ಇತ್ತೀಚಿನ ಸುದ್ದಿ
ಕೊಡಕಾಲ ವೈದ್ಯನಾಥ ರಸ್ತೆಯ ನಾಮಫಲಕ ಅನಾವರಣ: ಶಾಸಕ ವೇದವ್ಯಾಸ ಕಾಮತ್ ಚಾಲನೆ
13/04/2025, 20:21

ಮಂಗಳೂರು(reporterkarnataka.com): ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಳಪೆ ಉತ್ತರ 51ನೇ ವಾರ್ಡಿನ ಕೊಡಕಾಲ ವೈದ್ಯನಾಥ ರಸ್ತೆಯ ಅಭಿವೃದ್ಧಿ ಸಹಿತ ರಸ್ತೆಗೆ “ಶ್ರೀ ವೈದ್ಯನಾಥ ರಸ್ತೆ” ಎಂಬ ಅಧಿಕೃತ ಹೆಸರಿನ ನಾಮಫಲಕವನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ನಗರದ ಅತ್ಯಂತ ಪುರಾತನ ದೈವಸ್ಥಾನಗಳಲ್ಲೊಂದಾದ ಕಣ್ಣೂರು ಅಳಪೆ ಪ್ರದೇಶದ ಕೊಡಕಾಲನ ವೈದ್ಯನಾಥ ದೈವಸ್ಥಾನಕ್ಕೆ ಹಾದು ಹೋಗುವ ರಸ್ತೆಯನ್ನು ಸ್ಥಳೀಯರ ಕೋರಿಕೆಯಂತೆ ಅಭಿವೃದ್ಧಿಪಡಿಸಿ ಉದ್ಘಾಟನೆಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಇಲ್ಲಿನ ಮುಖ್ಯ ರಸ್ತೆಯನ್ನು “ಶ್ರೀ ವೈದ್ಯನಾಥ ರಸ್ತೆ” ಎಂದು ಅಧಿಕೃತವಾಗಿ ನಾಮಕರಣಗೊಳಿಸಲಾಗುತ್ತಿದೆ. ಈ ಬಗ್ಗೆ ಇಲ್ಲಿನ ನಿಕಟ ಪೂರ್ವ ಪಾಲಿಕೆ ಸದಸ್ಯೆ ರೂಪಶ್ರೀ ಪೂಜಾರಿಯವರು ಪಾಲಿಕೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿ ಆ ಹೆಸರೇ ಅಧಿಕೃತವಾಗುವಂತೆ ನೋಡಿಕೊಂಡಿದ್ದಾರೆ. ಹಿಂದೆ ಇದನ್ನು ಅನಧಿಕೃತವಾಗಿ ಯೂಸುಫ್ ನಗರ ಎಂದು ಕರೆಯಲಾಗುತ್ತಿದ್ದ ಬಗ್ಗೆ ಅನೇಕರ ಗಮನಕ್ಕೆ ಬಂದಿತ್ತು. ಆದರೆ ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ ಆ ಹೆಸರು ಅಧಿಕೃತವಾಗಿ ಇರಲೇ ಇಲ್ಲ. ಇನ್ನು ಮೇಲಾದರೂ ಇಂದಿನಿಂದ ಅಧಿಕೃತವಾಗಿರುವ ಹೆಸರನ್ನೇ ಸ್ಥಳೀಯರು ಹೆಚ್ಚಾಗಿ ಬಳಸಿ, ಎಲ್ಲೆಡೆ ಅದೇ ಹೆಸರು ನಮೂದಾಗುವಂತೆ ನೋಡಿಕೊಳ್ಳಬೇಕು. ಇದಕ್ಕೆ ಗೂಗಲ್ ಮ್ಯಾಪ್ ನಂತಹ ತಂತ್ರಜ್ಞಾನದ ಸಹಾಯವನ್ನೂ ಪಡೆಯಿರಿ ಎಂದು ಶಾಸಕರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯನಾಥ ದೈವಸ್ಥಾನದ ಗುತ್ತು ಮನೆತನದ ಪ್ರಮುಖರು, ಸ್ಥಳೀಯ ಬಿಜೆಪಿ ಪ್ರಮುಖರಾದ ಪ್ರವೀಣ್ ನಿಡ್ಡೇಲ್, ಸುರೇಶ್ ಆಚಾರ್ಯ, ನರೇಶ್ ಸರಿಪಲ್ಲ, ಕೊಡಕಾಲ ಹಿಂದೂ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಬಿಜೆಪಿಯ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.