ಇತ್ತೀಚಿನ ಸುದ್ದಿ
ಉಡುಪಿ ಕೃಷ್ಣಾಪುರ ಶ್ರೀಗಳ ಭಾವೀ ಪರ್ಯಾಯ ಮಹೋತ್ಸವಕ್ಕೆ ಭಾರಿ ಸಿದ್ಧತೆ: ಕಟ್ಟಿಗೆ ಮುಹೂರ್ತ ಸಂಪನ್ನ
11/07/2021, 17:11
ಉಡುಪಿ(reporterkarnataka news): ಭಾವಿ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ನಡೆಯುವ ನಾಲ್ಕು ಪ್ರಮುಖ ವಿಧಿ ವಿಧಾನಗಳಲ್ಲೊಂದಾದ ಕಟ್ಟಿಗೆ ಮುಹೂರ್ತ ಭಾನುವಾರ ಭಕ್ತಿ ಸಡಗರದಿಂದ ಉಡುಪಿಯಲ್ಲಿ ನಡೆಯಿತು. ಅಷ್ಟ ಮಠದ ಯತಿಗಳು, ಪುರೋಹಿತರು, ವೈದಿಕರು ಉಪಸ್ಥಿತರಿದ್ದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯ ಮಹೋತ್ಸವ ಮುಂದಿನ ವರ್ಷ ಜನವರಿ 18ರಂದು ನಡೆಯಲಿದೆ.
ಅಷ್ಟ ಮಠಗಳ ಯತಿಗಳಲ್ಲಿ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಅತ್ಯಂತ ಹಿರಿಯವರಾಗಿದ್ದಾರೆ. ಅವರ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ ಭಾನುವಾರ ನಡೆಯಿತು. ಕಟ್ಟಿಗೆಯ ರಥವನ್ನೇ ಉಡುಪಿ ಮಠದ ಪರಿಸರದಲ್ಲಿ ನಿರ್ಮಿಸಲಾಗುತ್ತದೆ.
ಕೃಷ್ಣಾಪುರ ಮಠದ ಭಾವಿ ಪರ್ಯಾಯದ ಅಂಗವಾಗಿ ಕಳೆದ ಡಿಸೆಂಬರ್ 1ರಂದು ಕೃಷ್ಣಾಪುರ ಮಠದ ಪರಿಸರದಲ್ಲಿ ಬಾಳೆ ಮುಹೂರ್ತ ನಡೆದಿತ್ತು. ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ಅನ್ನದಾಸೋಹಕ್ಕೆ ಬಾಳೆ ಎಲೆ ಪೂರೈಕೆಯ ಸಂಕೇತವಾಗಿ ಬಾಳೆ ಮುಹೂರ್ತ ನಡೆಸಲಾಗುತ್ತದೆ. ಮಾರ್ಚ್ 17ರಂದು ಅಕ್ಕಿ ಮುಹೂರ್ತ ನಡೆದಿತ್ತು. ಪರ್ಯಾಯ ಮಹೋತ್ಸವಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಸಂಗ್ರಹಿಸಿಡುವ ಸಂಕೇತವಾಗಿ ಅಕ್ಕಿ ಮುಹೂರ್ತ ನಡೆಸಲಾಗುತ್ತದೆ.