ಇತ್ತೀಚಿನ ಸುದ್ದಿ
ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್, ಮಾತ್ನಾಡೋ ಜನ ಒಂದ್ ಅರ್ಥ ಮಾಡ್ಕೋಬೇಕು: ಮೌನ ಮುರಿದ ರಶ್ಮಿಕಾ ಮಂದಣ್ಣ
13/03/2026, 18:02
ಬೆಂಗಳೂರು(reporterkarnataka.com): ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನ್ಯಾಷನಲ್ ಕ್ರಷ್ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಮೌನ ಮುರಿದಿದ್ದಾರೆ. ಅಲ್ಲದೆ ಇತ್ತಿಚಿಗೆ ನಡೆದ ವಿವಾಹದ ಬಳಿಕ ತಮ್ಮ ತಾಯಿಯದ್ದು ಎನ್ನಲಾಗಿರುವ ಆಡಿಯೋ ಒಂದು ವೈರಲ್ ಆಗುತ್ತಿದೆ. ಈ ಸಮಯದಲ್ಲಿ ರಶ್ಮಿಕಾ ಎಲ್ಲ ಬೆಳವಣಿಗೆಗಳ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಸಿನಿಮಾ ಲೋಕದ ಈ ಅದ್ಭುತ ಪಯಣದಲ್ಲಿ ಇಲ್ಲಿಯವರೆಗೆ ನನ್ನ ಜೊತೆಗಿರುವ ಪ್ರೀತಿಯ ಜನರಿಗೆ, ಇದಕ್ಕೆ ಸಂಬಂಧಿಸಿದವರಿಗೂ ನಮಸ್ಕಾರಗಳು. ಕಳೆದ 8 ವರ್ಷಗಳಿಂದ ಮೀಡಿಯಾದ ಒಂದು ವರ್ಗ, ಕೆಲವು ವ್ಯಕ್ತಿಗಳಿಂದ ನನ್ನ ವಿರುದ್ಧ ಸುಳ್ಳು ಮಾಹಿತಿ ಹರಡುತ್ತಿದೆ. ನನಗೆ ಇದು ಕಿರುಕುಳ ಆಗುತ್ತಿದ್ದು, ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಾನು ನನ್ನ ಮಾತುಗಳನ್ನು ಸಂದರ್ಭಕ್ಕೆ ಬೇಕಾದಂತೆ ಬಳಸುವುದಿಲ್ಲ, ಆದರೆ ಅವುಗಳನ್ನು ತಿರುಚಲಾಗಿದೆ. ನಾನು ಹೇಳದ ಮಾತುಗಳನ್ನು ಸುಳ್ಳು ಕಥೆಗಳಂತೆ ಸೃಷ್ಟಿ ಮಾಡಲಾಗಿದೆ. ಬರೀ ವ್ಯೂಸ್, ಎಂಗೇಜ್‌ಮೆಂಟ್‌ಗಾಗಿ ದ್ವೇಷ ಹಬ್ಬಿಸುವುದನ್ನು ನಾನು ನೋಡುತ್ತಿದ್ದೇನೆ. ಈ ಎಲ್ಲ ಬೆಳವಣಿಗೆಗಳು ನನಗೆ ನೋವು ನೀಡಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ನಾನು ತಾಳ್ಮೆ ಹಾಗೂ ಮೌನದಿಂದ ಇದ್ದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಈ ರೀತಿಯ ಅನ್ಯಾಯ ಹಾಗೂ ಟೀಕೆಗಳು ಬರುತ್ತವೆ ಎಂದು ನಂಬಿಕೊಂಡಿರುವೆ. ನಾನು ಪ್ರಾಮಾಣಿಕವಾಗಿದ್ದು, ಸುತ್ತಲೂ ಇರುವವರು ಸಂತೋಷದಿಂದ ಇದ್ದರೆ ಎಲ್ಲವೂ ಸರಿಯಾಗುತ್ತಿದೆ ಎಂದು ಭಾವಿಸಿಕೊಂಡಿದ್ದೆ. ಆದರೆ ಕಳೆದ 24 ಗಂಟೆಗಳಲ್ಲಿ ನಡೆದಿರುವ ಬೆಳವಣಿಗೆ ಮಿತಿ ಮೀರಿದೆ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
8 ವರ್ಷಗಳ ಹಿಂದಿನ ಹಳೆಯದಾದ ಖಾಸಗಿ ಸಂಭಾಷಣೆಯ ಆಡಿಯೋವನ್ನು ಸಂಬಂಧಪಟ್ಟವರ ಅರಿವಿಗೆ ತರದೆಯೋ ಅಥವಾ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ಬಿಡುಗಡೆ ಮಾಡಲಾಗಿದೆ. ಆ ಆಡಿಯೋದ ಒಂದು ಸಣ್ಣ ತುಣುಕನ್ನು ಉದ್ದೇಶಪೂರ್ವಕವಾಗಿ ಸಂದರ್ಭಕ್ಕೆ ಅನುಗಣವಾಗಿ ಉಪಯೋಗಿಸಿಕೊಳ್ಳಬೇಕಿತ್ತು. ಅದರ ಬದಲಿಗೆ ಇನ್ನೊಂದು ವಿವಾದವನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ನನ್ನ ಖಾಸಗಿ ಜೀವನದ ಇತ್ತೀಚಿನ ಬೆಳವಣಿಗೆಯ ಜೊತೆಯಲ್ಲೇ ಇದೆಲ್ಲ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜನರು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಲ್ಲರೇ..? ಇದೇ ರೀತಿಯಾಗಿ ನನ್ನ ಕುಟುಂಬವನ್ನು ಹಾಗೂ ಈ ವಿಚಾರಕ್ಕೆ ಸಂಬಂಧವಿಲ್ಲದವರನ್ನು ಅನಗತ್ಯವಾಗಿ ಮುಜುಗರಕ್ಕೆ ತಳ್ಳಿದ್ದಾರೆ. ಇದು ಖಾಸಗಿ ಬದುಕಿನ, ಗೌಪ್ಯತೆಯನ್ನು ಉಲ್ಲಂಘಿಸಿರುವ ವಿಚಾರವಾಗಿದೆ. ಇದೊಂದು ದಾರಿ ತಪ್ಪಿಸುವ, ಮಾನಹಾನಿಕರ ಸುಳ್ಳುಗಳ ಪ್ರಚಾರದ ವಿಷಯವಾಗಿದೆ ಎಂದು ಕಿಡಿ ಕಾರಿದ್ದಾರೆ.
ನಮ್ಮ ಜೀವನದಲ್ಲಿ ಮುಂದೆ ಸಾಗುತ್ತ, ಬೆಳೆಯುತ್ತ, ಅರ್ಥಪೂರ್ಣ ಕೆಲಸಗಳೊಂದಿಗೆ ಹೊರಟರೆ, ಧನಾತ್ಮಕ ವಿಚಾರಗಳನ್ನು ಪಸರಿಸುತ್ತಿರುವ ಈ ಸಮಯದಲ್ಲಿ, ಕೆಲವರು ಮತ್ತೊಬ್ಬರ ಘನತೆ, ಶಾಂತಿಯ ವಿಚಾರದಲ್ಲಿ ದ್ವೇಷ ಹಾಗೂ ವಿವಾದಗಳನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ನನ್ನ ಮೇಲೆ ದಾಳಿ ನಡೆದರೂ ನಾನು ಮೌನವಾಗಿದ್ದೆ. ಆದರೆ ಇಂದು ಬೇರೆಯವರನ್ನು ಈ ವಿಚಾರದಲ್ಲಿ ಎಳೆದು ತಂದಾಗ, ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಇಲ್ಲಿಯವರೆಗೆ ನನಗೆ ತುಂಬಾ ಜನ ಪ್ರೀತಿ ತೋರಿದ್ದೀರಿ, ಬೆಂಬಲಿಸಿದ್ದೀರಿ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ. ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ನಿಸುತ್ತಿದೆ. ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತನಾಡೋ ಜನ, ಒಂದ್ ಅರ್ಥ ಮಾಡ್ಕೊಬೇಕು – ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ಗಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ ಎಂದು ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸುದೀರ್ಘ ಪ್ರತಿಕ್ರಿಯೆ ನೀಡಿರುವುದು ಕುತೂಹಲ ಮೂಡಿಸಿದೆ.





ನಟಿ ರಶ್ಮೀಕಾ ಮಂದಣ್ಣ ಕಳೆದ ಕೆಲ ದಿನಗಳ ಹಿಂದಷ್ಟೇ ನಟ ವಿಜಯ್ ದೇವರಕೊಂಡ ಕೈ ಹಿದಿದು ಅದ್ಧೂರಿ ವಿವಾಹ ಮಾಡಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ರಶ್ಮಿಕಾ ತಾಯಿಯದ್ದು ಎನ್ನಲಾಗಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಇದರ ವಿರುದ್ಧ ನಟಿ ಈಗ ಮೌನ ಮುರಿದಿದ್ದಾರೆ.












