಗಾಸನ ಅಭ್ಯಾಸವನ್ನು ಶ್ರೀ ಪ್ರತ್ಯಕ್ಷ ಅವರ ಬಳಿ ಕಲಿಯುತ್ತಿದ್ದಾಳೆ. ವಿ4 ಚಾನೆಲ್‌ನಲ್ಲಿ ‘ಮಕ್ಕಳಿಗಾಗಿ ಯೋಗ’ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಮಂಗಳೂರು ಆಲೋಶಿಯಸ್ ಕಾಲೇಜು ಹಾಗೂ ಉಳ್ಳಾಲ ಪಾಂಡಿರಾಜ ಬಲ್ಲಾಳ್ ಮೆಡಿಕಲ್ ಕಾಲೇಜಿನಲ್ಲಿ ಕುಶಾಲಪ್ಪ ಗೌಡರ ನೇತೃತ್ವದ ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಈ ಮೂಲಕ ಯೋಗದ ಉಪಯೋಗಗಳನ್ನು ವಿದ್ಯಾರ್ಥಿಗಳಿಗೆ ಯೋಗಾಸನ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾಳೆ. ಅಲ್ಲಿಯೂ ಎಲ್ಲರಿಂದಲೂ ಪ್ರಸಂಶೆಗೆ ಪಾತ್ರರಾಗಿ ಧನರೂಪದ ಬಹುಮಾನ ಹಾಗೂ ಮೊಮೆಂಟೋ ಪಡೆದಿದ್ದಾಳೆ. ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಬೆಂಗಳೂರಿನ
ಶಿವಜ್ಯೋತಿ ಯೋಗ ಕೇಂದ್ರ ಹಾಗೂ ಪಿ.ಎನ್.ಆರ್. ಯೋಗ ಕೇಂದ್ರದವರು ನಡೆಸಿದ ನ್ಯಾಶನಲ್ ಲೆವೆಲ್ ಯೋಗ ಚಾಂಪಿಯನ್‌ಶಿಪ್ ನಲ್ಲಿ ದ್ವಿತೀಯ ಬಹುಮಾನ, ಹಾಗೂ ಬಿ.ಕೆ.ಎಸ್. ಅಯ್ಯಂಗಾರ್, ಬೆಂಗಳೂರು ಇವರ ಸ್ಮರಣಾರ್ಥ ನ್ಯಾಶನಲ್ ಲೆವೆಲ್ ಓಪನ್ ಯೋಗ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಬಹುಮಾನ ಪಡೆದಿದ್ದಾಳೆ. ತಪಸ್ವಿ ಯೋಗ ಕೇಂದ್ರದವರು ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಮಂಗಳಾ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ 3ನೇ ಸ್ಥಾನ, ಕಲಾತ್ಮಕ ಯೋಗ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಯೋಗಾಸನ ಮಾತ್ರವಲ್ಲದೇ ಯಕ್ಷಗಾನವನ್ನು ಪ್ರಸ್ತುತ
ಕುಮಾರ್ ಮಾಲೆಮಾರ್ ಸಾರಥ್ಯದ ಸಂಜೀವ ಕಜೆಪದವು ಇವರಲ್ಲಿ ಕಲಿಯುತ್ತಿದ್ದು, “ಅಂಬುರುಹ ಯಕ್ಷ ಕಲಾ ಕೇಂದ್ರ, ಮಾಲೆಮಾರ್” ಇದರ ವಿದ್ಯಾರ್ಥಿನಿಯಾಗಿದ್ದಾಳೆ. ಗೆಜ್ಜೆಪೂಜೆಯೊಂದಿಗೆ ರಂಗಪ್ರವೇಶ ಮಾಡಿ “ಕದಂಬ ಕೌಶಿಕೆ”, “ಶಿವಭಕ್ತ ಸಿರಿಯಾಲ”, “ಶ್ರೀ ದೇವಿ ಲಲಿತಾಮೃತ”, ‘ಮಲೆತ ಬೊಲ್ಲು’ “ಶ್ರೀ ರಾಮ ದರ್ಶನಂ”, “ಮಹಿಷ ವಧೆ” ಮುಂತಾದ ಯಕ್ಷಗಾನಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದಾಳೆ. ಪ್ರಸ್ತುತ ವಿದುಷಿ ವಿದ್ಯುಷಿ ಶ್ರೀಜಾ ಹರೀಶ್ ಮತ್ತು ರಮ್ಯಾ ಅನೀಶ್ ಅವರ ಬಳಿ ಭರತನಾಟ್ಯವನ್ನು ಹಾಗೂ
ಗೀತಾ ರಾಜೇಶ್ ಅವರ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ವಿವಿಧ ವಿಧಗಳಲ್ಲಿ ಬ್ಯಾಂಡ್ ಬಾರಿಸುವುದು ಇವಳಿಗೆ ತುಂಬಾ ಇಷ್ಟ, ವಿ4 ಟಿವಿ ಚಾನೆಲ್, ಅಭಿಮತ ಟಿವಿ ಚಾನೆಲ್‌ನಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ವತಿಯಿಂದ ನಡೆಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಅಷ್ಟೇ ಅಲ್ಲದೆ ಶಾಲಾ ಚಟುವಟಿಕೆ, ಆಟ-ಪಾಠ, ನೃತ್ಯದ ಜೊತೆಗೆ ಛದ್ಮವೇಶ, ಕೃಷ್ಣವೇಷ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳು ಹಾಗೂ ಹಲವಾರು ಕಡೆಗಳಲ್ಲಿ ನೆನಪಿನ ಕಾಣಿಕೆಗಳನ್ನು ಹಾಗೂ ಧನರೂಪದ ಬಹುಮಾನ ಪಡೆದಿದ್ದಾಳೆ. ಕಾರ್ಕಳದಲ್ಲಿ ನಡೆಸಿದ ಶಾರದಾ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕ್ಯಾಶ್ ಹಾಗೂ ಚಿನ್ನದ ಪದಕ ಪಡೆದಿದ್ದಾಳೆ.
ಬೆಂಗಳೂರಿನ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರೀಯ ಕಲಾ ಪ್ರತಿಬೋತ್ಸವದಲ್ಲಿ ” ಕರ್ನಾಟಕ ಬಾಲಕಲಾ ಪ್ರತಿಭಾ ಪುರಸ್ಕಾರವನ್ನು ಪಡೆದಿದ್ದಾಳೆ. ಸಂಗೀತ ಕಲಿಯುವುದು, ಡ್ಯಾನ್ಸ್ ಮಾಡುವುದು, ಡ್ರಾಯಿಂಗ್, ಅಭಿನಯ ಮಾಡುವುದು, ಕುಣಿತ ಭಜನೆ ಮುಂತಾದವುಗಳು ಈಕೆಯ ಹವ್ಯಾಸ. ಪ್ರಸ್ತುತ ಪದ್ಮಶ್ರೀ ಭಟ್ ಅವರ ಸಾರಥ್ಯದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಹಲವು ಬಾರಿ ವಿನ್ನರ್ ಆಗಿ ಆಯ್ಕೆಯಾಗಿದ್ದಾಳೆ.
ಮೌರ್ಯ ನಾರ್ಕೋಡು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾರ್ಕೋಡು ನಿವಾಸಿಗಳಾದ ಮುಕುಂದ ಮತ್ತು ಮಮತಾ ಅವರ ಪುತ್ರನಾಗಿದ್ದು, ತನ್ನ ಚಿಕ್ಕ ವಯಸ್ಸಿನಿಂದಲೇ ಸಂಗೀತ, ಡ್ಯಾನ್ಸ್, ಕಥೆ ಹೇಳುವುದು, ಚೆಸ್, ಓದು ಮತ್ತು ಆಟೋಟಗಳಲ್ಲಿ ಮುಂಚೂಣಿಯಲ್ಲಿರುವ ಬಾಲ ಪ್ರತಿಭೆ. ಈತ ತನ್ನ 5ನೇ ವಯಸ್ಸಿನಲ್ಲಿ ರಂಗ ಮಯೂರಿ ಕಲಾ ಶಾಲೆಯಲ್ಲಿ ಸುಗಮ ಸಂಗೀತವನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಮತ್ತು
ಶ್ರೀಲಕ್ಷ್ಮೀ ಅವರಲ್ಲಿ ಆರಂಭಿಸಿ ನಂತರ ಸುಮನಾ ರಾವ್ ಪುತ್ತೂರು ಅವರಲ್ಲಿ ಪ್ರಸ್ತುತ ಅಭ್ಯಾಸ ಮಾಡುತ್ತಿದ್ದಾನೆ.
ಶಾಸ್ತ್ರಿಯ ಸಂಗೀತವನ್ನು ಮಹಾಬಲೇಶ್ವರ ಬಿರ್ಮೂಕಜೆ ಅವರಲ್ಲಿ ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾನೆ. ರಂಗ ಮಯೂರಿ ಕಲಾ ಶಾಲೆ ಸುಳ್ಯದಲ್ಲಿ ಡ್ಯಾನ್ಸ್ ತರಬೇತಿ ಪಡೆದಿದ್ದು, ಹಲವಾರು ವೇದಿಕೆಗಳಲ್ಲಿ, ರಾಜ್ಯಮಟ್ಟದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ .ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರ ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಯಲ್ಲಿ ಬಹುಮಾನಗಳಿಸಿದ ಹೆಗ್ಗಳಿಕೆ ಈತನದ್ದು. ರಂಗಮಯೂರಿ ಕಲಾ ಶಾಲೆಯ ಸಂಚಾಲಕರಾದ ಲೋಕೇಶ್ ಊರುಬೈಲು ಅವರ ನಿರ್ದೇಶನದಲ್ಲಿ, “ಬಾಲ್ಯ”ಎಂಬ ಆಲ್ಬಂ ಸಾಂಗ್ ಲ್ಲಿ ಅಭಿನಯಿಸಿ, ಬೇಸಿಗೆ ಶಿಬಿರಗಳಲ್ಲಿ ನಾಟಕದಲ್ಲಿ ಅಭಿನಯಿಸಿದ ಕೀರ್ತಿ ಈತನದು. ಹಲವಾರು ವೇದಿಕೆಗಳಲ್ಲಿ ಹಾಡುಗಳನ್ನು ಹಾಡಿ ಜನರ ಮೆಚ್ಚುಗೆ ಗಳಿಸಿದ್ದಾನೆ.








ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ, ದೇಶ ಭಕ್ತಿ ಗೀತೆ, ಕಥೆ ಹೇಳುವ ಸ್ಪರ್ಧೆ ಯಲ್ಲಿ ಬಹುಮಾನ ಗಳಿಸಿದ್ದಾನೆ. ಹಾಗೆಯೇ ಚೆಸ್ ತರಬೇತಿಯನ್ನು ಹರಿಪ್ರಸಾದ್ ಕೊಯಿಂಗಾಜೆ ಅವರಲ್ಲಿ ಪಡೆದಿದ್ದು ಚೆಸ್ ಸ್ಪರ್ಧೆ ಯಲ್ಲಿ ಬಹುಮಾನ ಪಡೆದಿದ್ದಾನೆ.
2024ರ ಮಕ್ಕಳ ದಸರಾ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ ಖುಷಿ ಈತನದ್ದು. ಸ್ಕೌಟ್ ಗೈಡ್ಸ್ ವತಿಯಿಂದ ನಡೆದ ಗೀತಗಾಯನ ಸ್ಪರ್ಧೆಯಲ್ಲಿ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ್ದಾನೆ. ರಂಜಿನಿ ಯವರ ಮಾರ್ಗದರ್ಶನದಲ್ಲಿ ಶ್ರೀ ಗುರು ರಾಘವೇಂದ್ರ ಮಕ್ಕಳ ಕಲಾ ತಂಡದಲ್ಲಿ ಹಲವಾರು ವೇದಿಕೆಗಳಲ್ಲಿ ಹಾಡು, ಭಜನೆ ಕಾರ್ಯಕ್ರಮಗಳನ್ನು ನೀಡಿದ್ದಾನೆ. ಲೋಕೇಶ್ ಊರುಬೈಲು ಅವರ ನಿರ್ದೇಶನದ “ಅಪ್ಪ,” ಅರೆಭಾಷೆ ನಾಟಕದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವನದ್ದು.”ಅಪ್ಪ”ನಾಟಕವು ಮೊದಲ ಪ್ರದರ್ಶನ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ, ಎರಡನೇ ಪ್ರದರ್ಶನವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ನಡೆಯಿತು. ಒಟ್ಟು 9 ಪ್ರದರ್ಶನಗಳನ್ನು ಕಂಡು, ಇನ್ನು ಹಲವಾರು ಕಡೆ ಪ್ರದರ್ಶನ ನಡೆಯಲಿರುವುದು. ಕೆಲವು ತಿಂಗಳುಗಳಿಂದ ಯೋಗ ಗುರುಗಳಾದ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿಯನ್ನು ಪಡೆಯುತ್ತಿದ್ದಾನೆ. ಹಾಗೆಯೇ ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಪದ್ಮಶ್ರೀ, ಬಸವರಾಜ ಮಂತ್ರಿ, ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಪ್ರೋತ್ಸಾಹ ನೀಡುತ್ತಿದ್ದಾರೆ.
ಮೌರ್ಯ ನಾರ್ಕೋಡು ಪ್ರಸ್ತುತ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾನೆ.












