ಇತ್ತೀಚಿನ ಸುದ್ದಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಡಲು ಸನ್ನದ್ಧರಾಗಬೇಕು: ಬಸವರಾಜ ಬೊಮ್ಮಾಯಿ
22/12/2024, 23:21
ಹುಬ್ಬಳ್ಳಿ(reporterkarnataka.com): ಬೆಳಗಾವಿಯಲ್ಲಿ ಕಾಟಾಚಾರದ ಅಧಿವೇಶನ ನಡೆಸಿದ್ದು, ಉತ್ತರ ಕರ್ನಾಟಕ ಈ ಸರ್ಕಾರದ ನಕ್ಷೆಯಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನು ಮೂಡಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಪಕ್ಷಾತೀತವಾಗಿ ಚರ್ಚಿಸಿ, ಸರ್ಕಾರದ ಗಮನ ಸೆಳೆದು ಹೋರಾಟ ಮಾಡಲು ಸನ್ನದ್ಧರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಯೋಜನೆಗಳು ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿ ಅದಕ್ಕೆ ಪರಿಹಾರ ಸಿಗುತ್ತದೆ ಎಂದು ಜನರು ನಿರೀಕ್ಷೆ ಮಾಡಿದ್ದರು. ಕಾಟಾಚಾರಕ್ಕೆ ಈ ಸರ್ಕಾರ ಬೆಳಗಾವಿ ಅಧಿವೇಶನ ನಡೆಸಿತು.
ರೈತ ಸಮುದಾಯ ಇರುವಂತಹ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಬೀಸುವುದರಿಂದ ಹಿಡಿದು. ಸದನದಲ್ಲಿ ನಡೆದ ಘಟನೆಗೆ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ಸಿಟಿ ರವಿಯವರನ್ನು ಬಂಧನ ಮಾಡಿ, ಅವರಿಗೆ ಹಿಂಸೆ ನೀಡಿ ರಾತಿಯೆಲ್ಲ ಸುತ್ತಾಡಿಸಿ. ಪೊಲೀಸರ ಲಾಠಿಯಿಂದ ಹಿಡಿದು ಪೊಲೀಸರ ಬಂಧನದವರೆಗೆ ಅಧಿವೇಶನ ನಡೆದಿದೆ. ಒಂದು ರೀತಿ ಪೊಲೀಸ್ ರಾಜ್ಯವಾಗಿದೆ. ಸಿಟಿ ರವಿಯವರ ಜೊತೆಗೆ ನಡೆದುಕೊಂಡ ರೀತಿಯನ್ನು ಪೊಲೀಸ್ ಅಧಿಕಾರಿಗಳ ವರ್ತನೆ, ಪ್ರಚೋದನೆ ಇಲ್ಲದೇ ಲಾಠಿ ಬೀಸಿರುವ ಕುರಿತು ತನಿಖೆಯಾಗಬೇಕು. ಹಿರಿಯ ಅಧಿಕಾರಿಗಳೇ ಕಾನ್ಸ್‌ಟೇಬಲ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಬಹಳ ದುರ್ದೈವ. ಕರ್ನಾಟಕದ ಪೊಲೀಸರಿಗೆ ದಕ್ಷ ಪೊಲೀಸರು ಎಂಬ ಹೆಸರಿದೆ. ಅದಕ್ಕೆ ಮಸಿ ಬಳಿಯುವ ರೀತಿಯಲ್ಲಿ ಈ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ, ಕೃಷ್ಣಾ ಮೇಲ್ದಂಡೆ, ಘಟಪ್ರಭಾ, ಮಲಪ್ರಭಾ, ಮಹದಾಯಿ ಸಮಸ್ಯೆಗಳ ಜೊತೆಗೆ ಉತ್ತರ ಕರ್ನಾಟಕದಲ್ಲಿ ಬರಬೇಕಿರುವ ಕೈಗಾರಿಕೆ, ರಸ್ತೆ, ರೈಲು ಮೂಲಸೌಕರ್ಯಗಳ ಕುರಿತು ಚರ್ಚಿಸಲು ಅವಕಾಶ ಕೊಡಲಿಲ್ಲ. ಹಲವಾರು ಶಾಸಕರು ಕಬ್ಬಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರೂ ಯಾವುದೇ ಸಚಿವರು ಗಂಭೀರವಾಗಿ ಪರಿಗಣಿಸಿ ಉತ್ತರ ಕೊಡಲಿಲ್ಲ. ನಿಜವಾಗಿಯೂ ನಾಚಿಗೇಡಿನ ಸಂಗತಿ, ಈ ಸರ್ಕಾರಕ್ಕೆ ಉತ್ತರ ಕರ್ನಾಟಕ ಅವರ ನಕ್ಷೆಯಲ್ಲಿ ಇದೆಯೋ ಇಲ್ಲವೋ ಎನ್ನುವ ಸಂಶಯ ಬರುತ್ತಿದೆ. ಈ ಸರ್ಕಾರ ಉತ್ತರದ ಜನರಿಗೆ ಪದೇ ಪದೇ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಎಲ್ಲ ಜನಪತಿನಿಧಿಗಳು ಸೇರಿ ಪಕ್ಷಾತೀತವಾಗಿ ಪತ್ಯೇಕ ಸಭೆ ಮಾಡಿ, ಈಗ ಆಗಬೇಕಿರವ ಯೋಜನೆಗಳು, ಸಮಸ್ಯೆಗಳ ಕುರಿತು ಚರ್ಚಿಸಿ ಸರ್ಕಾರಕ್ಕೆ ಒಂದು ಆಗ್ರಹ ಪೂರಕವಾಗಿ ಗಮನ ಸೆಳೆದು ಪಕ್ಷಾತೀತವಾಗಿ ಹೋರಾಟ ಮಾಡಲು ಸನ್ನದ್ದರಾಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು.
ಪ್ರಜಾಪ್ರಭುತ್ವದ ಅಡಿಯಲ್ಲಿ ಈ ರಾಜ್ಯದ ಕಾನೂನಿನ ಬಗ್ಗೆ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಬೇಕಿತ್ತು ಯಾವುದೂ ಆಗಿಲ್ಲ. ಮುಖ್ಯಮಂತ್ರಿಗಳು ಅನುಭವಿಗಳು ಇದ್ದಾರೆ. ಅವರ ನೇತೃತ್ವದಲ್ಲಿ ಸರಿಯಾಗಿ ನಡೆಸಬೇಕಿತ್ತು. ಹೀಗಾಗಿ ಉತ್ತರ ಕರ್ನಾಟಕದ ಜನರು ಭ್ರಮ ನಿರಸನಗೊಂಡಿದ್ದಾರೆ. ಪ್ರತಿಪಕ್ಷಗಳ ನಾಯಕರು ಹತ್ತು ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಜನರ ಮೇಲೆ ಲಾಠಿ ಚಾರ್ಜ್ ಆಗಿರುವ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಸರ್ಕಾರ ಪ್ರತಿಭಟನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
*ಆರ್ಥಿಕ ಸ್ಥಿತಿ ಗಂಭೀರ*
ಈ ಸರ್ಕಾರದ ಹಣಕಾಸಿನ ಸ್ಥಿತಿ ಬಹಳ ಗಂಭೀರವಾಗಿದೆ. ಈ ಸರ್ಕಾರ ಬಜೆಟ್‌ನಲ್ಲಿ ಸುಮಾರು 15 ಸಾವಿರ ಕೋಟಿ ರೂ. ಹೆಚ್ಚಿನ ತೆರಿಗೆ ಹಾಕಿದರು. ಈಗ ಬಜೆಟ್ ನಂತರ ಸುಮಾರು ಎಂಟು ಹತ್ತು ರೀತಿಯ ತೆರಿಗೆ ಹಾಕಿದ್ದಾರೆ. ಭೂಮಿ ಮೇಲೆ, ವಾಹನದ ಮೇಲೆ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಸುಮಾರು 40 ಸಾವಿರ ಕೋಟಿ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಈಗ ಪಶ್ಚಿಮ ಘಟ್ಟದ ನೀರಿಗೂ ತೆರಿಗೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಗಾಳಿಯೊಂದನ್ನು ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ. ಈ ಸರ್ಕಾರ ಮುಂದಿನ ದಿನಗಳಲ್ಲಿ ಗಾಳಿಗೂ ತೆರಿಗೆ ಹಾಕುವ ಸಾಧ್ಯತೆ ಇದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹಿಂದಿನ ಸರ್ಕಾರಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮುಖ್ಯಮಂತಿಗಳು ಈಗ ಉದ್ಘಾಟನೆ ಮಾಡುತ್ತಿದ್ದಾರೆ. ಕಲಬುರ್ಗಿಯಲ್ಲಿ ಹಿಂದಿನ ಸರ್ಕಾರಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ತೆಗೆದುಕೊಂಡ ನಿರ್ಣಯದಂತೆ ಈಗ ಉದ್ಘಾಟನೆ ಮಾಡಿ ತಮ್ಮ ಶೂರತ್ವ ತೋರಿಸುತ್ತದ್ದಾರೆ. ಹುಬ್ಬಳ್ಳಿಯಲ್ಲಿಯೂ ನಮ್ಮ ಅವಧಿಯಲ್ಲಿ ಜಯದೇವ ಹೃದ್ರೋಗ ಆಸತ್ರೆ ಸ್ಥಾಪನೆಗೆ ಅನುಮತಿ ನೀಡಿ ಸುಮಾರು ಎಪ್ಪತ್ತು ಎಂಭತ್ತು ಕೋಟಿ ರೂ. ನಾನು ಕೊಟ್ಟಿದ್ದೆ. ಬಾಕಿ ಇರುವ ಹಣವನ್ನು ನೀಡಿ ಆರು ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಜಯದೇವ ಕಟ್ಟಡವನ್ನು ಪೂರ್ತಿ ಮಾಡಿ, ಉತ್ತರ ಕರ್ನಾಟಕದ ಹೃದಯ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.














