ಇತ್ತೀಚಿನ ಸುದ್ದಿ
ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ರೆಡ್ ಕ್ರಾಸ್ ಗುರಿ: ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ ಹೊಸೂರು
01/06/2023, 22:46
ಮಂಗಳೂರು(Reporterkarnataka.com): ಜಗತ್ತಿನ ಎಲ್ಲರನ್ನೊಳಗೊಂಡ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ರೆಡ್ ಕ್ರಾಸ್ ಸಂಸ್ಥೆಯ ಗುರಿಯಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಗೋಪಾಲ ಬಿ.ಹೊಸೂರು ಹೇಳಿದರು.
ಅವರು ಗುರುವಾರ ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಘಟಕ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯವರೆಡ್‍ಕ್ರಾಸ್ ಯೆನೆಪೋಯ ವಿಶ್ವ ವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ನಗರದ ಹಂಪನಕಟ್ಟೆ ಮಂಗಳೂರು ವಿಶ್ವ ವಿದ್ಯಾನಿಲಯದ ರವೀಂದ್ರನಾಥ ಕಲಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ರೆಡ್ ಕ್ರಾಸ್ ದಿನದ ಸಮಾರಂಭದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರಿಗೆ ಪ್ರಶಸ್ತಿ ಪ್ರದಾನ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ರೆಡ್ ಕ್ರಾಸ್, ಎಲ್ಲರನ್ನೂ ಒಳಗೊಂಡ ಜಾತ್ಯತೀತ ನೆಲೆಯ ಸಂಸ್ಥೆ ಯಾಗಿದೆ. ಜಗತ್ತಿನ 200ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಘಟಕಗಳಿವೆ. ಉತ್ತಮ ನಾಯಕತ್ವ ಗುಣ, ಸಂಘಟನಾತ್ಮಕವಾಗಿ ಸಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೆಡ್ ಕ್ರಾಸ್‍ನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ. ಮಂಗಳೂರಿನ ಜನರ ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಗುಣ, ಉತ್ಕøಷ್ಟ ನಾಗರಿಕ ಮೌಲ್ಯಗಳನ್ನು ಕಾಣಬಹುದಾಗಿದೆ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡುತಾಗಿ ಮಾರಣಾಂತಿಕವಾಗಿ ಗಾಯಗೊಂಡ ಸಂದರ್ಭದಲ್ಲಿ ಮಂಗಳೂರು ಮೂಲದ ವೈದ್ಯ ಡಾ.ನಿತ್ಯಾನಂದ ಶೆಟ್ಟಿ ಚಿಕಿತ್ಸೆ ನೀಡಿ ನನ್ನ ಜೀವ ಉಳಿಸಿರುವುದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಮಾನವೀಯತೆಯ ಮನೆ. ವಿದ್ಯಾರ್ಥಿಗಳ ಬದುಕಿನಲ್ಲಿ ಸೇವಾ ಮನೋಭಾವ, ನೈತಿಕ ಮೌಲ್ಯಗಳನ್ನು, ಮಾನವೀಯತೆಯ ಜೊತೆ ಆತ್ಮ ಸಂತೋಷ ಮೈಗೂಡಿಸಿಕೊಳ್ಳಲು ಯೂತ್ ರೆಡ್ ಕ್ರಾಸ್ ಒಂದು ಮಾದರಿ ಸಂಸ್ಥೆ ಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಯೂತ್ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸಲು ಅತ್ಯುತ್ತಮ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಯೆನೆಪೋಯ ವಿ.ವಿ.ಯ ಕುಲಪತಿ ಪ್ರೊ.ವಿಜಯ ಕುಮಾರ್, ಮಂಗಳೂರು ವಿ.ವಿ.ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಸೂಯ ರೈ, ದ.ಕ ಜಿಲ್ಲಾ ರೆಡ್ ಕ್ರಾಸ್ ವಿಶೇಷ ಚೇತನ ಘಟಕದ ಮುಖ್ಯಸ್ಥ ಹಾಗೂ ವೆನ್ಲಾಕ್ ವೈದ್ಯ ಡಾ.ಕೆ.ಆರ್. ಕಾಮತ್, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರೆಡ್ ಕ್ರಾಸ್ ರಾಜ್ಯ ಘಟಕದ ಪ್ರತಿನಿಧಿ ಯತೀಶ್ ಬೈಕಂಪಾಡಿ, ದ.ಕ ಜಿಲ್ಲಾ ಘಟಕದ ಖಜಾಂಚಿ ಮೋಹನ್ ಶೆಟ್ಟಿ, ಮಂಗಳೂರು ವಿ.ವಿ. ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಘಟಕದ ಸಭಾಪತಿ ಸಿ.ಎ ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸಂಜಯ ಶೆಟ್ಟಿ ವಂದಿಸಿದರು. ಸಚೇತ ಸುವರ್ಣ, ನಿತ್ಯಶ್ರೀ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಿರೂಪಿಸಿದರು. ಅದ್ರಿಜಾ ಮತ್ತು ಜ್ಯೋತಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪೆÇ್ರ.ಪಿ.ಎಸ್. ಯಡಪಡಿತ್ತಾಯ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.