ಇತ್ತೀಚಿನ ಸುದ್ದಿ
ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ
26/11/2021, 08:25
ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ವೇದಾವತಿ ನದಿ ಹಾಗೂ ಬ್ಯಾರೇಜ್‍ಗಳು ತುಂಬಿ ಹರಿಯುತ್ತಿದ್ದು, ನಗರ ಹಾಗೂ ಗಾಮೀಣ ಭಾಗದಿಂದ ಡ್ಯಾಂ ವೀಕ್ಷಣೆಗೆ ಬಂದವರಿಗೆ ನದಿಯಲ್ಲಿ ಈಜದಂತೆ ಹಾಗೂ ನೀರಿಗಿಳಿದು ಸೆಲ್ಫಿ ತೆಗೆಯದಂತೆ ಅಧಿಕಾರಿಗಳು ಮನವರಿಕೆ ಮಾಡುವಂತೆ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.
ಹಾಲಗೊಂಡನಹಳ್ಳಿ ಗ್ರಾಮದ ಸಮೀಪದ ವೇದಾವತಿ ನದಿಯ ಬ್ಯಾರೇಜ್ ಹಿನ್ನೀರಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಡ್ಯಾಂ ವೀಕ್ಷಣೆಗೆ ಬಂದವರಲ್ಲಿ ಇಬ್ಬರು ನೀರುಪಾಲಾದ ಸ್ಥಳಕ್ಕೆ ಭೇಟಿ ನೀಡಿದ ಅವರು ಮಾಧ್ಯಮ ಜತೆ ಮಾತನಾಡಿದರು.
ಚಳ್ಳಕೆರೆಯ ವಿರುಪಾಕ್ಷಪ್ಪ ಅವರು ಸಂಬಂಧಿಕರೊಂದಿಗೆ ಹಾಲಗೊಂಡನಹಳ್ಳಿ ಬ್ಯಾರೇಜ್ ನೀರು ವೀಕ್ಷಣೆ ಮಾಡಲು ಬಂದಿದ್ದಾಗ ಆಕಸ್ಮಿಕವಾಗಿ 8 ವರ್ಷದ ಬಾಲಕಿ ಮೋನಿಷ ನೀರಿಗೆ ಬಿದ್ದಿದ್ದಳು. ಅವಳ ರಕ್ಷಣೆ ಮಾಡಲು ವಿರುಪಾಕ್ಷಪ್ಪ ನೀರಿಗೆ ಹಾರಿದ್ದರು. ಆದರೆ ದುರಾದೃಷ್ಟವಶಾತ್ ಇಬ್ಬರೂ ನೀರುಪಾಲಾಗಿದ್ದರು.
ಮೃತದೇಹಗಳ ಶೋಧ ಕಾರ್ಯಾಚರಣೆ ವೀಕ್ಷಣೆ ಮಾಡಿದ ಶಾಸಕರು, ನದಿಯಲ್ಲಿ ಈಜಲು ಹಾಗೂ ನೀರಿಗಿಳಿದು ಸೆಲ್ಫಿ ತೆಗೆಯುವವರೂ ಮೇಲೆ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ನದಿಯಲ್ಲಿ ನೀರು ತುಂಬಾ ರಭಸವಾಗಿ ಹರಿಯುತ್ತಿರುವುದರಿಂದ ಹರಿಯುವ ನೀರಿನಲ್ಲಿ ಬಟ್ಟೆ ಹೊಗೆಯುವುದು, ಜಾನುವಾರುಗಳಿಗೆ ಮೈ ತೊಳೆಯುವುದು, ಬೈಕ್, ಎತ್ತಿನ ಗಾಡಿಗಳನ್ನು ನೀರಿನಲ್ಲಿ ಇಳಿಸುವುದು ಯಾರು ಮಾಡಬಾರದು ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
ಸ್ಥಳದಲ್ಲಿ ತಹಶೀಲ್ದಾರ್ ಎನ್. ರಘುಮೂರ್ತಿ, ಡಿವೈಎಸ್ಪಿ ಕೆ.ವಿ.ಶ್ರೀಧರ್, ಸಿಪಿಐ ಜೆ.ಎಸ್.ತಿಪ್ಪೇಸ್ವಾಮಿ, ಪಿಎಸ್‍ಐ ಸ್ವಾತಿ, ಎಎಸ್‍ಐ ರವೀಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಬಿ.ಜಯಣ್ಣ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ಸೂರನಹಳ್ಳಿ ಶ್ರೀನಿವಾಸ್ ಇತರರಿದ್ದರು.