ಇತ್ತೀಚಿನ ಸುದ್ದಿ
ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್: ಖಾಸಗಿ ಬಸ್ ದರ ದಿಢೀರ್ ಏರಿಕೆ
17/03/2026, 20:58
ಬೆಂಗಳೂರು(reporterkarnataka.com): ಬೆಂಗಳೂರಿನಿಂದ ತಮ್ಮೂರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ದರ ಏರಿಕೆಯ ಬಿಸಿ ಮುಟ್ಟಿಸಿದ್ದಾರೆ. ಸಾಲು ಸಾಲು ರಜೆಗಳನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಸಾರಿಗೆ ಸಂಸ್ಥೆಗಳು, ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಿವೆ.
*ಗಗನಕ್ಕೇರಿದ ಟಿಕೆಟ್ ದರ: ಇಲ್ಲಿದೆ ದರ ಪಟ್ಟಿ*
ಸಾಮಾನ್ಯ ದಿನಗಳಲ್ಲಿ ಇರುತ್ತಿದ್ದ ದರಕ್ಕೂ, ಈಗಿನ ಹಬ್ಬದ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಮುಖ ನಗರಗಳಿಗೆ ಇರುವ ದರ ಏರಿಕೆಯ ಪಟ್ಟಿ ಹೀಗಿದೆ:
ಮಾರ್ಗ ಸಾಮಾನ್ಯ ದರ (ಅಂದಾಜು) ಹಬ್ಬದ ದರ (ಗರಿಷ್ಠ)
ಬೆಂಗಳೂರು – ಮಂಗಳೂರು ₹ 600 ₹ 2,999
ಬೆಂಗಳೂರು – ಹುಬ್ಬಳ್ಳಿ/ಧಾರವಾಡ ₹ 700 – 1,300 ₹ 4,500
ಬೆಂಗಳೂರು – ಶಿವಮೊಗ್ಗ ₹ 400 ₹ 2,799
ಬೆಂಗಳೂರು – ಧರ್ಮಸ್ಥಳ ₹ 500 ₹ 3,600
ಬೆಂಗಳೂರು – ಮೈಸೂರು ₹ 350 ₹ 2,500
ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಡೀಸೆಲ್ ದರ ಏರಿಕೆ ಮತ್ತು ಸರ್ಕಾರದ ತೆರಿಗೆ ಹೊರೆಯಿಂದಾಗಿ ಅನಿವಾರ್ಯವಾಗಿ ದರ ಹೆಚ್ಚಿಸಬೇಕಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮ ಇಂಧನ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದರ ಏರಿಕೆ ತೀರಾ ಹೆಚ್ಚೇನಿಲ್ಲ ಎಂದು ತಿಳಿಸಿದ್ದಾರೆ.
*ಕೆಎಸ್‌ಆರ್‌ಟಿಸಿಯಿಂದ 2,000 ಹೆಚ್ಚುವರಿ ಬಸ್‌ಗಳು*
ಖಾಸಗಿ ಬಸ್‌ಗಳ ದರ ಏರಿಕೆಯಿಂದ ಕಂಗಾಲಾದ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಿಗ್ ರಿಲೀಫ್ ನೀಡಿದೆ. ಮಾರ್ಚ್ 18, 19 ಮತ್ತು 20ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ 2,000 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಿದೆ.
*ಬಸ್‌ಗಳು ಹೊರಡುವ ಪ್ರಮುಖ ನಿಲ್ದಾಣಗಳು:*
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಬಸ್‌ಗಳು.
ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣ: ಮೈಸೂರು, ಕೊಡಗು, ಮಂಗಳೂರು ಭಾಗದ ಬಸ್‌ಗಳು.
ಶಾಂತಿನಗರ ಬಿಎಂಟಿಸಿ ನಿಲ್ದಾಣ: ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಭಾಗದ ಬಸ್‌ಗಳು.
ಗಮನಿಸಿ: ಪ್ರಯಾಣಿಕರು ಮುಂಚಿತವಾಗಿಯೇ ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಲು ಸೂಚಿಸಲಾಗಿದೆ. ಗರಿಷ್ಠ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆಗೆ ದೂರು ನೀಡುವ ಅವಕಾಶವೂ ಇದೆ.













