ಇತ್ತೀಚಿನ ಸುದ್ದಿ
ಉಪ ರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅಭೂತಪೂರ್ವ ಜಯ; ಪ್ರಧಾನಿ ಸಹಿತ ಗಣ್ಯರ ಅಭಿನಂದನೆ
09/09/2025, 21:04

ನವದೆಹಲಿ(reporterkarnataka.com): ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭೂತಪೂರ್ವ ವಿಜಯ ಸಾಧಿಸಿದ್ದಾರೆ.
ರಾಧಾಕೃಷ್ಣನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ,ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಇಂದು ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲದೊಂದಿಗೆ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಹಾರ್ದಿಕ ಅಭಿನಂದನೆಗಳು. ರಾಷ್ಟ್ರಕ್ಕೆ ದಶಕಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಅನುಭವಿ ನಾಯಕರೂ ಆಗಿರುವ ಶ್ರೀಯುತರ ಶ್ರೀಮಂತ ಸಂಸದೀಯ ಅನುಭವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಕುರಿತ ದೃಢವಾದ ಬದ್ಧತೆಯು ರಾಜ್ಯಸಭೆಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಉತ್ತಮಪಡಿಸುತ್ತದೆ, ನಮ್ಮ ಹೆಮ್ಮೆಯ ಪ್ರಜಾಪ್ರಭುತ್ವದ ಚರ್ಚೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ರಾಷ್ಟ್ರವು ಪರಿವರ್ತನಾತ್ಮಕ ಪ್ರಗತಿಗೆ ಸಾಕ್ಷಿಯಾಗುತ್ತಲೇ ಇದೆ ಮತ್ತು ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಅವರ ಪಾತ್ರವು ನಮ್ಮ ಶ್ರೇಷ್ಠ ಸಂಸದೀಯ ಪ್ರಜಾಪ್ರಭುತ್ವದ ಚೈತನ್ಯವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.