6:26 PM Friday4 - October 2024
ಬ್ರೇಕಿಂಗ್ ನ್ಯೂಸ್
ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ ಶ್ರೀನಿವಾಸಪುರ ವಿದ್ಯಾರ್ಥಿಗಳ ವಸತಿ ನಿಲಯ ದುರವಸ್ಥೆ: ಉಪ ಲೋಕಾಯುಕ್ತರು ಗರಂ; ಸರಕಾರಿ ಆಸ್ಪತ್ರೆಗೂ… ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊದಲ ಪದವಿ ಪ್ರದಾನ; 23 ಮಂದಿ ವಿದ್ಯಾರ್ಥಿಗಳಿಗೆ… ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾ‌ಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ

ಇತ್ತೀಚಿನ ಸುದ್ದಿ

ಎಪ್ಪತ್ತೈದರ ಚಿರಯುವಕ ಅನಂತ್‌ನಾಗ್

03/09/2023, 13:03

ಬರಹ :ಶಶಿರಾಜ್ ರಾವ್ ಕಾವೂರು

ಆಕಾಶದಲ್ಲಿ ಹಾರುವ ಹೆಲಿಕಾಪ್ಟರ್‌ನಲ್ಲಿ, ತನ್ನ ನಯವಾದ ಹಾರುವ ಕೂದಲುಗಳನ್ನು ಮರೆಮಾಚುವ ಹೆಲ್ಮೆಟ್ ಹಾಕಿಕೊಂಡು, ಸುಂದರ ನಗು ಬೀರುತ್ತಾ, ಚೂಪು ಕಣ್ಣುಗಳಲ್ಲಿ ಪ್ರೇಯಸಿಯನ್ನು ಅರಸುತ್ತಾ, ‘ಎಲ್ಲಿರುವೇ ಮನವ ಕಾಡುವ ರೂಪಸಿಯೆ..’ ಎಂದು ಎಸ್.ಪಿ.ಬಿ. ಸರ್‌ನ ಕಂಠಕ್ಕೆ ಅಭಿನಯಿಸುತ್ತಾ ಹಾಡುವ ನಾಯಕನನ್ನು ಆ ಕಾಲದಲ್ಲಿ ಅದೆಷ್ಟು ಜನ ಕನ್ಯೆಯರು ಆರಾಧಿಸುತ್ತಿದ್ದರೋ ಏನೋ..!! ಆ ಕಾಲದ ಹುಡುಗಿಯರನ್ನು (ಅಂದರೆ ಈಗಿನ ಆಂಟಿ, ಅಜ್ಜಿಯರನ್ನು) ಕೇಳಿದರೆ ಇಂದಿಗೂ ಅನಂತ್‌ನಾಗ್ ಬಗ್ಗೆ ಅದೇ ಅಭಿಮಾನ ಅವರೆಲ್ಲರ ನೆನಪಿನ ಬುತ್ತಿಯಲ್ಲಿ ಹಾಗೇ ಇರುವುದು ಕಾಣಿಸುತ್ತದೆ.

ಒಬ್ಬ ನಟನನ್ನು ಮನೆಯ ಸದಸ್ಯನಂತೆ ಪ್ರೀತಿಸುವ ಅಭಿಮಾನ ಎಲ್ಲಾ ನಟರ ಭಾಗ್ಯದಲ್ಲಿ ಇರುವುದಿಲ್ಲ. ಅಣ್ಣಾವ್ರು, ಶಂಕರ್‌ನಾಗ್, ವಿಷ್ಣು ದಾದ ಮುಂತಾದ ನಟರಿಗೆ ಭರಪೂರ ಸಿಕ್ಕಿದ್ದ ತುಂಬು ಪ್ರೀತಿ, ಅಭಿಮಾನ ಅನಂತ್‌ನಾಗ್ ರವರಿಗೂ ದಕ್ಕಿದ್ದು ಅವರ ಸಹಜ ನಟನೆ, ಸಾಮಾನ್ಯ ನಡೆನುಡಿ ಮತ್ತು ಅಭಿನಯ ಚಾತುರ್ಯದಿಂದ. ಪೌರಾಣಿಕ ಪಾತ್ರವಾದ ನಾರದರಿಂದ ಹಿಡಿದು ರೋಲ್‌ಕಾಲ್ ಮಾಡುವ ರೌಡಿಯ ತನಕ, ಯಾವ ಪಾತ್ರಕ್ಕೂ ತಮ್ಮನ್ನು ತಾವು ಒಗ್ಗಿಸಿಕೊಳ್ಳುತ್ತಿದ್ದ ಅನಂತ್‌ನಾಗ್ ಓರ್ವ ಪರಿಪೂರ್ಣ ನಟನಾಗಿ ತಯಾರಾದದ್ದು ರಂಗಭೂಮಿ ನಾಟಕಗಳಿಂದ ಮತ್ತು ಶಾಮ್ ಬೆನಗಲ್ ಗರಡಿಯಿಂದ.

ಹುಟ್ಟು- ಬಾಲ್ಯ:
4-9-1948 ರಲ್ಲಿ ಸದಾನಂದ ನಗರಕಟ್ಟೆ ಮತ್ತು ಆನಂದಿ ದಂಪತಿಗಳಿಗೆ ಹುಟ್ಟಿದ ಮುದ್ದಾದ ಮಗು ಅನಂತ್. ಹುಟ್ಟಿದ್ದು ಮುಂಬೈಯಲ್ಲಾದರೂ ತಂದೆಯವರ ಊರಾದ ಉತ್ತರಕನ್ನಡದ ನಗರಕಟ್ಟೆಯ ಕೊನೆಯ ಅಕ್ಷರಗಳೇ ಅನಂತ್ ಹೆಸರಿನ ಜೊತೆ ನಾಗ್ ಸೇರಲು ಕಾರಣವಾಯಿತು.

ಭಟ್ಕಳದ ಶಿರಾಲಿ ಮತ್ತು ಹೊನ್ನಾವರದಲ್ಲಿ ವಿದ್ಯಾಭ್ಯಾಸವನ್ನು ಮಾಡಿದ ಅನಂತ್, ಕಾಸರಗೋಡು ಹತ್ತಿರದ ಆನಂದಾಶ್ರಮದ ವಾತಾವರಣದಲ್ಲಿ ಬಾಲ್ಯವನ್ನು ಕಳೆದರು. ನಂತರ ಮುಂಬೈಗೆ ಹೋದರು. ಅತ್ಯಂತ ಕಷ್ಟದ ದಿನಗಳನ್ನು ಅಲ್ಲಿ ಕಳೆದ ಅನಂತ್, ಮುಂಬೈನಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಭಾಷಾ ಬದಲಾವಣೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸಿದರು. ಊರಲ್ಲಿ ಓದುವುದರಲ್ಲಿ ಮೊದಲಿಗರಾಗಿದ್ದ ಅನಂತ್ ಮುಂಬೈನ ಶಾಲೆಯಲ್ಲಿ, ಹತ್ತನೆ ಕ್ಲಾಸ್‌ನಲ್ಲಿ ಕೊನೆಯ ಸ್ಥಾನ ಗಳಿಸಿದ ಬೇಸರದೊಂದಿಗೆ ಅತಂತ್ರ ಸ್ಥಿತಿಗೆ ತಲುಪಿದ್ದರು.

ಆ ಸಮಯದಲ್ಲಿ ವಿಶ್ವಯುದ್ಧದ ಪರಿಣಾಮ ದೇಶದೆಲ್ಲೆಡೆ ದೇಶಪ್ರೇಮದ ಅಲೆ ಎದ್ದಿತ್ತು. ಅನಂತ್‌ನಾಗ್ ಕೂಡ ಭಾರತೀಯ ವಾಯುಪಡೆ ಸೇರಬೇಕೆಂದು ಬಯಸಿ ಹೋದರೆ ಅಲ್ಲೂ ನಿರಾಸೆ. ನಿಮ್ಮ ಎಡಗಣ್ಣಿಗೆ ದೃಷ್ಟಿಸಮಸ್ಯೆ ಇದೆ. ನೀವು ಆರ್ಮಿಗೆ ಟ್ರೈ ಮಾಡಿ’ ಅಂತ ಕಳುಹಿದರು. ಭಾರತೀಯ ಭೂಸೇನೆ ಸೇರಲು ಉತ್ಸಾಹದಿಂದ ಹೋದರೆ ತೂಕ ಸಾಲದು ಅಂತ ಅಲ್ಲೂ ಅವಕಾಶ ವಂಚಿತರಾದರು.

ರಂಗಭೂಮಿಗೆ ಎಂಟ್ರಿ…
ಈ ನಡುವೆ ದೊಡ್ಡ ಅಕ್ಕನ ಮದುವೆ ನಿಗದಿಯಾಗಿತ್ತು. ಅದರ ಆಹ್ವಾನ ಪತ್ರಿಕೆಗಳನ್ನು ಸಾರಸ್ವತ ಬಂಧುಗಳ ಮನೆಗೆ ಹಂಚುವ ಜವಾಬ್ದಾರಿಯನ್ನು ಅಪ್ಪ, ಅನಂತ್‌ಗೆ ವಹಿಸಿದರು. ಅದನ್ನ ಹಾಗೆ ಹಂಚುತ್ತಾ ಇರುವಾಗ ಪ್ರಭಾಕರ ಮುದ್ದೂರು ಎನ್ನುವವರೊಬ್ಬರು ಅನಂತ್‌ನ ಗೌರವರ್ಣ, ಕೆಂಚು ಕೂದಲುಗಳನ್ನು ನೋಡಿ ‘ಕೊಂಕಣಿ ನಾಟಕದಲ್ಲಿ ಪಾತ್ರ ಮಾಡ್ತೀಯಾ?’ ಅಂತ ಕೇಳಿದ್ರು. ಅದಕ್ಕೆ ಒಪ್ಪಿದ ಅನಂತ್ ಮೊದಲ ಬಾರಿಗೆ ರಂಗಭೂಮಿಗೆ ಕಾಲಿಟ್ಟು ಬಣ್ಣ ಹಚ್ಚಿದರು. ನಂತರ ವೆಂಕಟ ರಾವ್ ತಲಗೇರಿ, ಆರ್‌.ಡಿ.ಕಾಮತ್, ಕೆ.ಕೆ.ಸುವರ್ಣ ಮುಂತಾದವರ ಜೊತೆ ನಾಟಕಗಳನ್ನು ಮಾಡುತ್ತಾ ಮುಂದವರಿದರು. ಅಮೂಲ್ ಪಾಲೇಕರ್ ಜೊತೆ ‘ಆಧೇ ಅಧೂರೆ’ ನಾಟಕಕ್ಕೂ ಜತೆಯಾಗಿ ಬಣ್ಣ ಹಚ್ಚಿದರು.

ನಂತರ ತಮ್ಮದೇ ತಂಡ ಕಟ್ಟಿಕೊಂಡ ಅನಂತ್ ಗೆಳೆಯರಾದ ಅಶೋಕ್, ಆನಂದ್ ಜೊತೆ ಸೇರಿ ಹಲವಾರು ನಾಟಕಗಳನ್ನು ತಯಾರಿಸಿ ಪ್ರದರ್ಶನ ನೀಡಿದೆರು. ತಂಡ ಕಟ್ಟಿಕೊಂಡು ನಾಟಕಗಳನ್ನು ಮಾಡುತ್ತಿದ್ಸ ಅನಂತ್‌ಗೆ ಅಪ್ಪ ಹೇಳಿದ್ರು- ಇನ್ನು ಏನು ಮಾಡ್ತಿ ? ಕಲೀಬೇಕೂಂತ ಮನಸಿದ್ರೆ ದುಡಿದು ಸಂಪಾದನೆ ಮಾಡಿ ಕಲಿ. ಎಲ್ಲಾದ್ರೂ ಕೆಲಸಕ್ಕೆ ಸೇರ್ಕೊ’. ಹಾಗೇ ಪ್ರಯತ್ನ ಪಟ್ಟಾಗ ಯೂನಿಯನ್ ಬ್ಯಾಂಕ್‌ನಲ್ಲಿ ಸಣ್ಣ ಕೆಲಸ ಸಿಕ್ಕಿತು. ನಡುವೆ ನಾಟಕಗಳ ನಿರ್ದೇಶನ, ನಟನೆ ಸಾಗಿಯೇ ಇತ್ತು. ಅದರೊಂದಿಗೆ ತಮ್ಮ ಶಂಕರ್‌ನಾಗ್‌ನ ಆರೈಕೆ ಕೂಡ ಅನಂತ್ ಹೆಗಲಿಗೆ ಬಿತ್ತು. ಶಂಕರ್ ನಾಗ್ ಕೂಡ ಮುಂಬೈಗೆ ಬಂದು ಅನಂತ್ ಜೊತೆ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು.

ಚಿತ್ರರಂಗಕ್ಕೆ ಕಾಲಿಟ್ಟ ಭಲೇಜೋಡಿ..
ಈ ನಾಟಕಗಳಲ್ಲಿನ ಅಭಿನಯ ನೋಡಿದ ಗಿರೀಶ್ ಕಾರ್ನಾಡ್, ಜಿ.ವಿ.ಅಯ್ಯರ್ ಮತ್ತು ವೈ.ಎನ್.ಕೃಷ್ಣಮೂರ್ತಿ ಸಂಕಲ್ಪ ಎನ್ನುವ ಚಿತ್ರಕ್ಕೆ ಕರೆದರು. 1973 ರಲ್ಲಿ ಮೂಡಿಬಂದ ಪಿ.ವಿ.ನಂಜರಾಜ್ ಅರಸ್‌ರವರ ಸಂಕಲ್ಪ, ಕನ್ನಡ ಚಿತ್ರರಂಗದಲ್ಲಿ ಬಂದ ಹೊಸ ಅಲೆಯ ಸಿನೆಮಾಗಳಲ್ಲಿ ಎಲ್ಲರ ಗಮನಸೆಳೆದ ಸಿನೆಮ. ಅದಾಗಲೇ ಅನಂತ್‌ನಾಗ್‌ರಿಗೆ ಹಿಂದಿಯ ಸತ್ಯದೇವ್ ದುಬೆ ಮೂಲಕ ಶಾಮ್ ಬೆನಗಲ್ ಪರಿಚಯ ಆಯಿತು. ನಂತರ ಸೃಷ್ಟಿಯಾದದ್ದು ಇತಿಹಾಸ..

ಶಾಮ್ ಬೆನಗಲ್ ಎಂಬ ಅದ್ಭುತ ಪ್ರತಿಭೆಯ ನಿರ್ದೇಶಕರು ತಮ್ಮ ಅಂಕುರ್ ಸಿನೆಮಾದ ಮೂಲಕ ಭಾರತೀಯ ಚಿತ್ರರಂಗಕ್ಕೆ ಅನಂತ್‌ನಾಗ್‌ರವರನ್ನು ಪರಿಚಯಿಸಿದರು.
ಅಂಕುರ್ ನಂತರ ನಿಶಾಂತ್, ಮಂಥನ್, ಗೆಹರಾಯಿ, ಮಂಗಲ್‌ಸೂತ್ರ್, ರಾತ್, ಭೂಮಿಕಾ, ಕೊಂಡೂರ, ಕಲಿಯುಗ್ ಮುಂತಾದ ಸಿನೆಮಾಗಳು ಬೆನ್ನು ಬೆನ್ನು ಒಂದಕ್ಕಿಂತ ಒಂದು ಮಿಗಿಲಾಗಿದೆ ಎಂಬ ಪ್ರಸಿದ್ಧಿಗೆ ಬಂದು ಓರ್ವ ಪರಿಪೂರ್ಣ ನಟನನ್ನು ಬೆಳ್ಳಿತೆರೆಗೆ ಖಾಯಂ ಮಾಡಿಬಿಟ್ಟವು.

ಇಲ್ಲಿ ಕನ್ನಡ ಚಿತ್ರರಂಗದಲ್ಲಿ 1975 ರಲ್ಲಿ ಜಿ.ವಿ.ಅಯ್ಯರ್ ಜೊತೆ ಹಂಸಗೀತೆ ಎಂಬ ಸಿನೆಮಾ ಮಾಡಿದ ಅನಂತ್ ಕಮರ್ಷಿಯಲ್ ಸಿನೆಮಾಗಳನ್ನೂ ಮಾಡಿ ಜನಮನಸನ್ನು ಗೆದ್ದರು. 1976 ರಲ್ಲಿ ದೊರೈ ಭಗವಾನ್ ನಿರ್ದೇಶನದ ‘ಬಯಲು ದಾರಿ’ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಪಡೆಯುವುದರೊಂದಿಗೆ ಅನಂತ್‌ನಾಗ್ ಜನಪ್ರಿಯ ನಟರ ಸಾಲಲ್ಲಿ ಎದ್ದು ನಿಂತರು. ನಂತರ ದೇವರಕಣ್ಣು, ಕನ್ನೇಶ್ವರ ರಾಮ, ಬರ, ಅವಸ್ಥೆ, ಮಿಂಚಿನ ಓಟ, ಉದ್ಭವ, ಅನುರೂಪ, ಮಾತು ತಪ್ಪದ ಮಗ, ಕುದುರೆ ಮುಖ, ಪ್ರೇಮಾಯಣ, ಮಧುರ ಸಂಗಮ, ಮುತ್ತು ಒಂದು ಮುತ್ತು, ಆಕ್ಸಿಡೆಂಟ್, ಬೆಳದಿಂಗಳ ಬಾಲೆ, ಅರುಣರಾಗ, ಅನುಪಮ, ಮುಳ್ಳಿನ ಗುಲಾಬಿ, ಹೊಸ ನೀರು, ಬಾಡದ ಹೂ, ಜನ್ಮ ಜನ್ಮದ ಅನುಬಂಧ, ಅಂದದ ಅರಮನೆ, ಶ್ರೀಮಾನ್, ಮರೆಯದ ಹಾಡು, ಪ್ರೇಮಜ್ವಾಲೆ, ಒಂದು ಹೆಣ್ಣು ಆರು ಕಣ್ಣು, ನಾರದ ವಿಜಯ ಮುಂತಾದ ಹಿಟ್ ಸಿನೆಮಾಗಳಿಂದ ಆರಂಭಗೊಂಡ ಅವರ ಕಮರ್ಷಿಯಲ್ ಸಕ್ಸೆಸ್ ಇತ್ತೀಚಿನ ಕಾಸರಗೋಡು ಹಿ.ಪ್ರಾ.ಶಾಲೆ ಚಿತ್ರದವರೆಗೂ ಅವರ ಜೊತೆಗೇ ಸಾಗಿ ಬಂದಿದೆ.

1979 ರಲ್ಲಿ ನಾ ನಿನ್ನ ಬಿಡಲಾರೆ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಯಾಗಿ ಅನಂತ್‌ನಾಗ್‌ ಮತ್ತು ಲಕ್ಷ್ಮಿ ಜನಮಾನಸದಲ್ಲಿ ಬೆಳಗಿದ್ದು ಇವತ್ತಿಗೂ ಮಧುರ ನೆನಪು. ಆ ನಂತರ ಈ ಜೋಡಿಯ ತಾರಾಗಣದಲ್ಲಿ- ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು, ಚಂದನದ ಗೊಂಬೆ, ನೋಡಿ ಸ್ವಾಮಿ ನಾವಿರೋದು ಹೀಗೆ, ಧೈರ್ಯ ಲಕ್ಷ್ಮೀ, ಬಿಡುಗಡೆಯ ಬೇಡಿ, ಮಕ್ಕಳಿರಲವ್ವ ಮನೆತುಂಬ ಹೀಗೆ 25 ಕ್ಕೂ ಮಿಕ್ಕಿದ ಸಿನೆಮಾಗಳು ಚಿತ್ರರಸಿಕರ ಮನಸೂರೆಗೊಂಡಿದ್ದವು.

1982 ರಲ್ಲಿ ‘ಹಾಸ್ಯರತ್ನ ರಾಮಕೃಷ್ಣ ಚಿತ್ರದಲ್ಲಿ ನಟಿಸುವ ಮೂಲಕ- ಪ್ರೀತಿ, ಪ್ರೇಮ, ಪ್ರಣಯದಿಂದ ಹಾಸ್ಯದ ಕಡೆ ಒಲವು ತೋರಿಸಿದ ಅನಂತ್‌ನಾಗ್‌ರವರು ಕನ್ನಡದ ಚಿತ್ರಾಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೆ ಒದಗಿಸಿದರು. ನಂತರ ಚಿತ್ರರಸಿಕರು ತೃಪ್ತಿಯಾಗುವಷ್ಟು ನಕ್ಕು ನಗಿಸಿದ ಅನಂತ್‌ನಾಗ್ ಸಾಲು ಸಾಲಲ್ಲಿ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಮಿನುಗಿದರು. ನೋಡಿ ಸ್ವಾಮಿ ನಾವಿರೋದು ಹೀಗೆ, ಸುಖ ಸಂಸಾರಕ್ಕೆ 12 ಸೂತ್ರಗಳು, ಪರಮೇಶಿ ಪ್ರೇಮ ಪ್ರಸಂಗ, ಹೆಂಡ್ತಿ ಬೇಕು ಹೆಂಡ್ತಿ, ಹೆಂಡ್ತಿಗೇಳ್ಬೇಡಿ ಮುಂತಾದ ಚಿತ್ರಗಳು ಜನರನ್ನು ರಂಜಿಸಿದವು.

ತೊಂಬತ್ತರ ದಶಕದಲ್ಲಿ ಅನಂತ್‌ನಾಗ್ ಪೂರ್ಣಪ್ರಮಾಣದ ಹಾಸ್ಯ ಚಿತ್ರಗಳ ಮೂಲಕ ಮನೆಮಾತಾದರು. ನಿರ್ದೇಶಕರು, ಕತೆಗಾರರು ಅನಂತ್‌ನಾಗ್‌ರವರಿಗೆಂದೇ ಹಾಸ್ಯ ಪಾತ್ರಗಳನ್ನು ಬರೆಯಲಾರಂಭಿಸಿದರು. ಗೋಲ್‌ಮಾಲ್ ರಾಧಾಕೃಷ್ಣ ದ ಮೂಲಕ ಆರಂಭವಾದ ಈ ನಗೆಗಡಲಿನ ಪಯಣ- ಚಾಲೆಂಜ್ ಗೋಪಾಲಕೃಷ್ಣ, ಉದ್ಭವ, ಗಣೇಶನ ಮದುವೆ, ಮನೇಲಿ ಇಲಿ ಬೀದಿಲಿ ಹುಲಿ, ರೋಲ್‌ಕಾಲ್ ರಾಮಕೃಷ್ಣ, ಗೌರಿ ಗಣೇಶ, ಹೊಸಮನೆ ಅಳಿಯ, ಉಂಡೂ ಹೋದ, ಕೊಂಡೂ ಹೋದ, ಗಣೇಶ ಸುಬ್ರಮಣ್ಯ, ಒಂದು ಸಿನೆಮಾ ಕತೆ, ಯಾರಿಗೂ ಹೇಳ್ಬೇಡಿ, ಸಮಯಕ್ಕೊಂದು ಸುಳ್ಳು, ಗಣೇಶ ಐ ಲವ್ ಯೂ, ನಾನೇನೂ ಮಾಡಿಲ್ಲ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ತನಕವೂ ಸಾಗಿ ಹಾಸ್ಯದ ಹೊನಲನ್ನೆ ಹರಿಸಿದ್ದವು.

ಈ ನಡುವೆ ಅನ್ಯ ಭಾಷೆಯ ಸಿನೆಮಾಗಳಲ್ಲೂ ಅಭಿನಯಿಸಿದ ಅನಂತ್‌ನಾಗ್‌ ಮಲಯಾಳಂ‌ನ ಸ್ವಾತಿ ತಿರುನಾಳ್, ತೆಲುಗಿನ ಅನುಗ್ರಹಂ, ಇಂಗ್ಲೀಷಿನ ಸ್ಟಂಬಲ್ ಮುಂತಾದುವುದರಲ್ಲಿ ಬಣ್ಣಹಚ್ಚುವುದರ ಮೂಲಕ ಬಹುಭಾಷಾ ನಟ ಎನಿಸಿಕೊಂಡರು. ಕಿರುತೆರೆಗೂ ಪ್ರವೇಶ ಮಾಡುವ ಮೂಲಕ ಅನಂತ್‌ನಾಗ್ ಪ್ರೀತಿ ಇಲ್ಲದ ಮೇಲೆ, ಗರ್ವ, ದುರ್ಗಾ ಮುಂತಾದುವುದರಲ್ಲಿ ಅಭಿನಯಿಸಿದರು. ಶಂಕರ್‌ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಮಿಠಾಯಿ ಅಂಗಡಿ ಮಾಲಕನ ಪಾತ್ರದಲ್ಲಿ ಅನಂತ್ ಅಭಿನಯ ಮನೋಜ್ಞವಾಗಿತ್ತು. ರಾಜಕೀಯದಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅನಂತ್‌ನಾಗ್ 1994 ರಲ್ಲಿ ಅಸ್ತಿತ್ವದಲ್ಲಿ ಇದ್ದ ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿಯೂ ಸೇವೆ ಸಲ್ಲಿದ್ದರು.

ಪ್ರಶಸ್ತಿಗಳು..
ಮಿಂವಚಿನ ಓಟ ಚಿತ್ರಕ್ಕೆ ಅತ್ಯುತ್ತಮ ನಟನೆಗಾಗಿ ಮೊದಲ ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ಅನಂತ್‌ನಾಗ್ ನಂತರ ತಮ್ಮ ಸಮರ್ಥ ಮತ್ತು ಸಹಜ ಅಭಿನಯಕ್ಕೆ ನಿರಂತರವಾಗಿ ಹತ್ತಾರು -ರಾಜ್ಯ ಮತ್ತು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದರು. ‘ನನ್ನ ತಮ್ಮ ಶಂಕರ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವನ್ನೂ ಪಡೆದ ಅವರಿಗೆ 2007 ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯೂ ಒಲಿದಿದೆ.

ಎಪ್ಪರತ್ತೈದರ ಹೊಸ್ತಿಲಲ್ಲಿ..
ನಟಿ ಗಾಯತ್ರಿಯನ್ನು ವಿವಾಹವಾಗಿ ಅದಿತಿ ನಾಗ್ ಎಂಬ ಮಗಳನ್ನೂ ಪಡೆದು ಸುಖಸಂಸಾರ ನಡೆಸುತ್ತಿದ್ದಾರೆ. ಅನಂತ್‌ನಾಗ್ ತಮ್ಮ ಎಪ್ಪತ್ತೈದನೆ ವಯಸ್ಸಿನ ಹೊಸ್ತಿಲಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದು ಇತಿಹಾಸದಲ್ಲಿ ಅಚ್ಚಳಿಯದ ಪುಟಗಳಾಗಿವೆ. ಏಳುಬೀಳುಗಳ ನಡುವೆ ಅನಂತ್ ಸಾಗಿದ್ದೇ ದಾರಿ. ಎಲ್ಲೂ ಕರಾರುವಾಕ್ಕಾಗಿ ಯೋಚನೆಗಳನ್ನು ಯೋಜನೆಗಳನ್ನು ಹಾಕಿಕೊಳ್ಳದೆ ವಿಧಿ ನಡೆಸಿದಂತೆ ನಡೆದ ನಟ ಅನಂತ್‌ನಾಗ್.

ಅನಂತ್ ಅಪಾರ ಆಶಾವಾದಿ. ವೈಫಲ್ಯಗಳನ್ನೂ ಕೂಡ ಧೈರ್ಯದಿಂದ ಎದುರಿಸಬೇಕು ಅನ್ನುವುದು ಅವರಿಗೆ ಅವರ ಹಿರಿಯರಿಂದ ಬಂದ ಪಾಠ. ಅನಂತ್‌ನಾಗ್ ರವರು ಬೆಳೆಸಿಕೊಂಡ ಜೀವನಪ್ರೀತಿ ಎಲ್ಲರಿಗೂ ಮಾದರಿ. ಅವರು ಪ್ರತಿಯೊಂದು ವಿಷಯದ ಬಗೆಗೂ ಮಗುವಿನಂತೆ ಆಸಕ್ತಿ ಬೆಳೆಸಿಕೊಂಡು ಕಲಿಯುತ್ತಿದ್ದರು. ಅದೇ ಕಾರಣಕ್ಕೆ ಅವರಿಗೆ ಹಲವಾರು ವಿಷಯಗಳ ಬಗ್ಗೆ ತಜ್ಞತೆ ಬಂದುಬಿಟ್ಟಿತ್ತು. ಅವರೊಂದಿಗೆ ಮಾತಿಗೆ ಕುಳಿತರೆ ಆಧ್ಯಾತ್ಮ, ಸಾಹಿತ್ಯ, ರಂಗಭೂಮಿ, ಕಲೆ, ರಾಜಕೀಯ, ಸಿನೆಮಾ, ಪಾರಮಾರ್ಥಿಕ, ಪ್ರಚಲಿತ ಹೀಗೆ ಯಾವ ವಿಷಯದಲ್ಲಾದರೂ ಸಲ್ಲಾಪ, ಆರೋಗ್ಯಕರ ಚರ್ಚೆ ನಡೆಸಬಹುದು. ಅದು ಅನಂತ್‌ನಾಗ್ ವೈಶಿಷ್ಟ್ಯ. ಓರ್ವ ಮಾದರಿ ನಟ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡ ಮಗು ಮನಸಿನ ವ್ಯಕ್ತಿತ್ವದ, ಅಭಿಮಾನಿಗಳ ಪ್ರೀತಿಯ ಅನಂತ್‌ನಾಗ್ ಎಪ್ಪತ್ತೈದು ವಸಂತಗಳನ್ನು ದಾಟುವ ಈ ಶುಭ ಸಂದರ್ಭದಲ್ಲಿ ಅವರಿಗೆ ಮಂಗಳೂರಿನ ಸಮಸ್ತ ಚಿತ್ರಪ್ರೇಮಿಗಳ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.

– ಶಶಿರಾಜ್ ರಾವ್ ಕಾವೂರು

ಇತ್ತೀಚಿನ ಸುದ್ದಿ

ಜಾಹೀರಾತು