ಇತ್ತೀಚಿನ ಸುದ್ದಿ
Vyasashrama | ಹರಿದ್ವಾರದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ದಿಗ್ವಿಜಯ ತಿರುಪತಿ ಲಡ್ಡು ಪ್ರಸಾದ ವಿತರಣೆ
14/04/2025, 16:19

ಮಂಗಳೂರು(reporterkarnataka.com): ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಪಾದುಕೆಯ ಉಪಸ್ಥಿತಿಯಲ್ಲಿ ಕಾಶೀ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ಸ್ವಾಮೀಜಿಯವರ ದಿಗ್ವಿಜಯ ಕಾರ್ಯಕ್ರಮ ಹರಿದ್ವಾರದಲ್ಲಿ ಭಾನುವಾರ ಜರುಗಿತು.
ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವದ ಅಂಗವಾಗಿ ಹರಿದ್ವಾರದ ವ್ಯಾಸಾಶ್ರಮದಲ್ಲಿ ಏಪ್ರಿಲ್ 8 ರಿಂದ 14ರ ತನಕ ವಿಶೇಷ ಕಾರ್ಯಕ್ರಮಗಳು ಜರಗುತ್ತಿದ್ದು, ಭಾನುವಾರ ಏಪ್ರಿಲ್ 13ರಂದು ಭಾರತದ ವಿವಿಧ ಭಾಗಗಳಿಂದ ಆಗಮಿಸಿದ 30 ಭಜನಾ ಮಂಡಳಿಗಳಿಂದ ಏಕಾಹ ಭಜನೆ, ವಿವಿಧ ಹೋಮ, ಹವನಾದಿಗಳು ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ತಿರುಪತಿಯಿಂದ ವಿಶೇಷವಾಗಿ ತರಿಸಲಾದ ಲಾಡು ಪ್ರಸಾದವನ್ನು ಹಂಚುವ ಕಾರ್ಯದ ಪೂರ್ವಭಾವಿ ಸಿದ್ಧತೆಯಲ್ಲಿ ಭಕ್ತರು ತೊಡಗಿಸಿಕೊಂಡಿದ್ದರು. ಮುಂಬೈಯ ಜಿಎಸ್ ಬಿ ಸೇವಾ ಮಂಡಲ, ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ, ದೆಹಲಿ ಸಮಾಜ, ಬೆಂಗಳೂರು ಸಮಾಜ ಸಹಿತ ಜಿಎಸ್ ಬಿ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ವೈದಿಕ ವೃಂದ ಕಾರ್ಯಕ್ರಮದ ಯಶಸ್ಸಿಗಾಗಿ ತೊಡಗಿಸಿಕೊಂಡಿದ್ದಾರೆ.
ಸೋಮವಾರ ಏಪ್ರಿಲ್ 14 ರಂದು ವ್ಯಾಸ ಮಂದಿರದಲ್ಲಿರುವ ಶ್ರೀ ವೇದವ್ಯಾಸ ದೇವರಿಗೆ ಮತ್ತು ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನಕ್ಕೆ ವಿಶೇಷ ಪವಮಾನ ಅಭಿಷೇಕ ನಡೆಯಿತು. ಅದರೊಂದಿಗೆ ವೃಂದಾವನ ಹಾಗೂ ಪಾದುಕೆಗೆ ಸ್ವರ್ಣ ಪುಷ್ಪಾರ್ಚನೆಯೂ ಜರುಗಿತು. ಸಂಜೆ ಶ್ರೀಗಳಿಂದ ಆರ್ಶೀವಚನವೂ ನಡೆಯಲಿದೆ.